ಇದುವರೆಗೂ ಕನ್ನಡ ಸೇರಿ 16 ಭಾಷೆಗಳ 6100 ಪುಸ್ತಕಗಳನ್ನು ಡಿಜಿಟಲೀಕರಿಸಿದ್ದೇವೆ: ಓಂ ಶಿವಪ್ರಕಾಶ್

ಡಿಜಿಟಲ್‌ ಲೋಕದಲ್ಲಿ ಕನ್ನಡ ಸಾಹಿತ್ಯದ ಅಸ್ತಿತ್ವವನ್ನು ಗಮನಿಸಿದರೆ ಕೊಂಚ ಬೇಸರವೇ ಆಗುತ್ತದೆ. ಇಂಗ್ಲಿಷ್‌ ಬಿಡಿ, ದಕ್ಷಿಣ ಭಾರತದ ಇತರೆ ಭಾಷೆಗಳು ಡಿಜಿಟಲ್‌ ಲೋಕದಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸಿರುವ ಪರಿಯೇ ದೊಡ್ಡದು. ಹಾಗೆಂದು ಕನ್ನಡದಲ್ಲಿ ಏನೂ ಆಗುತ್ತಿಲ್ಲವೆಂದಲ್ಲ. ಅನೇಕ ಉತ್ಸಾಹಿಗಳು ವೈಯಕ್ತಿಕವಾಗಿ ಹಲವು ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಓಂಶಿವಪ್ರಕಾಶ್‌ ಒಬ್ಬರು. ಸಾವಿರಾರು ಕೃತಿಗಳಿಗೆ ಡಿಜಿಟಲ್‌ ಸ್ಪರ್ಶ ನೀಡುವ ಜೊತೆಗೆ, ಹೊಸದಾಗಿ ಕನ್ನಡದ್ದೇ ಡಿಜಿಟಲ್‌ ಪುಸ್ತಕಗಳ ಸಿದ್ಧವಾಗುವುದಕ್ಕೆ ಪೂರಕ ಪರಿಸರ ರೂಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ವಿಶ್ವ ಪುಸ್ತಕ ದಿನದ ಹಿನ್ನೆಲೆಯಲ್ಲಿ ‘ಟೆಕ್‌ಕನ್ನಡ’ದೊಂದಿಗೆ ಶಿವಪ್ರಕಾಶ್‌ ಡಿಜಿಟಲ್‌ ಪುಸ್ತಕ ಲೋಕದ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದಾರೆ

ಡಿಜಿಟಲ್ ಪುಸ್ತಕ ಹೇಗಿರುತ್ತೆ?

ಕನ್ನಡ ಪುಸ್ತಕಗಳನ್ನು ಇಂಟರ್ನೆಟ್/ಅಂತರಜಾಲದಲ್ಲಿ ಹುಡುಕುವವರಿಗೆ ಅ) ಸಾಮಾನ್ಯ ಪುಸ್ತಕ ಮಾದರಿಯಲ್ಲಿ ಕೊಳ್ಳಲು ಸಪ್ನ, ದಟ್ಸ್ ಕನ್ನಡ, ಅಮೇಜಾನ್, ಫ್ಲಿಪ್ ಕಾರ್ಟ್ ಗಳಲ್ಲಿ ದೊರೆಯುತ್ತವೆ ಆ) ಇ-ಪುಸ್ತಕಗಳು(?) ಗೂಗಲ್ ಪ್ಲೇ ಸ್ಟೋರ್, ಅಮೇಜಾನ್ ಕಿಂಡಲ್(?), ಇಂಟರ್ನೆಟ್ ಆರ್ಕೈವ್ (archive.org), ಡೈಲಿ ಹಂಟ್, ಕಣಜ, ಭಾರತವಾಣಿ ಇತ್ಯಾದಿಗಳಲ್ಲಿ ದೊರೆಯುತ್ತವೆ ಎಂದು ಹೇಳುವುದು ರೂಢಿಯಲ್ಲಿದೆ. ಆದರೆ ಹೀಗೆ ದೊರೆಯುವ ಕನ್ನಡ ಪುಸ್ತಕಗಳು ಡಿಜಿಟಲೀಕರಿಸಿದ ದತ್ತಾಂಶ ಮಾತ್ರ ಆಗಿದ್ದು, ನಿಜವಾದ/ನೈಜವಾದ ಇ-ಪುಸ್ತಕಗಳಲ್ಲ.

ಕನ್ನಡದ ಇ-ಪುಸ್ತಕ ಎಂದರೆ ಸಾಮಾನ್ಯವಾಗಿ ಕೈಗೆಟಕುವವು, ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿದ ಅಥವಾ ಪ್ರಿಂಟ್ ಆವೃತ್ತಿಯ ಮೂಲವನ್ನು ಪಿಡಿಎಫ್ ರೂಪದಲ್ಲಿ ಸಂಗ್ರಹಿಸಿರುವ/ಡಿಜಿಟಲೀಕರಿಸಿರುವ ಪುಸ್ತಕಗಳು. ಇವುಗಳನ್ನು ಇ-ಪುಸ್ತಕ/ಇ-ಬುಕ್ ಎನ್ನಲು ಬರುವುದಿಲ್ಲ.

