ಭಾರತದ ಗ್ರಾಹಕನ ಹೃದಯ ಗೆಲ್ಲಲು ನಡೆದಿದೆ ಗೂಗಲ್‌-ಅಮೆಜಾನ್‌ ಯುದ್ಧ

ಭಾರತ ಜಗತ್ತಿನ ಅತಿದೊಡ್ಡ ಮಾರುಕಟ್ಟೆ. ಪ್ರತಿಯೊಬ್ಬರು ಇಲ್ಲಿ ತಮ್ಮ ಶಾಖೆಯನ್ನು ತೆರೆದು ವ್ಯಾಪಾರ ಮಾಡಲು, ಲಾಭ ಗಳಿಸಲು ಯೋಚಿಸುತ್ತಾರೆ. ಸಣ್ಣ ಪುಟ್ಟ ಸಂಸ್ಥೆಗಳನ್ನು ಬಿಡಿ, ಈ ಸ್ಪರ್ಧೆಗೆ ಗೂಗಲ್‌, ಅಮೆಜಾನ್‌ ಇಳಿದಿವೆ

  • ಟೆಕ್‌ಟೀಮ್‌

ಗೂಗಲ್‌ ಎಲ್ಲ ರೀತಿಯಲ್ಲೂ ನಮ್ಮ ಬದುಕನ್ನು ಆವರಿಸಿಕೊಂಡಿದೆ. ನಮ್ಮ ದೈನಂದಿನ ಸಂವಹನದಲ್ಲಿ ಗೂಗಲ್‌ನ ಪಾತ್ರ ಅತಿ ದೊಡ್ಡದು. ನಾವು ಬಳಸುವ ಆಂಡ್ರಾಯ್ಡ್‌ ಫೋನ್‌, ಜಿಮೇಲ್‌, ಗೂಗಲ್‌ ಸರ್ಚ್‌ ಇಂಜಿನ್ ಇಲ್ಲದೆ ಒಂದು ದಿನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಆದರೆ ಗೂಗಲ್‌ ಇನ್ನು ಹಲವು ವಲಯಗಳಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ದಾಖಲಿಸುವ ಧಾವಂತದಲ್ಲಿದೆ. ಒಂದೆ ಆರ್ಟಿಫಿಶಿಯ್‌ ಇಂಟೆಲಿಜೆನ್ಸ್‌ನ ಅಭಿವೃದ್ಧಿಯಲ್ಲಿ ಸಕ್ರಿಯವಾಗಿದೆ. ಹಾಗೆಯೇ ಈ ಕಾರ್ಮಸ್‌ನಲ್ಲೂ ತನ್ನ ಪಾಲನ್ನು ಪಡೆಯಬೇಕೆಂಬ ಉತ್ಸಾಹದಲ್ಲೂ ಇದೆ.
ಈಗಾಗಲೇ ಜಗತ್ತಿನಾದ್ಯಂತ ತನ್ನ ಹೆಸರು ಗಟ್ಟಿಮಾಡಿಕೊಂಡಿರುವ ಅಮೆಜಾನ್‌ ಜಗತ್ತಿನ ಎಲ್ಲ ಪ್ರಮುಖ ದೇಶಗಳಲ್ಲೂ ಈ ಕಾಮರ್ಸ್‌ ಮೂಲಕ ತನ್ನ ಗಳಿಕೆಯನ್ನು ಹೆಚ್ಚು ಮಾಡಿಕೊಂಡಿದೆ. ಕಳೆದ ಫೆಬ್ರವರಿಯ ವರದಿಯ ಪ್ರಕಾರ ಜಗತ್ತಿನ ಹೆಚ್ಚು ವಹಿವಾಟು ನಡೆಸುತ್ತಿರುವ ಟೆಕ್ ಕಂಪನಿಗಳ ಸಾಲಿನಲ್ಲಿ ಮೊದಲು ಆಪಲ್‌ ಕಂಪನಿಯಿದ್ದರೆ, ನಂತರದ ಸ್ಥಾನದಲ್ಲಿ ಅಮೆಜಾನ್‌.


ಜಗತ್ತಿನಾದ್ಯಂತ ತನ್ನ ವಹಿವಾಟು ಜಾಲ ವಿಸ್ತರಿಸುವ ಅಮೆಜಾನ್‌ಗೆ ಈಗ ಗೂಗಲ್‌ ಸಡ್ಡು ಹೊಡೆಯುತ್ತಿದೆ. ಭಾರತ ಹೊರತು ಪಡಿಸಿದರೆ ಚೀನಾ ಅತಿ ದೊಡ್ಡ ಗ್ರಾಹಕ ಮಾರುಕಟ್ಟೆ. ಆದರೆ ಅಲ್ಲಿ ಅಮೆರಿಕದ ಕಂಪನಿಗಳಿಗೆ ಜಾಗವಿಲ್ಲ. ಗೂಗಲ್‌ ಎಂಟು ವರ್ಷಗಳ ಹಿಂದೆಯೇ ಚೀನಾದಿಂದ ಆಚೆ ಬಂದಿತು. ಅಮೆಜಾನ್‌ ಕೇವಲ ಶೇ.೧ರಷ್ಟು ಪಾಲನ್ನು ಹೊಂದಿದೆ.


