ಬಿಎಸ್4ನೊಂದಿಗೆ ಕೊನೆಯಾದ ವಾಹನಗಳಿಗೊಂದು ಅಂತಿಮ ವಿದಾಯ

ಬಿಎಸ್‌6 ಎಂಜಿನ್‌ ಆಗಮನದೊಂದಿಗೆ ಬಿಎಸ್‌4 ಎಂಜಿನ್‌ ಹೊಂದಿದ್ದ ಹಲವು ಜನಪ್ರಿಯ ಕಾರುಗಳು ಮಾರುಕಟ್ಟೆಯಿಂದ ಹಿಂದೆ ಸರಿದಿವೆ. ವಿಶೇಷವಾಗಿ ಡೀಸಿಲ್‌ ಎಂಜಿನ್‌ ವಾಹನಗಳು ಕಣ್ಮರೆಯಾಗಲಿವೆ.

ಲಾಕ್‍ಡೌನ್ ನಡುವೆಯೇ ಬಿಎಸ್ 4 ಎಂಜಿನ್ನುಗಳಿಗೆ ಅದಾಗಲೇ ಎಪ್ರಿಲ್ 1 ರಿಂದ ತಾಂತ್ರಿಕವಾಗಿ ತೆರೆ ಬಿದ್ದಾಗಿದೆ. ಉದ್ಯಮದ ಕೋರಿಕೆ ಮೇರೆಗೆ ನ್ಯಾಯಾಲಯದ ಮಾತಿನಂತೆ ಲಾಕ್‍ಡೌನ್ ತರುವಾಯ ಒಂದು ವಾರ ಹೆಚ್ಚುವರಿ ಕಾಲಾವಕಾಶ ದೊರೆಯಲಿದೆಯಷ್ಟೆ. ಏನೇ ಆದರೂ ಬಿಎಸ್4 ತಂತ್ರಜ್ಞಾನ ತೆರೆಮರೆಗೆ ಸರಿಯಿತು ಎಂಬುದು ಕಣ್ಣಿಗೆ ಕಾಣುವಷ್ಟು ಸನಿಹದ ಇತಿಹಾಸ.

ಬಿಎಸ್‍6ಗೆ ಉನ್ನತೀಕರಿಸುವಾಗ ಹಲವು ತಾಂತ್ರಿಕ ಬದಲಾವಣೆಗಳಿಗೆ (ಬಿಎಸ್4/6 ವ್ಯತ್ಯಾಸಗಳ ಲೇಖನ ಹೈಪರ್ ಲಿಂಕ್ ) ಎಂಜಿನ್ನು ಒಳಗಾಗಬೇಕು. ಇದು ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಏರಿಸುತ್ತದೆ, ಸಣ್ಣ ಹಾಗೂ ಮಧ್ಯಮ ಗಾತ್ರದ ವಾಹನಗಳಲ್ಲಿ ಬಳಕೆಯಾಗುತ್ತಿದ್ದ ಅಂಥ ಪುಟ್ಟ ಡೀಸಿಲ್ ಎಂಜಿನ್‍ಗಳನ್ನು ಉನ್ನತೀಕರಿಸಿದಾಗ ಅಂತಿಮವಾಗಿ ವಾಹನದ ಬೆಲೆಯಲ್ಲಿ ಅದು ಸೇರಲೇಬೇಕು. ಆದರೆ ಸಣ್ಣ ಮತ್ತು ಮಧ್ಯಮ ಗಾತ್ರದ ವಾಹನಗಳಲ್ಲಿ ಹೆಚ್ಚುವರಿ ಬೆಲೆ ಸ್ಪರ್ಧಾತ್ಮಕ ವ್ಯಾಪ್ತಿಯ ಹೊರಗೆ ಬಂದು ಹೊರೆಯಾಗುವ ಕಾರಣ ಅದಕ್ಕೆ ಮಂಗಳ ಹಾಡಲು ತರ್ಕ ಹೇಳುತ್ತದೆ.

