ಆಧುನಿಕತೆಯನ್ನು ವಿರೋಧಿಸಿದ ಮಹಾತ್ಮಗಾಂಧಿ ಸ್ವಾವಲಂಬನೆಯ ಸರಳ ಜೀವನವನ್ನು ಗಟ್ಟಿಯಾಗಿ ಪ್ರತಿಪಾದಿಸಿದರು. ಈ ಮೂಲತತ್ವದಡಿಯಲ್ಲೇ ನಮ್ಮ ಜೀವನದಲ್ಲಿ ಮಾಡಬಹುದಾದ ಏಳು ಸಾಮಾಜಿಕ ಪಾಪಗಳನ್ನು ಗುರುತಿಸಿದ್ದರು. ಅವುಗಳಲ್ಲಿ ವಿಜ್ಞಾನವೂ ಒಂದು! ಹಾಗೆಂದರೆ ವಿಜ್ಞಾನದ ಬಗ್ಗೆ ಅವರಿಗೆ ವಿರೋಧವಿತ್ತೆ? ತಂತ್ರಜ್ಞಾನವನ್ನು ಒಪ್ಪಕೊಳ್ಳಲೇ ಇಲ್ಲವೆ? ಗಾಂಧೀಜಿ 150ನೇ ಜನ್ಮ ದಿನ ಆಚರಿಸುತ್ತಿರುವ ಈ ಹೊತ್ತಿನಲ್ಲಿ ವಿಜ್ಞಾನ-ತಂತ್ರಜ್ಞಾನ ಕುರಿತು ಅವರ ಸ್ಪಷ್ಟ ನಿಲುವನ್ನು ಅರಿಯುವ ಪ್ರಯತ್ನ ಇಲ್ಲಿದೆ

ಪ್ರಶ್ನೆ: ನೀವು ಯಂತ್ರಗಳನ್ನು ವಿರೋಧಿಸುತ್ತೀರಾ?
ಗಾಂಧಿ: ಇಲ್ಲ, ನನ್ನ ದೇಹವೇ ಒಂದು ಸೂಕ್ಷ್ಮವಾದ ಯಂತ್ರವಾಗಿರುವಾಗ, ನಾನು ಹೇಗೆ ಯಂತ್ರವನ್ನು ನಿರಾಕರಿಸಲಿ? ನಾನು ತಿರುಗಿಸುವ ಚಕ್ರ ಅಥವಾ ನಾನು ಬಳಸುವ ಟೂತ್ ಪಿಕ್ ಕೂಡ ಯಂತ್ರವೇ. ನಾನು ಯಂತ್ರಗಳನ್ನು ವಿರೋಧಿಸುತ್ತಿಲ್ಲ, ಆದರೆ ಯಂತ್ರಗಳ ಬಗ್ಗೆ ಹುಟ್ಟಿರುವ ಸೆಳೆತವನ್ನು ವಿರೋಧಿಸುತ್ತಿದ್ದೇನೆ. ಮನುಷ್ಯನ ಶಕ್ತಿಯನ್ನು ಕುಂದಿಸುತ್ತಿರುವ ಯಂತ್ರಗಳ ಬಗೆಗಿನ ಹುಚ್ಚು ಸೆಳೆತವನ್ನು ವಿರೋಧಿಸುತ್ತೇನೆ. ಕೆಲವರು ಮನುಷ್ಯನ ಶಕ್ತಿಯನ್ನು ಉಳಿಸುವ ಕುರಿತು ಮಾತನಾಡುತ್ತಾರೆ. ಆದರೆ ಈ ಪ್ರಯತ್ನದಲ್ಲಿ ಸಾವಿರಾರು ಮಂದಿ ಉದ್ಯೋಗವಿಲ್ಲದ ಬೀದಿಪಾಲಾಗುತ್ತಾರೆ. ಹೌದು, ನನಗೂ ಮನುಷ್ಯ ಶ್ರಮ ಮತ್ತು ಸಮಯ ಉಳಿಯಬೇಕೆಂದು ಬಯಸುತ್ತೇನೆ. ಆದರೆ ಅದು ಒಂದು ವರ್ಗದ ಪಾಲಾಗಬಾರದು, ಅದು ಇಡೀ ಮನುಕುಲಕ್ಕೆ ಸಿಗಬೇಕು. ಸಿರಿತನ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಸಂಗ್ರಹವಾಗಬಾರದು, ಜಗತ್ತಿನಲ್ಲಿರುವ ಎಲ್ಲರಿಗೂ ಸಿಗಬೇಕು. ಇವತ್ತು ಯಂತ್ರಗಳ ಮೇಲೆ ಪ್ರೀತಿ ಕೆಲವು ಜನರನ್ನು ಮಾತ್ರ ದೊಡ್ಡವರನ್ನಾಗಿ ಮಾಡಿದೆ”