ಇ-ಪುಸ್ತಕಗಳು ಇ-ಪಬ್ (.epub, .mobi) ಅಥವಾ ಇ-ಪುಸ್ತಕ ಓದುಗಗಳ (ebook readers) ಸ್ವರೂಪದಲ್ಲಿರಬೇಕು. ಇ-ಪಬ್ ಸ್ವರೂಪದ ಪುಸ್ತಕಗಳು – ನಮ್ಮ ಇ-ಪುಸ್ತಕ ಓದುಗ ಇರುವ ತೆರೆಯ ಅಳತೆಗೆ ಅನುಗುಣವಾಗಿ ಪುಸ್ತಕದ ಮಾಹಿತಿಯನ್ನು ಅಳವಡಿಸಿ ಕೊಡುವುದರೊಂದಿಗೆ ಮೊದಲು ಮಾಡಿ (ಫಾಂಟಿನ/ಅಕ್ಷರ ಶೈಲಿಯ ಗಾತ್ರ ಹಿಗ್ಗಿಸುವ/ಕುಗ್ಗಿಸುವ ಸೌಲಭ್ಯ), ಪುಸ್ತಕದ ಮಾಹಿತಿ ಯಾವುದೇ ಸಾಧನದಲ್ಲಿ ಮೂಡುವಂತೆ ಮಾಡುವ ಶಿಷ್ಟಾಚಾರಗಳನ್ನು (Standards) ಉದಾ: ಯುನಿಕೋಡ್ ಬಳಕೆ, ಯುನಿಕೋಡ್ ನಲ್ಲಿ ಮಾಹಿತಿ ಹುಡುಕಾಟ, ಪುಸ್ತಕ ಓದುವ ಸಮಯದಲ್ಲಿ ಬೇಕಾಗುವ ನಿಘಂಟುವಿನೊಂದಿಗೆ ಪುಸ್ತಕದ ಮಾಹಿತಿ ಬೆಸೆಯುವ ಸೌಲಭ್ಯ. ಅವಶ್ಯ ಬಿದ್ದಲ್ಲಿ ಓದುಗ ತನ್ನದೇ ಆದ ನಿಘಂಟುವನ್ನು ಸೃಷ್ಟಿಸಿಕೊಳ್ಳುವ ಸೌಲಭ್ಯ, ಓದುವ ಸಮಯದಲ್ಲಿ ಟಿಪ್ಪಣಿ, ಪುಟಗುರುತುಗಳು, ಸಾಧ್ಯವಾದೆಡೆ ಹೊರಗಿನ/ಬಾಹ್ಯ ಮಾಧ್ಯಮವನ್ನು (ಆಡಿಯೋ, ವಿಡಿಯೋ, ಆನಿಮೇಷನ್) ತನ್ನಲ್ಲಿ ಅಡಗಿಸಿಕೊಳ್ಳುವ/ಎಂಬೆಂಡ್ ಮಾಡಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. .txt ಹೊರತು ಪಡಿಸಿ ಮತ್ತೆಲ್ಲವೂ ವಿದ್ಯುನ್ಮಾನ ಹಕ್ಕುಗಳನ್ನು ಸಂರಕ್ಷಿಸುತ್ತವೆ. ಈ ಕೆಲವೊಂದು ಸಾಧ್ಯತೆಗಳನ್ನು ಕೆಲವು ಇ-ಪುಸ್ತಕ ಸ್ವರೂಪಗಳು ಕೊಡದೇ ಹೋಗಬಹುದು.

ಕನ್ನಡದ ಪುಸ್ತಕಗಳ ಡಿಜಿಟೈಸೇಷನ್ ಗಾಗಿ ಸಾಕಷ್ಟು ಶ್ರಮಿಸುತ್ತಿದ್ದೀರಿ. ಇದುವರೆಗೂ ಎಷ್ಟು ಪುಸ್ತಕಗಳಿಗೆ ಡಿಜಿಟಲ್ ಸ್ವರೂಪ ನೀಡಿದ್ದೀರಿ? ಬೆಂಬಲ ಮತ್ತು ಸವಾಲುಗಳ ಈ ಜರ್ನಿಯ ಬಗ್ಗೆ ಹೇಳಿ