ಈಗ ಎರಡೂ ಕಂಪನಿಗಳ ಕಣ್ಣು ಭಾರತದ ಮೇಲೆ ಬಿದ್ದಿದೆ. ವಾಸ್ತವದಲ್ಲಿ ಅಮೆಜಾನ್‌ ಮತ್ತು ಗೂಗಲ್‌ ೨೦೦೪ರಲ್ಲೇ ಭಾರತದಲ್ಲಿ ತಮ್ಮ ಸಂಶೋಧನಾ ಘಟಕಗಳನ್ನು ತೆರದಿದ್ದವು. ಆದರೆ ಮಾರುಕಟ್ಟೆಯ ದೃಷ್ಟಿಯಿಂದ ಯಾವುದೇ ಸಾಹಸಕ್ಕೆ ಕೈ ಹಾಕಿರಲಿಲ್ಲ.


ಅತಿ ಹೆಚ್ಚು ಮೊಬೈಲ್‌ ಬಳಕೆದಾರರಿರುವ ದೇಶವಿದು. ಈ ವರ್ಷದ ಜೂನ್‌ ಹೊತ್ತಿಗೆ 53.8 ಕೋಟಿ ಮೊಬೈಲ್‌ಗಳು ಭಾರತದಲ್ಲಿ ಬಳಕೆಯಲ್ಲಿರುತ್ತವೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಜಗತ್ತಿನ ಮೂರನೇ ಅತಿದೊಡ್ಡ ಗ್ರಾಹಕ ಮಾರುಕಟ್ಟೆಯಾಗಲಿರುವ ದೇಶ ಭಾರತ. ಇದನ್ನು ಅರಿತಿರುವ ಈ ಎರಡೂ ದೈತ್ಯ ಟೆಕ್‌ ಕಂಪನಿಗಳು ತಮ್ಮ ತೆಕ್ಕೆಗೆಳೆದುಕೊಳ್ಳುವ ಸ್ಪರ್ಧೆಗೆ ಇಳಿದಿವೆ.


ಅಮೆಜಾನ್‌ ಈಗಾಗಲೇ ತನ್ನ ಛಾಪು ಮೂಡಿಸಿದ ತನ್ನದೇ ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿದೆ. ” ಭಾರತದ ಮಟ್ಟಿಗೆ ಈ ಕಾರ್ಮಸ್‌ ಇನ್ನು ಮೊದಲ ದಿನದ ಹಂತದಲ್ಲಿದೆ. ಆದರೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹೊಸ ತಂತ್ರಜ್ಞಾನ, ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಯಥೇಚ್ಛವಾಗಿ ಹಣ ಹೂಡುತ್ತೇವೆ. ಗ್ರಾಹಕರಿಗೂ ಮತ್ತು ಸಣ್ಣ-ಮಧ್ಯಮ ಗಾತ್ರದ ಉದ್ಯಮಗಳಿಗೂ ಅನುಕೂಲವಾಗುವಂತೆ ಹೊಸ ಮಾರ್ಗಗಳನ್ನು ಹುಡುಕುತ್ತೇವೆ” ಎಂದು ಅಮೆಜಾನ್‌ ಸಿಇಒ ಜೆಫ್‌ ಬೆಜೋಸ್‌ ಹೇಳಿದ್ದಾರೆ.


ಭಾರತಕ್ಕೆ ಕಾಲಿಟ್ಟ ಅತ್ಯಲ್ಪ ಕಾಲದಲ್ಲಿ ಯಶಸ್ಸನ್ನು ಕಂಡ ಜೆಫ್‌, ಅಮೆಜಾನ್‌ ಸೇವೆಯನ್ನು ಭಾರತದಲ್ಲಿ ಹೆಚ್ಚು ಹೆಚ್ಚು ಸಮರ್ಥಗೊಳಿಸುವುದಕ್ಕೆ ಹಣ ಹೂಡುತ್ತಲೇ ಇದ್ದಾರೆ. ತಂತ್ರಜ್ಞಾನ ಅಭಿವೃದ್ಧಿಯಲ್ಲಷ್ಟೇ ಮುಳುಗಿದ್ದ ಗೂಗಲ್‌ ಗೃಹೋಪಯೋಗಿ ಸೇವೆಗಳನ್ನು ನೀಡಲು ಮುಂದಾದ ಮೇಲೆ ಮಾರುಕಟ್ಟೆಯ ಬಗ್ಗೆ ಹೆಚ್ಚು ಗಮನಹರಿಸಲಾರಂಭಿಸಿತು. ತಡವಾಗಿಯಾದರೂ ಸರಿ, ಅಮೆಜಾನ್‌ಗೆ ಸಡ್ಡು ಹೊಡೆದು ನಿಂತಿದೆ.