ಆಧುನಿಕತೆಯನ್ನು ವಿರೋಧಿಸುತ್ತಿದ್ದ ಗಾಂಧೀಜಿ ವಿಜ್ಞಾನವನ್ನು ಒಪ್ಪಿಕೊಂಡಿರಲಿಕ್ಕಿಲ್ಲ ಎಂಬ ಸರಳ ಗ್ರಹಿಕೆಯಿಂದಾಗಿ ಅವರನ್ನು ವಿಜ್ಞಾನ ವಿರೋಧಿ ಎಂದು ಭಾವಿಸಿದ್ದೇ ಹೆಚ್ಚು. ಅವರು ಪ್ರತಿಪಾದಿಸಿದ ಏಳು ಸಾಮಾಜಿಕ ಪಾಪಗಳಲ್ಲಿ ವಿಜ್ಞಾನ ಐದನೆಯದ್ದು. ಪಾಪ ಎಂದು ಹೇಳಿರುವ ಕಾರಣಕ್ಕೆ ಅದನ್ನು ನಿರಾಕರಿಸಿದರು ಎಂದಲ್ಲವಲ್ಲ. ಗಾಂಧೀಜಿ ಹೇಳಿದ್ದು ಮಾನವೀಯತೆ ಇಲ್ಲದ ವಿಜ್ಞಾನ ಪಾಪ ಎಂದು. ಪ್ರತಿಯೊಂದು ಕ್ರಿಯೆ ಮತ್ತು ಆಲೋಚನೆಯಲ್ಲಿ ಮನುಕುಲದ ಒಳಿತನ್ನು ನೋಡಿದ, ಪ್ರತಿಪಾದಿಸಿದ ಗಾಂಧೀಜಿ, ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಅದೇ ತಕ್ಕಡಿಯಲ್ಲಿ ನೋಡಿದವರು.
ಗಾಂಧೀಜಿಯವರಿಗೆ ತಕರಾರು ಇದ್ದದ್ದು ಯಂತ್ರಗಳು ಬರುವುದರ ಬಗ್ಗೆ ಅಲ್ಲ, ಆದರೆ ಅವುಗಳಿಂದ ಸೃಷ್ಟಿಯಾಗುವ ಅಸಮಾನತೆಯ ಬಗ್ಗೆ. ಹಾಗಾಗಿ ಅವರ ಟೀಕೆಗಳ ಹಿಂದೆ ಕಾರಣಗಳಿದ್ದವು. ಗಾಂಧಿ ವಿಜ್ಞಾನವನ್ನಾಗಲಿ, ತಂತ್ರಜ್ಞಾನವನ್ನಾಗಲಿ ವಿರೋಧಿಸುವುದಕ್ಕೆ ಕಾರಣ, ಅತಾರ್ಕಿಕವಾದ, ಮೌಲ್ಯರಹಿತವಾದ ಅನುಕರಣೆ. ಇದೇ ಕಾರಣಕ್ಕೆ ಮಾನವೀಯತೆ ಇಲ್ಲದ ವಿಜ್ಞಾನ, ಪಾಪ ಎಂದು ವಿಶ್ಲೇಷಿಸಿದ್ದರು. ನೆಹರೂ ಕೈಗಾರಿಕೆಗಳು ನಾಗರಿಕತೆಯ ವಿಕಾಸ ಎಂದಾಗ, ಅದನ್ನು ತೀಕ್ಷ್ಣವಾಗಿ ವಿರೋಧಿಸಿ ಎಚ್ಚರಿಸಿದ್ದರು.
ಹಿಂದ್ ಸ್ವರಾಜ್‌ನಲ್ಲಿ ನಾಗರಿಕತೆ ಕುರಿತು ಉತ್ತರಿಸುತ್ತಾ, ಅವರು ಹೇಳಿದ ಮಾತುಗಳು ಭವಿಷ್ಯ ನುಡಿದಂತೆ ಇವೆ. ಅವು ಹೀಗಿವೆ: ಮನುಷ್ಯ ತಮ್ಮ ಕೈ-ಕಾಲುಗಳನ್ನು ಬಳಸಬೇಕಾಗಿ ಬರುವುದಿಲ್ಲಲ. ಒಂದು ಬಟನ್ ಒತ್ತಿದರೆ, ತೊಡಬೇಕಾದ ಉಡುಪು ತಮ್ಮಲ್ಲಿಗೆ ಬರುತ್ತದೆ. ಇನ್ನೊಂದು ಬಟನ್ ಒತ್ತಿದರೆ ನ್ಯೂಸ್ ಪೇಪರ್ ಅವರ ಮುಂದೆ ಪ್ರತ್ಯಕ್ಷ. ಮೂರನೆಯ ಬಟನ್ ಒತ್ತಿದರೆ, ಕಾರು ಅವರಿಗಾಗಿ ಕಾಯುರತ್ತಿರುತ್ತದೆ. ರುಚಿರುಚಿಯಾದ ತಿನಿಸುಗಳು ಅವರೆದುರು ಬರುತ್ತವೆ.”