ಪುಸ್ತಕಗಳಿಗೆ ಡಿಜಿಟಲ್ ರೂಪ ಕೊಡುವುದು ಎಂದರೆ ಅದಕ್ಕೆ ಅನೇಕ ಮಜಲುಗಳಿವೆ. ಕೇವಲ ಸ್ಕ್ಯಾನ್ ಮಾಡುವುದು ಡಿಜಿಟಲೀಕರಣ ಅಲ್ಲ. ಮನೆಯಲ್ಲಿದ್ದ ಪುಸ್ತಕಗಳನ್ನು ಇಂಡೆಕ್ಸ್ ಮಾಡುವುದರಿಂದ ನನ್ನ ಈ ಕೆಲಸಗಳು ಪ್ರಾರಂಭವಾಗಿ ನಂತರ ಇವು ಸಮುದಾಯದ ಕೆಲಸಗಳಾದವು. ಸಂಚಯದ ಮೂಲಕ ಪ್ರಾರಂಭಿಸಿದ ವಚನ ಸಂಚಯ, ದಾಸ ಸಂಚಯ ಇತ್ಯಾದಿ ಸಾಹಿತ್ಯ ಸಂಶೋಧನಾ ತಾಣಗಳು, ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ, ಓಸ್ಮಾನಿಯ ಡಿಜಿಟಲ್ ಲೈಬ್ರರಿಯಲ್ಲಿದ್ದ ಪುಸ್ತಕಗಳು ಹುಡುಕಲು ಸಾಧ್ಯವಾಗದ ಪರಿಸ್ಥಿತಿ ಇದ್ದಾಗ ಅವುಗಳ ಕನ್ನಡ ಪರಿವಿಡಿ ಸಿದ್ಧಪಡಿಸಲು ರಚಿಸಿದ ಸಮುದಾಯ ಸಹಭಾಗಿತ್ವ ಯೋಜನೆಯಾದ ‘ಸಮೂಹ ಸಂಚಯ’ ಹಾಗೂ ಕಡೆಗೆ ಆ ಎಲ್ಲ ಪುಸ್ತಕಗಳ ಸುಲಭ ಹುಡುಕಿಗೆ ಸಾಧ್ಯವಾಗಿಸಿದ ಪುಸ್ತಕ ಸಂಚಯ ಇಲ್ಲಿ ಮುಖ್ಯವಾಗುತ್ತದೆ. ಈ ಸರ್ಕಾರೀ ಯೋಜನೆಗಳು ಬಾಗಿಲು ಮುಚ್ಚಿದಾಗ ಇವುಗಳನ್ನೆಲ್ಲಾ ಕನ್ನಡದ ಮೆಟಾಡೇಟಾದೊಂದಿಗೆ ಇಂಟರ್ನೆಟ್ ಆರ್ಕೈವ್ ಮಡಿಲಿಗೆ ಹಾಕಿ ಅವುಗಳ ಕೊಂಡಿಗಳನ್ನೂ ಸೇರಿಸಿದೆವು – ಒಟ್ಟಾರೆ ೬ಸಾವಿರಕ್ಕೂ ಹೆಚ್ಚು ಪುಸ್ತಕಗಳು. ಇವು ನಮ್ಮ ಸಂಚಯದ ಬಗ್ಗೆ ಗೊತ್ತಿರದ ಜನರಿಗೂ ಕನ್ನಡ ಪುಸ್ತಕಗಳನ್ನು ಇಂಟರ್ನೆಟ್ ಮೂಲಕ ದೊರೆಯುವಂತೆ ಮಾಡಿದ ಕೆಲಸಗಳು.

೨೦೧೯ರ ನಂತರ ಸಂಚಯದ ಸಮುದಾಯದ ಕೆಲಸಗಳಲ್ಲಿ ಜ್ಞಾನದ ಸೇವಕರು – ServantsOfKnowledge ಯೋಜನೆಯ ಮೂಲಕ ಪುಸ್ತಕಗಳ ಡಿಜಿಟೈಜೇಷನ್‌ಗೆ ಹೊಸ ಸಾಧ್ಯತೆಯನ್ನು ಕಂಡುಕೊಳ್ಳಲು ಸಾಧ್ಯವಾಯ್ತು. ಇಂಟರ್ನೆಟ್ ಆರ್ಕೈವ್ ಆವಿಷ್ಕಾರದ ಸ್ಟೇಟ್ ಆಫ್ ಆರ್ಟ್ ಸ್ಕ್ಯಾನರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿರುವುದು ಹಾಗೂ ಅದರ ಉಪಯೋಗ ಸಾಧ್ಯವಾಗದಿರುವುದನ್ನು ಮನಗಂಡು, ಅದನ್ನು ಬೆಂಗಳೂರಿಗೆ ತಂದಿದ್ದ ಕಂಪ್ಯೂಟರ್ ವಿಜ್ಞಾನಿ, ಆರ್ಕೈವಿಸ್ಟ್ ಡಾ. ಕಾರ್ಲ್ ಮಲಮದ್ ಅವರನ್ನು ಸಂಪರ್ಕಿಸಿ – ನಮ್ಮ ಕನ್ನಡದ ಕೆಲಸಗಳಿಗೆ ಇದನ್ನು ಸಮುದಾಯದ ಭಾಗವಾಗಿ ಬಳಸಿಕೊಳ್ಳುವ ಬಗ್ಗೆ ವಿವರಿಸಿದ ತಕ್ಷಣ ದೊರಕಿದ ಧನಾತ್ಮಕ ಪ್ರತಿಕ್ರಿಯೆ ಕನ್ನಡದ ಸಾವಿರಾರು ಪುಸ್ತಕಗಳ ಡಿಜಿಟಲೀಕರಣಕ್ಕೆ ಮುನ್ನುಡಿ ಬರೆಯಿತು. ಈ ಯೋಜನೆಯ ಮೂಲಕ ಇದುವರೆಗೂ ೬೧೦೦ಕ್ಕೂ ಹೆಚ್ಚು ಪುಸ್ತಕಗಳನ್ನು ಡಿಜಿಟಲೀಕರಿಸಿದ್ದೇವೆ. ಸುಮಾರು ೧೬ ಭಾಷೆಗಳ ಪುಸ್ತಕಗಳು ಇಲ್ಲಿ ಸೇರಿವೆ. ೨೦೨೦ರ ಕಡೆಯ ಭಾಗದಿಂದ ಚೆನ್ನೈನ ರೋಜಾ ಮುತ್ತಯ್ಯ ಲೈಬ್ರರಿ ಹಾಗೂ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲೂ ಡಿಜಿಟಲೀಕರಣದ ಕೆಲಸಗಳನ್ನು ಪ್ರಾರಂಭಿಸಿದ್ದು ದಿನವೊಂದಕ್ಕೆ ಸುಮಾರು ೮ ಸಾವಿರ ಪುಟಗಳ ಸ್ಕ್ಯಾನಿಂಗ್ ಆಗುತ್ತಲಿದೆ.