ಆ ಪ್ರಕಾರವಾಗಿ ನಮ್ಮಲ್ಲಿ ವಿವಿಧ ಕಂಪನಿಗಳ ಅತಿಹೆಚ್ಚು ವಾಹನಗಳಲ್ಲಿ ಬಳಕೆಯಾಗಿ ಭಾರತದ ರಾಷ್ಟ್ರೀಯ ಎಂಜಿನ್ ಎಂಬ ವಿಡಂಬನೆಗೆ ಒಳಗಾಗಿದ್ದ ಫಿಯೆಟ್‍ನ 1.3 ಮಟ್ಲಿಜೆಟ್ ಎಂಜಿನ್ ಅಸ್ತಂಗತವಾಗಿದೆ. ಇದಲ್ಲದೆ ಇನ್ನಿತರೆ ಡೀಸಿಲ್ ಎಂಜಿನ್ನುಗಳೂ ಈ ಪಟ್ಟಿಗೆ ಸೇರಿವೆ. ಆ ವಾಹನಗಳ ಸಿಂಹಾವಲೋಕನಕ್ಕೆ ಇದು ಸುಸಂದರ್ಭ

ಟೊಯೋಟಾ ಇತಿಯೋಸ್‍, ಲೀವಾ

ಮಾರಾಟದಲ್ಲಿ ಅತಿಹೆಚ್ಚು ಡೀಸಿಲ್ ಎಂಜಿನಿನ್ನ ಪಾಲೇ ಇದ್ದ ಕಾರಣದ ಜತೆಗೆ ಬದಲಾದ ಸುರಕ್ಷತಾ ನಿಯಮಗಳಿಗೂ ಹೊಂದಿಕೊಳ್ಳಲು ಕಷ್ಟವಾದ ಕಾರಣ ಟೊಯೋಟ ಇತಿಯೋಸ್ ಹಾಗೂ ಇತಿಯೋಸ್ ಲೀವಾದ ದಿನಗಳು ಕೊನೆಯಾಗಿವೆ. 68 ಪಿಎಸ್‍ ಶಕ್ತಿ ಸಾಮರ್ಥ್ಯದ ಡಿ4ಡಿ ಡೀಸಿಲ್ ಎಂಜಿನ್ ತನ್ನ ದೀರ್ಘ ಬಾಳಿಕೆಗೆ ಹೆಸರಾಗಿತ್ತು. ಇದೇ ಕಾರಣದಿಂದ ಟ್ಯಾಕ್ಸಿ ವಿಭಾಗದಲ್ಲಿ ಅತಿಹೆಚ್ಚು ಜನಪ್ರಿಯವಾಗಿತ್ತು. ಇದೀಗ ಇತಿಯೋಸ್ ಶ್ರೇಣಿಯನ್ನೇ ಸಂಪೂರ್ಣ ನಿಲ್ಲಿಸಲು ಟೊಯೋಟಾ ತೀರ್ಮಾನಿಸಿದೆ. ಅಂದಹಾಗೆ ಇದೇ ಎಂಜಿನ್ ಕೊರೋಲ್ಲ ಆಲ್ಟಿಸ್‍ನ ಡೀಸಿಲ್ ಅವತರಣಿಕೆಯಲ್ಲೂ ಬಳಕೆಯಾಗುತ್ತಿತ್ತು, ಆದರೆ ಕೊರೋಲ್ಲ ಆಲ್ಟಿಸ್ ಪೆಟ್ರೋಲ್ ಅವತಾರದಲ್ಲಿ ಮಾತ್ರವೇ ಮುಂದುವರಿಯಲಿದೆ.

ಫೋಕ್ಸ್‍ವ್ಯಾಗನ್ ವೆಂಟೋ

1.0ಲೀ ಟಿಇಸ್ಐ ಪೆಟ್ರೋಲ್ ಎಂಜಿನ್ ಆಗಮನ ವೆಂಟೋ, ಪೋಲೋ ಹಾಗೂ ಪೋಲೋ ಟಿಡಿಐಗೆ ಶಕ್ತಿ ನೀಡುತ್ತಿದ್ದ 1.5ಲೀ ಡೀಸಿಲ್ ಎಂಜಿನ್ನನ್ನು ಕೊನೆಗಾಣಿಸಿದೆ. 110 ಪಿಎಸ್ ಹಾಗೂ 175 ಎನ್‍ಎಂ ಟಾರ್ಕ್ ಸಾಮರ್ಥ್ಯದ ಹೊಸ ಪೆಟ್ರೋಲ್ ಎಂಜಿನ್ ಈ ಮೊದಲಿದ್ದ 1.2 ಲೀ ಟರ್ಬೋ ಮತ್ತು 1.6ಲೀ ಎಂಪಿಐ ಪೆಟ್ರೋಲ್ ಎಂಜಿನ್ನುಗಳ ತಯಾರಿಯನ್ನೂ ಕೊನೆಗಾಣಿಸಿದೆ.