ಆನ್‌ಲೈನ್ ಶಾಪಿಂಗ್, ಒಲಾ ಊಬರ್, ಝೋಮೆಟೊಗಳನ್ನು ಬಳಸುತ್ತಿರುವ ಈ ಕಾಲದಲ್ಲಿ ಗಾಂಧಿ ಮಾತುಗಳು ಭವಿಷ್ಯ ನುಡಿದಂತೆ ಕೇಳಿಸಿದರೆ ಅಚ್ಚರಿಯಾಗಬೇಕಿಲ್ಲ! ಗಾಂಧೀಜಿ ಈ ಮಾತುಗಳನ್ನು ಆಡಿದ್ದು 1909ರ ಸುಮಾರಿನಲ್ಲಿ. ತಂತ್ರಜ್ಞಾನ ಅಷ್ಟರ ಮಟ್ಟಿಗೆ ಅಸಾಧ್ಯಗಳನ್ನು ಸಾಧ್ಯವಾಗಿಸುವಷ್ಟು ಶಕ್ತಿಶಾಲಿಯಾಗಿ ಬೆಳೆದಿದೆ. ಹಾಗೇ ಅಸಮಾನತೆ, ಪ್ರಜಾಪ್ರಭುತ್ವ ವಿರೋಧಿ, ಜೀವವಿರೋಧಿಯಾಗಿಯೂ ಬೆಳೆದು ನಿಂತಿದೆ. ಇದೇ ಆತಂಕದ ನೆಲೆಯಲ್ಲಿ ಗಾಂಧಿ ತಂತ್ರಜ್ಞಾನವನ್ನು, ಕೈಗಾರಿಕೆಗಳನ್ನು ನೋಡಿದ್ದು. ಇವೆಲ್ಲವೂ ವಿಜ್ಞಾನದ ಶಾಖೆಗಳು ಎಂಬ ಕಾರಣಕ್ಕೆ ವಿಜ್ಞಾನಕ್ಕೆ ತರ್ಕಿಸಿದ್ದು.
1929ರ ಆಗಸ್ಟ್‌ನಲ್ಲಿ ಎಸ್ತರ್ ಮೆನನ್‌ಗೆ ಬರೆದ ಪತ್ರವೊಂದರಲ್ಲಿ, ಟೈಪ್ ರೈಟರ್ ಬಳಸದೇ ಇರುವುದಕ್ಕೆ ಕಾರಣ ಕೊಡುತ್ತಾರೆ. ಒಂದು ವೇಳೆ ಅದು ಕಳುವಾದರೆ, ನಾನು ಕಣ್ಣೀರು ಹಾಕುವ ಸ್ಥಿತಿ ತಲುಪಬಾರದು ಎಂದು ಹೇಳುತ್ತಾರೆ. ರೈಲುಗಳನ್ನು ದುಷ್ಟ ಶಕ್ತಿಗಳು ಎಂದು ಕರೆಯುತ್ತಾರೆ. ಕೈಗಾರಿಕೆಗಳನ್ನು ದೂಷಿಸುತ್ತಾರೆ. ಆಧುನಿಕ ವೈದ್ಯ ಪದ್ಧತಿಯನ್ನು ಅನುಮಾನಿಸುತ್ತಾರೆ. ಆಧುನಿಕ ಉಪಕರಣ, ಸಾಧನಗಳು ಬಗ್ಗೆಯೂ ಅವರ ತಕರಾರನ್ನು ಹೊರಹಾಕುತ್ತಾರೆ.