ಇದರ ಜೊತೆಗೆ ಬೆಂಗಳೂರಿನಲ್ಲಿ ನಮಗೆ ದೊರಕಿದ ಪುಸ್ತಕಗಳು, ಕೃಷ್ಣಾನಂದ ಕಾಮತರ ಛಾಯಾಚಿತ್ರಗಳು, ಸ್ಲೈಡ್‌ಗಳು, ಬಿ. ಎಸ್. ಮಾಧವ ರಾವ್ ಹಾಗೂ ಶ್ರೀನಿವಾಸ ಹಾವನೂರರ ಖಾಸಗೀ ಲೈಬ್ರರಿಗಳನ್ನು ಹಂತಹಂತವಾಗಿ ಡಿಜಿಟಲೀಕರಣ ಮಾಡುತ್ತಾ ಬರುತ್ತಿದ್ದೇವೆ.

ServantsOfKnowledge ಯೋಜನೆಯ ಕಡೆಗೆ ನೀವು ಪಾ.ವೆಂ. ಆಚಾಯರ್, ಟಿ. ಆರ್. ಅನಂತರಾಮು, ಓ. ಎಲ್ ನಾಗಭೂಷಣ ಸ್ವಾಮಿ, ಪಾಲಹಳ್ಳಿ ವಿಶ್ವನಾಥ್, ಪಂ. ಚನ್ನಪ್ಪ ಎರೇಸೀಮೆ, ಬಿ. ಎಚ್. ಶ್ರೀಧರ, ‍ಕೆ. ವಿ. ಸುಬ್ಬಣ್ಣ, ‍ಗೌರೀಶ ಕಾಯ್ಕಿಣಿ, ‍ಕುಡ್ಪಿ ವಾಸುದೇವ ಶೆಣೈ ಅವರ ಒಂದಾಣೆ ಮಾಲೆ, ಎ. ಪಿ. ಮಾಲತಿ, ‍ಡಾ. ಆರ್. ವಿ. ಬಂಡಾರಿ, ‍ಹೀಗೆ ಅನೇಕರ ಸಮಗ್ರ ಸಾಹಿತ್ಯ ಕನ್ನಡಿಗರಿಗೆ ದೊರಕುತ್ತಿದೆ. ಇವುಗಳ ಜೊತೆಗೆ ೫೦ ವರ್ಷಗಳ ಕಸ್ತೂರಿ, ೨೦ ವರ್ಷಗಳ ನೀನಾಸಂ ಮಾತುಕತೆ, ನವಕರ್ನಾಟಕದ ಹೊಸತು, ನಗುವ ನಂದ, ಸಂಚಯ, ಸಂವಾದ, ‍ಸಾಕ್ಷಿ, ರುಜುವಾತು ಹೀಗೆ ‍ಹತ್ತು ಹಲವು ‍ಮಾಸಿಕಗಳೂ, ಪತ್ರಿಕೆಗಳೂ ದೊರೆಯುತ್ತಿವೆ. ಕೆಲವೊಂದು ಅತ್ಯಮೂಲ್ಯ ಕನ್ನಡ ಸಾಹಿತ್ಯಗಳೂ ದೊರಕಿವೆ – ಶಂಕರ ಆರ್ಟ್ಸ್ ಮತ್ತು ಕಾರ್ಮಸ್ ಕಾಲೇಜು ನವಲಗುಂದ ನಮ್ಮೊಡನೆ ಅನೇಕ ಮಹತ್ವದ ಪುಸ್ತಕಗಳನ್ನು ಹಂಚಿಕೊಂಡಿದೆ.

ಈ ಡಿಜಿಟಲೀಕರಣ ಕೇವಲ ಸ್ಕ್ಯಾನಿಂಗ್ ಕೆಲಸಕ್ಕಷ್ಟೇ ಸೀಮಿತವಾಗದೆ, ಪುಸ್ತಕಗಳನ್ನು ಓಸಿಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ಮೂಲಕ ಹಾಯಿಸಿ, ಪುಸ್ತಕಗಳ ಒಳಗಿನ ಅರಿವನ್ನೂ ಹುಡುಕಿ ನೋಡುವ ಸಾಧ್ಯತೆಯನ್ನು ಕನ್ನಡಕ್ಕೆ ಸಾಧ್ಯವಾಗಿಸಿದ್ದೇವೆ. ಬೆಂಗಳೂರಿನಲ್ಲಿ ಸ್ಕ್ಯಾನ್ ಆದ ಪುಸ್ತಕಗಳ ಪುಟಗಳ ಸಂಖ್ಯೆಯೇ ೭ ಲಕ್ಷ ದಾಟುತ್ತದೆ.