ಮಾರುತಿ ಸುಝುಕಿ ಎಸ್‍ ಕ್ರಾಸ್

ಮಾರುತಿಯ ಪ್ರೀಮಿಯಂ ಶೋರೂಮ್‍ ನೆಕ್ಸಾಕ್ಕೆ ಕಾಲಿಟ್ಟ ಮೊದಲ ಕಾರು ಎಸ್‍ ಕ್ರಾಸ್. ಅಷ್ಟೇನೂ ಜನಪ್ರಿಯತೆ ಕಾಣದ 1.6 ಲೀ. ಪೆಟ್ರೋಲ್ ಎಂಜಿನ್ ಈ ಹಿಂದೆಯೇ ಕೊನೆ ಕಂಡು ಫಿಯೆಟ್ 1,3 ಎಂಜಿನ್‍ನೊಂದಿಗೆ ಮಾತ್ರ ಎಸ್‍ಕ್ರಾಸ್ ಮಾರಾಟವಾಗುತ್ತಿತ್ತು. ಈ ಎಂಜಿನ್‍ ಜಾಗದಲ್ಲಿ ಈಗ ಮಾರುತಿಯ ಸ್ವಂತ ನಿರ್ಮಾಣದ 1.5ಲೀ ಎಸ್‍ಎಚ್‍ವಿಎಸ್‍ ಪೆಟ್ರೋಲ್ ಎಂಜಿನ್ ಸದ್ಯದಲ್ಲೇ ಬರಲಿದೆ.

ಹ್ಯುಂಡೈ ಇಲೈಟ್ ಐ20

ಹ್ಯುಂಡೈ ಪಾಲಿಗೆ ಕಳೆದ ವರ್ಷ ಅತಿಹೆಚ್ಚು ಮಾರಾಟವಾದ ಕಾರು ಐ20. ಇದಕ್ಕೆ 2014ರಿಂದಲೂ ಜೀವ ತುಂಬುತ್ತಿದ್ದುದು 90 ಪಿಎಸ್ ಶಕ್ತಿ ಮತ್ತು 220 ಎನ್‍ಎಂ ಟಾರ್ಕ್ ಸಾಮರ್ಥ್ಯದ 1.4ಲೀ ಡೀಸಿಲ್ ಎಂಜಿನ್. ಬಿಎಸ್6 ನಿಯಮಗಳು ಇದಕ್ಕೂ ಇತಿಶ್ರೀ ಹಾಕಿದೆ. ಹೊಸ ಅವತಾರದಲ್ಲಿ ಇಲೈಟ್ ಐ20 ಬಹುತೇಕ ಸೆಪ್ಟೆಂಬರಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಹೊಸ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು ಜತೆಗೆ ಹ್ಯುಂಡೈನದ್ದೇ ಒಡೆತನದ ಕಿಯಾದ ಸೆಲ್ಟೋಸ್‍ನಲ್ಲಿ ಈಗಾಗಲೇ ಬಳಕೆಯಾಗುತ್ತಿರುವ 1.5ಲೀ ಡೀಸಿಲ್ ಎಂಜಿನ್ ಐ20ಗೂ ಜೀವ ತುಂಬಲಿದೆ.

ಸ್ಕೋಡಾ ‍ರ್ಯಾ‍‍ಪಿಡ್

ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಝೆಕ್ ಗಣರಾಜ್ಯ ಮೂಲದ ಸ್ಕೋಡಾಕ್ಕೂ ಜರ್ಮನಿ ಮೂಲದ ಫೋಕ್ಸ್‍ವ್ಯಾಗನ್‍ಗೂ ಭಾರಿ ಸಾಮ್ಯ. ಏಕೆಂದರೆ ಪ್ರಸ್ತುತ ಇವೆರಡೂ ಒಂದೇ ಒಡೆತನದಲ್ಲಿವೆ. ಹಾಗಾಗಿ ಫೋಕ್ಸ್‍ವ್ಯಾಗನ್ನಿನಲ್ಲಿ ಕಾಣುವ ಬದಲಾವಣೆಗಳು ಸ್ಕೋಡಾಕ್ಕೂ ವ್ಯಾಪಿಸುತ್ತದೆ. ಈ ಹಿಂದಿನ 1,5 ಲೀ ಟಿಡಿಐ ಡೀಸಿಲ್ ಜಾಗವನನ್ನು ನಿರೀಕ್ಷೆಯಂತೆಯೇ 1 ಲೀ ಪೆಟ್ರೋಲ್ ಎಂಜಿನ್ ತುಂಬಲಿದೆ.