ಆದರೆ ಗಾಂಧಿ ತಮ್ಮ ಬದುಕಿನಲ್ಲಿ ವಿಜ್ಞಾನ -ತಂತ್ರಜ್ಞಾನಗಳೆರಡನ್ನು ಒಪ್ಪಿಕೊಂಡ ಉದಾಹರಣೆಗಳೂ ಇವೆ. ಹೋರಾಟದ ಸಭೆಗಳಲ್ಲಿ ಲೌಡ್ ಸ್ಪೀಕರ್‌ಗಳನ್ನು ಬಳಸಿದ ಮೊದಲ ವ್ಯಕ್ತಿ ಮಹಾತ್ಮ ಗಾಂಧಿ! ಟೆಲಿಫೋನ್‌ಗಳನ್ನು ಅವರು ಬಳಸುತ್ತಿದ್ದರು ಎಂಬುದನ್ನು ನಾವು ಬಲ್ಲೆವು. ದೇಶದ ಉದ್ದಗಲಕ್ಕೂ ತಲುಪಲು ಅವರು ಅವಲಂಬಿಸಿದ್ದು ರೈಲುಗಳನ್ನೇ. ಅಷ್ಟೇ ಅಲ್ಲ ಹೊಲಿಗೆ ಯಂತ್ರವನ್ನು ಹಾಡಿ ಹೊಗಳಿದರು ಎಂಬುದನ್ನು ನೀವು ನಂಬಬೇಕು!
ಚರಕದ ಜನಪ್ರಿಯತೆ ಕಡಿಮೆಯಾಗುತ್ತಿದ್ದ ದಿನಗಳಲ್ಲಿ ಚರಕದಂತೆ ಕೆಲಸ ಮಾಡುವ ಯಂತ್ರವೊಂದನ್ನು ರೂಪಿಸುವುದಕ್ಕೆ ಸ್ಪರ್ಧೆಯನ್ನು ಆಯೋಜಿಸುತ್ತಾರೆ. ಅದಕ್ಕೆ ಕೆಲವು ನಿಯಮಗಳನ್ನು ವಿಧಿಸುತ್ತಾರೆ. ಹಗುರವಾಗಿರಬೇಕು, ಕೈ ಅಥವಾ ಕಾಲುಗಳಿಂದ ಕೆಲಸ ಮಾಡುವಂತಿರಬೇಕು. ದಿನಕ್ಕೆ ಎಂಟು ಗಂಟೆಗಳ ಕಾಲ ಕೆಲಸ ಮಾಡಬಲ್ಲಷ್ಟು ಸಮರ್ಥವಾಗಿರಬೇಕು. 150 ರೂ.ಗಳಿಗೆ ಹೆಚ್ಚು ವೆಚ್ಚ ತಗುಲದಂತಿರಬೇಕು. ಹೀಗೆ 1929ರ ಜುಲೈ ತಿಂಗಳಲ್ಲಿ ಸ್ಪರ್ಧೆ ಘೋಷಣೆಯಾಗುತ್ತದೆ. ವಿಜೇತ ಮಾದರಿಗೆ ಒಂದು ಲಕ್ಷ ರೂ. ಬಹುಮಾನವನ್ನೂ ಘೋಷಿಸಿದ್ದರು. ತಾಂತ್ರಿಕ-ಯಾಂತ್ರಿಕ ಸಾಧನಗಳ ಬಗ್ಗೆ ಸಹಜ ಕುತೂಹಲಿಯಾಗಿದ್ದ ಅವರು, ಹಡಗಿನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾ, ಮೋಟಾರ್ ರೂಮಿಗೆ ಹೋಗಿ ಪ್ರೊಪೆಲ್ಲರ್ ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿಯಲು ಯತ್ನಿಸಿದ್ದರು. ಪ್ರಿಟಿಂಗ್ ಮಷೀನ್‌ಗಳನ್ನು ಹೋರಾಟದ ಭಾಗವಾಗಿ ಬಳಸಿದರು.