ಏನೇನು ಸೇವೆಗಳು ಕೊಡುತ್ತಿವೆ? ಅಮೆಜಾನ್‌ ಪೇ ಹಣಕಾಸಿನ ವಹಿವಾಟಿಗೆಂದೇ ಬಿಡುಗಡೆಯಾದ ಆ್ಯಪ್. ಆದರೆ ಈ ಕ್ಷೇತ್ರದಲ್ಲಿ ಗೂಗಲ್‌ ತನ್ನ ತೇಜ್‌ ಆ್ಯಪ್‌ನೊಂದಿಗೆ ತನ್ನದೇ ಆದ ಬಳಕೆದಾರರನ್ನು ಗಳಿಸಿಕೊಂಡಿದೆ. ಪ್ರಸ್ತುತ ೧೨ ಲಕ್ಷ ತೇಜ್‌ ಬಳಕೆದಾರರು ಭಾರತದಲ್ಲಿದ್ದಾರೆ. ಅಮೆಜಾನ್‌ ವೆಬ್‌ ಸರ್ವಿಸಸ್‌ ಹೆಸರಿನಲ್ಲಿ ಕ್ಲೌಡ್ ಸೇವೆಯನ್ನು, ಗೂಗಲ್‌ ತನ್ನದೇ ಕ್ಲೌಡ್‌ ಸೇವೆಯನ್ನು ಒದಗಿಸುತ್ತಿದೆ. ಆನ್‌ ಲೈನ್‌ ಜಾಹೀರಾತು, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನ ಬಳಸಿದ ಅಸಿಸ್ಟಂಟ್‌ಗಳು, ಕಿಂಡಲ್‌ ಮತ್ತು ಗೂಗಲ್‌ ಫ್ಯಾಬ್ಲೆಟ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಗುರುತು ಮೂಡಿಸುವುದಕ್ಕೆ ಪ್ರಯತ್ನಿಸುತ್ತಿವೆ.

ಇದನ್ನೂ ಓದಿ | ಅಮೆರಿಕ, ಚೀನಾ ಎಂಬ ಡಿಜಿಟಲ್ ಜಗತ್ತಿನ ಮುಂದೆ ಭಾರತ ಒಂದು ಸಣ್ಣ ಕಾಲೋನಿ


ಅಮೆಜಾನ್‌ ಹಲವು ಭಾರತೀಯ ಸ್ಟಾರ್ಟಪ್‌ಗಳಲ್ಲಿ ಹಣವನ್ನು ಹೂಡುವ ಮೂಲಕ ಭಾರತದ ಗ್ರಾಹಕರನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದೆ. ಶಾಪರ್‌ ಸ್ಟಾಪ್‌, ವೆಸ್ಟ್‌ಲ್ಯಾಂಡ್‌, ಕ್ವಿಕ್‌ ಸಿಲ್ವರ್‌, ಎಮ್‌ವಾಂಟೇಜ್‌, ಹೌಸ್‌ಜಾಯ್‌, ಬ್ಯಾಂಕ್‌ ಬಜಾರ್‌ಗಳಲ್ಲಿ ಮಿಲಿಯಗಟ್ಟಲೆ ಹಣ ಹೂಡಿದೆ. ಗೂಗಲ್‌ ಕೂಡ ಫಿಂಡ್‌, ಡಂಜೋ, ಹ್ಯಾಲಿ ಲ್ಯಾಬ್ಸ್‌, ಪ್ರಾಕ್ಟೊ, ಕ್ಯು ಲರ್ನ್‌, ಕಾರ್‌ದೇಖೋ, ಫ್ರೆಶ್‌ ಡೆಸ್ಕ್‌, ಕಾಮನ್‌ ಫ್ಲೋರ್‌ ಹೆಸರಿನ ಭಾರತೀಯ ಸ್ಟಾರ್ಟಪ್‌ಗಳಲ್ಲಿ ಸಾಕಷ್ಟು ಹಣ ಹೂಡುತ್ತಿದೆ. ತಮ್ಮ ಸೇವೆಯನ್ನು ಪ್ರಾದೇಶಿಕ ಗ್ರಾಹಕರಿಗೆ ತಕ್ಕಂತೆ ಒದಗಿಸುವುದಕ್ಕೂ ಸಿದ್ಧವಾಗುತ್ತಿದೆ. ಉದಾಹರಣಗೆ ಅಮೆಜಾನ್‌ನ ಆರ್ಟಿಫಿಶಿಯಲ್‌ ಅಸಿಸ್ಟಂಟ್‌ ಆದ ಅಲೆಕ್ಸಾವನ್ನು ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿದೆ.


ಎರಡು ದೈತ್ಯ ಕಂಪನಿಗಳ ಈ ಸ್ಪರ್ಧೆ, ಭಾರತೀಯ ಕಿರು ಉದ್ಯಮಗಳಿಗೆ ಶಕ್ತಿ ತುಂಬುವ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿರೀಕ್ಷೆಯನ್ನಂತು ಹುಟ್ಟಿಸಿವೆ.