ರೆನೋ ಡಸ್ಟರ್

ಡೀಸಿಲ್ ಅವತರಣಿಕೆಯಲ್ಲೇ ಹೆಚ್ಚು ಜನಪ್ರಿಯವಾಗಿದ್ದ ಮತ್ತೊಂದು ವಾಹನ ರೆನೋ ಡಸ್ಟರ್. ಕರೆವ ಹಸುವಿನಂತೆ ರೆನೋವನ್ನು ಭಾರತದಲ್ಲಿ ಸಲಹಿದ್ದು ಡಸ್ಟರ್, ರೆನೋ-ನಿಸ್ಸಾನ್‍ಗಳಿಗೆ ಬಹುಕಾಲ ಉಸಿರು ನೀಡುತ್ತಿದ್ದುದು 1.5 ಲೀ ಕೆ9ಕೆ ಡೀಸಿಲ್ ಎಂಜಿನ್. 85 ಮತ್ತು 110 ಪಿಎಸ್‍ ಶಕ್ತಿ ಸಾಮರ್ಥ್ಯದೊಂದಿಗೆ ಎರಡು ವಿಧದ ಟ್ಯೂನಿಂಗ್‍ನಲ್ಲಿ ಲಭ್ಯವಿದ್ದ ಡೀಸಿಲ್ ಎಂಜಿನ್ನಿಗೆ ಪರ್ಯಾಯ ಸದ್ಯಕ್ಕೆ ಇಲ್ಲ. ಬದಲಿಗೆ 153 ಪಿಎಸ್‍/250 ಎನ್‍ಎಂನ ಭರಪೂರ ಸಾಮರ್ಥ್ಯದ 1.3 ಟರ್ಬೋ ಪೆಟ್ರೋಲ್ ಎಂಜಿನ್ ಹೊಸ ಡಸ್ಟರಿನ ಹೃದಯವಾಗಲಿದೆ.

ಮಾರುತಿ ಸುಝುಕಿ ಸ್ವಿಫ್ಟ್, ಡಿಸೈರ್, ಬಲೆನೋ, ಬ್ರೆಝ್ಝಾ, ಎರ್ಟಿಗಾ

ರಾಷ್ಟ್ರೀಯ ಎಂಜಿನ್ನಿಂದ ಅತಿ ಹೆಚ್ಚು ಲಾಭ ಮಾಡಿಕೊಂಡದ್ದು ಮಾರುತಿ ಸುಝುಕಿ. ಇಂಧನ ಕ್ಷಮತೆ ಹಾಗೂ ಪುಟ್ಟ ಗಾತ್ರದ ಕಾರಣ ಮಾರುತಿಯ ಅಷ್ಟೂ ಸಣ್ಣ ಕಾರುಗಳಲ್ಲಿ ಹಾಗೂ ಸಿಯಾಝ್‍ನಂಥ ಲಕ್ಷುರಿ ಕಾರಿನಲ್ಲೂ ಉಸಿರಾಡುತ್ತಿದ್ದುದು ಅದೇ ಫಿಯೆಟ್ 1.3 ಮಲ್ಟಿಜೆಟ್. ಈಗ ಬದಲಾದ ಸನ್ನಿವೇಶದಲ್ಲಿ 1.2 ಮತ್ತು 1.5 ಪೆಟ್ರೋಲ್ ಎಂಜಿನ್ನುಗಳು ಕಾರ್ಯನಿರ್ವಹಿಸಲಿವೆ. ಈ ಎಂಜಿನ್ ಎರ್ಟಿಗಾ ಹಾಗೂ ಎಕ್ಸ್ ಎಲ್‍6ಗಳಲ್ಲಿ ಈಗಾಗಲೇ ಬಳಕೆಯಲ್ಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.