ಸಂಚಯದ ಇಂತಹ ಕೆಲಸಗಳಿಗೆ ಬೆನ್ನೆಲುಬು ಸಮುದಾಯ, ಸ್ಕ್ಯಾನಿಂಗ್ ಕೆಲಸಕ್ಕೆ ಜೊತೆಯಾದ ಪ್ರವೀಣ್ – ಪುಸ್ತಕಗಳನ್ನು ಒದಗಿಸುವುದು ಸಮುದಾಯ ಸುಲಭವಾಗಿ ಮಾಡಬಹುದಾದ ಕೆಲಸ, ಇದನ್ನು ಮತ್ತೆ ಹಿಂದಿರುಗಿಸುವ ಕೆಲಸ ಇತ್ಯಾದಿಗಳಿಗೆ ಬೇಕಾದ ಹಂತದ ಖರ್ಚುಗಳನ್ನು ನಿಭಾಯಿಸಲು ತೇಜೇಶ್ ಜಿ. ಎನ್. ಅವರ ಅಮ್ಮನ ನೆನಪಿನಲ್ಲಿ ನೀಡುವ ನಾಗರತ್ನ ಮೆಮೇರೊಯಲ್ ಗ್ರಾಂಟ್ ನಮಗೆ ನೆರವಿಗೆ ಬಂತು. ಎರಡು ವರ್ಷ ನಮ್ಮ ಯೋಜನೆಗೆ ಅವರು ಬೆಂಬಲ ನೀಡಿದ್ದಾರೆ. ಇದರೊಟ್ಟಿಗೆ ಮೊದಲ ಬಾರಿಗೆ ಸಂಚಯದ ಕೆಲಸಗಳಿಗೆ ಹರಿಬಂದ ಕೆಲವೊಂದು ಧನಸಹಾಯ ಕಳೆದ ಎರಡು ವರ್ಷಗಳಿಂದ ಈ ಕೆಲಸ ನಿರ್ವಿಘ್ನವಾಗಿ ನೆರವೇರಲು ಸಾಧ್ಯವಾಗಿಸಿದೆ. ಸಂಚಯದ ಹಿಂದಿನ ಕೆಲಸಗಳು ಎಂದಿನಂತೆ ಸ್ವಇಚ್ಛೆಯಿಂದ ನಡೆಯುತ್ತಲೇ ಇವೆ. ನಾವು ಕಟ್ಟಿದ ಸಂಚಿ ಫೌಂಡೇಷನ್ ಅವಶ್ಯವಾದ ಸಾಂಘಿಕ ನೆರವನ್ನು ನೀಡುತ್ತಿದೆ.

ಈ ಎಲ್ಲರ ಪುಸ್ತಕಗಳು ಕಾಪಿರೈಟ್ ಹೊರತಾಗಿರದೆ ಅವುಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಮೂಲ ಲೇಖಕರು ಅಥವಾ ಅವರ ಕುಟುಂಬದವರು, ಕಸ್ತೂರಿಯ ಲೋಕ ಶಿಕ್ಷಣ ಟ್ರಸ್ಟ್ ಇತ್ಯಾದಿ ಸಂಚಿ ಫೌಂಡೇಷನ್ ಜೊತೆಗೂಡಿ ಕ್ರಿಯೇಟೀವ್ ಕಾಮನ್ಸ್ ಅಡಿಯಲ್ಲಿ ವಾಣಿಜ್ಯೇತರ ಉದ್ದೇಶಕ್ಕೆ ನೀಡಿರುವುದನ್ನು ಗಮನಿಸಬೇಕು. ಉಳಿದಂತೆ ಕಾಪಿರೈಟ್ ಹೊರತಾದ ಸಾರ್ವಜನಿಕ ಡೊಮೇನ್ ನಲ್ಲಿರುವ ಪುಸ್ತಕಗಳನ್ನು ನಾವು ಡಿಜಿಟಲೀಕರೈಸುತ್ತಿದ್ದೇವೆ.

ಕನ್ನಡದ ಪುಸ್ತಕಗಳು ಡಿಜಿಟಲ್ ರೂಪ ಪಡೆಯುವುದರ ಲಾಭವೇನು?

