ಐಫೋನ್‌ 11 ಲಾಂಚ್‌ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ, ನೀವೂ ನೋಡಿ

ಸೆಪ್ಟೆಂಬರ್‌ 10ರಂದು ಆ್ಯಪಲ್‌ ಐಫೋನ್‌ 11 ಅನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಈ ಫೋನಿನ ವಿಶೇಷಗಳು ಸೋರಿಕೆಯಾಗಿದ್ದು, ಈ ಬಾರಿ ಯೂಟ್ಯೂಬ್‌ ಮೂಲಕ ಬಿಡುಗಡೆಯನ್ನು ನೇರ ಪ್ರಸಾರ ಮಾಡಲು ಮುಂದಾಗಿದೆ

ಆ್ಯಪಲ್‌ ಕಂಪನಿಯ ಐಫೋನ್‌ ಒಂದು ವಿಶೇಷ ಆಕರ್ಷಣೆ. ಅದು ದುಬಾರಿ ಫೋನ್‌ ಎಂಬುದು ಒಂದು ಕಾರಣವಾದರೆ, ಖಾಸಗಿತನ, ಆಂಡ್ರಾಯ್ಡ್‌ ಫೋನ್‌ನಲ್ಲಿರುವ ಅತಿಯಾದ ಫೀಚರ್‌ಗಳ ಕಿರಿಕಿರಿ ಇದರಲ್ಲಿ ಇರುವುದಿಲ್ಲ ಎಂಬುದು ಇನ್ನೊಂದು.

ಇಂತಹ ಆ್ಯಪಲ್‌ ಸಂಸ್ಥೆ ಐಫೋನ್‌ ಬಿಡುಗಡೆ ಕೂಡ ಬಹಳ ಖಾಸಗಿಯಾಗಿ ಅಂದರೆ ತನ್ನ ಗ್ರಾಹಕರ ಜಾಲದಲ್ಲೇ ನಡೆಯುತ್ತಿತ್ತು. ಆಸಕ್ತಿ ಇರುವವರು ಆ್ಯಪಲ್‌ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಬಹುದಿತ್ತು. ವಿಂಡೋಸ್‌ ಬಳಕೆದಾರರು ಎಡ್ಜ್‌ ಬ್ರೌಸರ್‌ ಮೂಲಕ ನೋಡುವ ಅವಕಾಶವಿತ್ತು. ಆದರೆ ಇದೇ ಮೊದಲ ಬಾರಿಗೆ ಯೂಟ್ಯೂಬ್‌ ಮೂಲಕ ನೇರ ಪ್ರಸಾರ ಮಾಡುವುದಕ್ಕೆ ಆ್ಯಪಲ್‌ ಮುಂದಾಗಿದೆ. ಕಳೆದ ವರ್ಷ ಟ್ವಿಟರ್‌ನಲ್ಲಿ ಈ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಿತ್ತು.

ಸೆಪ್ಟೆಂಬರ್‌ 10ರಂದು ರಾತ್ರಿ 10.30ಕ್ಕೆ (ಭಾರತೀಯ ಕಾಲಮಾನ) ಆ್ಯಪಲ್‌ ಸಂಸ್ಥೆಯ ಆವರಣದಲ್ಲಿರುವ ಸ್ಟೀವ್‌ ಜಾಬ್ಸ್‌ ಥಿಯೇಟರ್‌ನಲ್ಲಿ ಕಾರ್ಯಕ್ರಮ ಜರುಗಲಿದೆ. ನೇರ ಪ್ರಸಾರ ನೋಡಬಯಸುವವರು ಇಲ್ಲಿ ಕ್ಲಿಕ್‌ ಮಾಡಿ

ಏನಿದೆ ನಿರೀಕ್ಷೆ?

ಆ್ಯಪಲ್‌ ಐಫೋನ್‌ 11ಅನ್ನು ಬಿಡು ಮಾಡುತ್ತಿದೆ ಎಂಬುದು ಜಗಜ್ಜಾಹೀರು. ಫೋನ್‌ನ ಕೆಲವು ವೈಶಿಷ್ಟ್ಯಗಳು ಎಂದು ಸೋರಿಕೆಯಾದ ಚಿತ್ರಗಳು ವೈರಲ್‌ ಆಗಿವೆ. ಹಾಗಾದರೆ ಹೊಸಫೋನಿನಲ್ಲಿ ನಿಜಕ್ಕೂ ವಿಶೇಷವೇನಿದೆ ?

ಐಫೋನ್‌ 11 5ಜಿ ತಂತ್ರಜ್ಞಾನಕ್ಕೆ ತಕ್ಕಂತೆ ಸಿದ್ಧವಾಗಿ ಬರುತ್ತಿದೆ. ಮೂರು ಶ್ರೇಣಿಗಳಲ್ಲಿ ಬರಲಿರುವ ಈ ಫೋನ್‌ ಮೊದಲ ಶ್ರೇಣಿಯು ಅಗ್ಗ ಐಫೋನ್‌ ಆರ್‌ ಅನ್ನು ಸ್ಥಳಾಂತರಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೆರಡು ದುಬಾರಿ ಮಾಡೆಲ್‌ಗಳಾಗಿದ್ದು, ಪ್ರೊ ಮತ್ತು ಪ್ರೊ ಮ್ಯಾಕ್ಸ್‌ ಹೆಸರಿನಲ್ಲಿ ಬರಲಿವೆ ಎಂದು ಟೆಕ್‌ ಕ್ರಂಚ್‌ ವರದಿ ಮಾಡಿದೆ.

ಬೇಸ್‌ ಮಾಡೆಲ್‌ ಎಂದಿನಂತೆ ಎರಡು ಕ್ಯಾಮೆರಾಗಳ ಫೋನ್‌ ಆಗಿದ್ದರೆ, ಪ್ರೊ ಮತ್ತು ಪ್ರೊ ಮ್ಯಾಕ್ಸ್‌ ಮೂರು ಕ್ಯಾಮೆರಾಗಳೊಂದಿಗೆ ಬರುತ್ತಿದೆ. ಆಂಡ್ರಾಯ್ಡ್‌ ಫೋನ್‌ಗಳ ಆಕರ್ಷಣೆಯಾಗಿರುವ ವೈಡ್‌ ಆಂಗಲ್‌ ಚಿತ್ರಗಳನ್ನು ಸೆರೆಹಿಡಿಯಲು ಈ ಮೂರನೆಯ ಕ್ಯಾಮೆರಾ ನೆರವಾಗಲಿದೆ.

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಸಂಯೋಜನೆಯ ಈ ಕ್ಯಾಮೆರಾ ಚಿತ್ರ ಸೆರೆಹಿಡಿಯುವಾಗ ಆಗುವ ಯಾವುದೇ ಲೋಪವನ್ನು ಸರಿಪಡಿಸಬಲ್ಲದು ಎನ್ನಲಾಗಿದೆ.

ಜೊತೆಗೆ ಹೊಸ ಬಣ್ಣಗಳಲ್ಲಿ ಐಫೋನ್‌ ಕಾಣಿಸಿಕೊಳ್ಳುವ ನಿರೀಕ್ಷೆಯೂ ಇದ್ದು, ಫೋನಿನ ಮೇಲ್ತುದಿಯಲ್ಲೂ ಬದಲಾವಣೆಗಳಾಗಬಹುದು ಎನ್ನಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.