ಇದನ್ನು ನಾವು ಗಾಂಧೀಜಿ ಅವರ ಎರಡು ಮುಖ, ಇಬ್ಬಂದಿತನ, ವೈರುಧ್ಯ ಎಂದು ವ್ಯಾಖ್ಯಾನಿಸುವಷ್ಟು ಕ್ಷುಲ್ಲಕವಾಗಿಸಬಾರದು. ಬದಲಿಗೆ ಗಾಂಧೀಜಿಗೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ಸ್ಪಷ್ಟತೆಯನ್ನು ನಾವು ಗ್ರಹಿಸುವ ಯತ್ನ ಮಾಡಬೇಕು. ಗಾಂಧೀಜಿಗೆ ಆಧುನಿಕತೆಯ ವಿರೋಧವಿರಲಿಲ್ಲ. ಆದರೆ ಕುರುಡು ಅನುಕರಣೆಯ ಬಗ್ಗೆ ಆತಂಕವಿತ್ತು. ತಂತ್ರಜ್ಞಾನವು ಸಂಕೀರ್ಣವಾದದ್ದು. ಅದನ್ನು ವಿವೇಚನೆ ಇಲ್ಲದೆ ಅನುಸರಿಸಿದರೆ, ನಾವು ಅದರ ಗುಲಾಮರಾಗುತ್ತೇವೆ ಅಥವಾ ತಂತ್ರಜ್ಞಾನ ವಸಾಹತುಶಾಹಿಗೆ ಬಲಿಯಾಗುತ್ತೇವೆ ಎಂಬುದು ಅವರ ನಿಲುವಾಗಿತ್ತು. ಇದು ಕಾಲನುಕ್ರಮದಲ್ಲಿ ಸಾಮಾಜಿಕ ಸಾಮರಸ್ಯ, ಸಹಬಾಳ್ವೆಗಳ ನೈತಿಕ ಜಾಲವನ್ನು ಕಟ್ಟುವ ಮೌಲ್ಯ ಮತ್ತು ಸಂವೇದನೆಗಳನ್ನು ಇಲ್ಲವಾಗಿಸುತ್ತದೆ ಎಂಬುದು ಅವರ ತರ್ಕವಾಗಿತ್ತು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸಾಮಾಜಿಕ ಜಾಲತಾಣ ಜಾಲ, ಇಂಟರ್ನೆಟ್ ಬಳಕೆಯ ದೊಡ್ಡ ಜಾಲದಲ್ಲಿ ಮುಳುಗಿ ಹೋಗಿರುವ ಸ್ಥಿತಿ, ಗಾಂಧಿಜಿಯವರು ಹೇಳಿದ್ದಕ್ಕಿಂತ ಭಿನ್ನವಾಗೇನೂ ಇಲ್ಲ.
ಪರಾವಲಂಬನೆಯನ್ನು ಪೋಷಿಸುತ್ತಿರುವ ತಂತ್ರಜ್ಞಾನ, ದ್ವೇಷಾಸೂಯೆಗಳನ್ನು ಬಿತ್ತುತ್ತಿರುವ ಸಾಮಾಜಿಕ ಜಾಲತಾಣಗಳು, ಮನುಷ್ಯನ ಅಸ್ತಿತ್ವಕ್ಕೆ ಸವಾಲಾಗದೆಂಬ ಆತಂಕ ಹುಟ್ಟಿಸುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇವೆಲ್ಲವೂ ಮನುಷ್ಯನ ಸ್ವಾರ್ಥ, ದುರಾಸೆಗಳ ಪ್ರತೀಕ. ಹಾಗೆಯೇ ಕೆಲವೇ ಕೆಲವು ಹಣ, ಅಧಿಕಾರ ಉಳ್ಳವರ ಅಸ್ತ್ರವಾಗಿ ಬೆಳೆದಿದೆ. ಗಾಂಧಿ ಇದನ್ನು ಅರಿತಿದ್ದರು. ಅವರ ವಿಜ್ಞಾನ-ತಂತ್ರಜ್ಞಾನದ ಬಗ್ಗೆ ಇದ್ದುದು ಕುರುಡು ವಿರೋಧವಲ್ಲ. ಇವುಗಳ ನಿಯಂತ್ರಣ ಸಾಮಾನ್ಯರ ಕೈಯಲ್ಲಿರಬೇಕು, ಕಾರ್ಪೋರೇಟ್ ಜನರು ಅಥವಾ ಸರ್ಕಾರದ ಕೈಯಲ್ಲಿ ಇರಬಾರದು ಎಂಬುದಾಗಿತ್ತು.
ತಂತ್ರಜ್ಞಾನ ನಮ್ಮನ್ನು ಅಗಾಧವಾಗಿ ವ್ಯಾಪಿಸಿಕೊಂಡಿರುವ ಹೊತ್ತಿನಲ್ಲಿ ಮಹಾತ್ಮ ಗಾಂಧಿ ಅವರ ಮಾನವೀಯ ನೆಲೆಯಲ್ಲಿ ವಿಮರ್ಶಕ ದೃಷ್ಟಿಕೋನದ ಅಗತ್ಯವಿದೆ ಎನಿಸುತ್ತದೆ. ಮಾನವೀಯ ಮೌಲ್ಯಗಳಿಲ್ಲದ ಯಾವುದೇ ಕ್ರಿಯೆ, ಸಿದ್ಧಾಂತ ಕಡೆಗೆ ರಕ್ಕಸ ಶಕ್ತಿಯಾಗಿ ಮನುಕುಲಕ್ಕೆ ಎರವಾಗುತ್ತದೆ ಎಂಬ ಸಾಮಾನ್ಯ ತಿಳಿವು ನಮ್ಮೆಲ್ಲರಿಗೂ ಬೇಕಿದೆ.