ಪುಸ್ತಕಗಳು ಡಿಜಿಟಲ್ ರೂಪ ಪಡೆಯುವುದರ ‘ಲಾಭ’ ಎನ್ನುವುದಕ್ಕಿಂತ ತ್ವರಿತವಾಗಿ ನಾವು ಉಳಿಸಿಕೊಳ್ಳಬೇಕಿರುವ, ಜೀರ್ಣಗೊಳ್ಳುತ್ತಿರುವ, ಅಲಭ್ಯವಾಗಿರುವ ಕನ್ನಡ ಸಾಹಿತ್ಯವನ್ನು ಜನರಿಗೆ ಲಭ್ಯವಾಗಿಸುವ ಕೆಲಸ ಇದಾಗಿದೆ. ವಚನ ಸಂಚಯವನ್ನು ಬಳಸಿದ್ದೀರಾದರೆ ಡಿಜಿಟಲೀಕರಣದ ಉಪಯೋಗದ ಬಗ್ಗೆ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ನಮ್ಮ ಸಾಹಿತ್ಯದ ಜೊತೆಗೆ ಭಾಷೆ ಹೇಗೆ ಬೆಳೆದು ಬಂತು, ನಮ್ಮೊಂದಿಗಿದ್ದ ಜನ, ಲೇಖಕರು, ಅವರ ಆಸ್ತೆ, ಆಸಕ್ತಿ, ಇತಿಹಾಸ ಇವುಗಳನ್ನು ಸುಲಭವಾಗಿ ಹುಡುಕಿ, ಓದಿ ನಾವೊಂದು ಭಾಷೆಯ ಟೈಮ್ ಟ್ರಾವಲ್ ಮಾಡುವ ಅವಕಾಶ ತಂತ್ರಜ್ಞಾನ ನೀಡಬಲ್ಲದು. ನಾವು ಸದ್ಯ ಅದರ ಪ್ರಾರಂಭದ ಹಂತದಲ್ಲಿದ್ದೇವೆ. ಜ್ಞಾನದ ಆಗರಗಳಾದ ಪುಸ್ತಕಗಳು, ಈಗಿನ ಹಾಗೂ ಮುಂದಿನ ತಲೆಮಾರು ನಡೆಸಿರುವ ಸಂಶೋಧನೆಗಳಿಗೆ ಅವಶ್ಯಕ ಉಲ್ಲೇಖನೀಯ ಸವಲತ್ತುಗಳು, ಮೂಲಗಳನ್ನು ನೀಡಬಲ್ಲದು ಹಾಗೂ ಸಂಶೋಧನೆಯ ವೇಗವನ್ನು ಹಲವಾರು ಪಟ್ಟು ವೃದ್ಧಿಸಬಲ್ಲದು. ಡಿಜಿಟಲ್ ರೂಪದ ಸಾಧ್ಯತೆಗಳನ್ನು ಕರೋನಾ ಕಾಲ ಇನ್ನೂ ಹೆಚ್ಚಿಗೆ ಅರಗಿಸಿಕೊಳ್ಳಲು ಸಾಧ್ಯ ಮಾಡಿರುವ ಈ ಸಮಯದಲ್ಲಿ ಶೈಕ್ಷಣಿಕವಾಗಿ ನಮ್ಮ ಮಕ್ಕಳು ಬಳಸಿಕೊಳ್ಳಬಹುದಾದ ಸಂಪನ್ಮೂಲಗಳಾಗಿ ಈ ಡಿಜಿಟಲೀಕರಣದ ಕೆಲಸಗಳು ಸಹಾಯಕವಾಗುತ್ತಿವೆ.

ಇದುವರೆಗೂ ಹಳೆಯ ಕೃತಿಗಳನ್ನು ಡಿಜಿಟೈಸ್ ಮಾಡಿದ್ದೀರಿ. ಆದರೆ ಸಮಕಾಲೀನ ಪುಸ್ತಕಗಳ ಡಿಜಿಟೈಸೇಷನ್ ಪ್ರಯತ್ನಕ್ಕೆ ಕನ್ನಡದ ಲೇಖಕರು, ಪ್ರಕಾಶಕರು ಹೇಗೆ ಸ್ಪಂದಿಸಿದ್ದಾರೆ, ಅವರ ಆತಂಕ ಏನು?

ಇತ್ತೀಚೆಗೆ ಕನ್ನಡದ ಪುಸ್ತಕಗಳು ಇ-ಪುಸ್ತಕ ರೂಪ ಪಡೆದುಕೊಳ್ಳುತ್ತಿವೆ. ಸಂಖ್ಯೆ ಹೆಚ್ಚಬೇಕಷ್ಟೇ. ಬಹಳ ಮಂದಿ ಇ-ಪುಸ್ತಕಗಳಿಗಿಂತ ಮೊದಲು ಪ್ರಿಂಟ್ ಆಗಲಿ ಆಮೇಲೆ ನೋಡೋಣ ಎನ್ನುತ್ತಾರೆ. ನಮ್ಮೊಡಗಿನ ಲೇಖಕರು ಹಾಗೂ ಪ್ರಕಾಶಕರು ಅವುಗಳ ಡಿಜಿಟೈಸೇಷನ್‌ಗಿರುವ ಮೌಲ್ಯದ ಬಗ್ಗೆ ಕೂಡ ತಲೆಕೆಡಿಸಿಕೊಂಡಿರುವಂತಿದೆ. ಇದುವರೆಗೆ ಡಿಟಿಪಿ ಇತ್ಯಾದಿಗಳಿಗೆ ಬಳಸುತ್ತಿದ್ದ ಪೇಜ್ ಮೇಕರ್ ಇತ್ಯಾದಿಗಳ ಬಗ್ಗೆ, ಅವುಗಳ ಲೈಸೆನ್ಸ್ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಅಲ್ಲಲ್ಲಿ ಅವುಗಳ ಕಾಪಿ ಇದೆಯೇ ಎಂದು ರಾಜಾರೋಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೇಳುವುದನ್ನು ಈಗಲೂ ನೋಡಬಹುದು. ಡೆಸ್ಕ್‌ಟಾಪ್ ಪಬ್ಲಿಷಿಂಗ್ ಗೆ ಬೇಕಿರುವ ತಂತ್ರಾಂಶಗಳು ಕ್ಲೌಡ್ ಸೇವೆಗಳಾಗಿರುವುದರಿಂಗೆ ತಿಂಗಳಿಗೆ ಇಂತಿಷ್ಟು, ಬಳಕೆದಾರನಿಗೆ ಇಂತಿಷ್ಟು ಎಂದು ಹಣ ನೀಡಬೇಕಿದೆ. ಇದು ಇಷ್ಟು ದಿನ ಕಡಿಮೆ ಬೆಲೆಗೆ ಪುಸ್ತಕದ ಮೊದಲ ಮುದ್ರಣ ತರಲು ಸಾಧ್ಯವಾಗುತ್ತಿದ್ದ ಪರಿಸ್ಥಿತಿ ಬದಲಿಸಿದೆ. ಇನ್ನೂ ನಾವು ಪ್ರಿಂಟ್‌ಗೆ ಯುನಿಕೋಡ್ ಪೂರ್ಣ ಪ್ರಮಾಣದಲ್ಲಿ ಬಳಸುತ್ತಿಲ್ಲ. ಫಾಂಟ್ ಇಲ್ಲ, ಫಾಂಟ್ ಶೈಲಿ ಸರಿ ಇಲ್ಲ ಎನ್ನುವ ಮಾತುಗಳಷ್ಟೇ ಕೇಳುತ್ತವೆ – ಆದರೆ ಪ್ರಕಾಶನದ ಉದ್ಯಮದಲ್ಲಿರುವವರು ಫಾಂಟುಗಳನ್ನು ತಯಾರಿಸುವ ಸೇವೆಗಳನ್ನು, ಅವುಗಳನ್ನು ಪರವಾನಗಿ ಅಡಿ ನೀಡುವ ಸೇವೆಗಳನ್ನು ಕನ್ನಡದಲ್ಲಿ ಬಳಸಿಯೇ ಇಲ್ಲ. ಇದೂ ಕೂಡ ಡಿಜಿಟಲ್ ರೂಪಕ್ಕೆ ಬೇಕಿರುವ ಸಾಧ್ಯತೆ ಹಾಗೂ ನಾವು ಕಂಡುಕೊಳ್ಳಬಹುದಾದ ವೈವಿಧ್ಯತೆ. ಸರ್ಕಾರ ಫಾಂಟ್ ಮಾಡಲಿ, ಸಮುದಾಯದವರು ಮಾಡಲಿ, ಗೂಗಲ್ ಮಾಡಲಿ, ಆಪಲ್ ನವರು ಮಾಡಲಿ ಎನ್ನುವ ಬೆಕ್ಕಿಗೆ ಗಂಟೆಕಟ್ಟುವ ಕನ್ನಡದ ಕೆಲಸಗಳು ನಿಜವೇಗ ಪಡೆದಾಗ ಇಲ್ಲಿ ಹೊಸ ಚುರುಕುತನ ಬರಲಿದೆ. ಪ್ರಿಂಟ್‌ಗೆ, ಪ್ರಿಂಟ್ ವೈವಿಧ್ಯತೆ, ಶೈಲಿ ಇತ್ಯಾದಿಗೆ ನೀಡುವ ಮೆರಗು ಮೆರವಣಿಗೆ ಇ-ಪುಸ್ತಕಗಳ ವೈವಿಧ್ಯತೆಗೂ ದೊರೆಯಬೇಕಿದೆ. ಇವುಗಳನ್ನು ಸಾಧ್ಯವಾಗಿಸಲು ನಮ್ಮದೇ ಲಾಭದ ಉದ್ದೇಶದ ಟೆಕ್‌ಫಿಜ್ ಸಂಸ್ಥೆಯನ್ನೂ ಸ್ಥಾಪಿಸಿದೆವು. ನಮ್ಮ ಸೇವೆಗಳನ್ನು ಪಡೆದವರಿಗೆ ಇವು ಮೆಚ್ಚುಗೆ ಆಗುತ್ತಿವೆ. ಯುನಿಕೋಡ್ ನಲ್ಲಿ ಸೃಷ್ಟಿಸಿದ ಪುಸ್ತಕ ಕೆಲವೇ ನಿಮಿಷಗಳಲ್ಲಿ ಗೂಗಲ್ ಪ್ಲೇಬುಕ್ ನಲ್ಲಿ ಸ್ಥಾನ ಪಡೆದು ಜನರನ್ನು ತಲುಪಿದೆ. ಎರಡು ಮೂರು ದಿನಗಳಲ್ಲಿ ಪ್ರಿಂಟ್‌ಗೂ ಸಿದ್ಧವಾದ ಪಿಡಿಎಫ್ ಸೃಷ್ಟಿಸಿದ ನಿದರ್ಶನಗಳಿವೆ. ತಂತ್ರಜ್ಞಾನ ಅಳವಡಿಸಿಕೊಳ್ಳುವಾಗ ತಂತ್ರಜ್ಞಾನಕ್ಕೆ ವ್ಯಯಿಸುವ ಖರ್ಚು – ನಾವು ಉಳಿಸುವ ಸಮಯ ಎರಡನ್ನೂ ಲೆಕ್ಕ ಹಾಕಿದಲ್ಲಿ ಆಗುವ ಲಾಭದೆಡೆಗೆ ನಮ್ಮ ಗಮನ ಹರಿಯಬೇಕಿದೆ.

ಕನ್ನಡದಲ್ಲಿ ಇ-ಪುಸ್ತಕಗಳು ಮಾರುಕಟ್ಟೆಯ ಸ್ವರೂಪ ಪಡೆಯಲು ಇನ್ನೂ ಆಗಿಲ್ಲ ಯಾಕೆ?

ಎಲ್ಲವೂ ಇ-ಪುಸ್ತಕ ಆಗಬೇಕಿಲ್ಲ ಎನ್ನುವ ಹಾಗೂ ಡಿಜಿಟಲ್ ಪುಸ್ತಕ ಎಂದರೆ ಪಿಡಿಎಫ್ ಅಲ್ಲ ಎನ್ನುವ ಅರಿವು ಬರಬೇಕು. ಹಳೆಗನ್ನಡವನ್ನೂ ಯುನಿಕೋಡ್ ಶಿಷ್ಠತೆ ಬಳಸಿ ಪುಸ್ತಕಗಳನ್ನು ರೂಪಿಸುವ ಗುರಿ ನಮ್ಮದಾದಾಗ ಕನ್ನಡದ ಪುಸ್ತಕಗಳು ಇ-ಮಾರುಕಟ್ಟೆಯ ಎಲ್ಲ ಸಾಧ್ಯತೆಗಳನ್ನು ತಮ್ಮದಾಗಿಸಿಕೊಳ್ಳುತ್ತವೆ. ‘ನುಡಿ ಬಳಸಿ’ ಎನ್ನುವ ‘ಆಸ್ಕಿ ಫಾಂಟು ಬಳಸಿ ಕಡತ ರೂಪಿಸುವ’ ರೂಢಿಯನ್ನು ನಾವು ಸಂಪೂರ್ಣವಾಗಿ ಬಿಡಬೇಕಿದೆ. ಈಗಲೂ ಕನ್ನಡವನ್ನು ನೇರವಾಗಿ ಎಲ್ಲಿ ಬೇಕಾದರೂ ಟೈಪಿಸಬೇಕು ಎನ್ನುವ ಅರಿವು ಬಹುತೇಕರಿಗಿಲ್ಲ. ಈ ಸ್ಥಿತಿ ಬದಲಾಗಬೇಕು. – ಇವೆಲ್ಲವೂ ಸಾಕಾರಗೊಳ್ಳುವುದರೊಳಗೆ – ಕನ್ನಡಿಗರಿಗೆ ವಿಶ್ವದಾದ್ಯಂತ ಎಲ್ಲ ಸಾಧ್ಯತೆಗಳ ಮೂಲಕ ಪುಸ್ತಕಗಳನ್ನು ಒದಗಿಸುವ ಕೆಲಸ ಲೇಖಕರು ಮತ್ತು ಪ್ರಕಾಶಕರು ಮಾಡಬೇಕು. ಕಿಂಡಲ್ ಕೂಡ ಮುಂದಿನ ಕೆಲತಿಂಗಳುಗಳಲ್ಲಿ ಎಲ್ಲ ಮಾದರಿಯ ಕಡತಗಳಿಗೆ ಬೆಂಬಲ ನೀಡಲಿದೆ. ಕನ್ನಡದ ಪುಸ್ತಕಲೋಕ ಕಾಲಕ್ಕೆ ತಕ್ಕಂತೆ ಸಿದ್ಧವಾಗಬೇಕಷ್ಟೆ. ಮಾರುಕಟ್ಟೆ ಸೃಷ್ಟಿ ಮತ್ತು ವಿಸ್ತಾರ ನಾವು ಎಷ್ಟು ಸಮಯ ಮತ್ತು ಹಣವನ್ನು ಹೂಡುತ್ತೇವೆ ಎನ್ನುವುದರ ಮೇಲೂ ನಿರ್ಧಾರವಾಗುತ್ತದೆ ಅಲ್ಲವೇ?

ಇಂದಿಗೂ ಮುದ್ರಿತ ಪುಸ್ತಕಗಳ ಬಗ್ಗೆ ರಮ್ಯವಾದ ಸೆಳೆತವಿದೆ. ಡಿಜಿಟಲ್ ಪುಸ್ತಕ ಕೊಡದ ಅನುಭವ ನೀಡುತ್ತದೆ ಎಂಬ ಕಾರಣಕ್ಕೆ. ಕನ್ನಡದಲ್ಲಿ ಡಿಜಿಟಲ್ ಪುಸ್ತಕ ನಿಜಕ್ಕೂ ಇನ್ನಷ್ಟು ಆಕರ್ಷಕವಾಗಿ ಬೆಳೆದು ಓದುಗ ವಲಯ ವಿಸ್ತರಿಸಿಕೊಳ್ಳಲು ಇನ್ನೆಷ್ಟು ಕಾಲ ಬೇಕು? ಏನಾಗಬೇಕು?

ಡಿಜಿಟಲ್ ಪುಸ್ತಕದ ಆಕರ್ಷಣೆ – ಅದರ ಬಳಕೆಯ ಸಾಧ್ಯತೆಗಳಲ್ಲಿದೆ. ನೀವು ಬೇಕೆನ್ನುವ ಪುಸ್ತಕ ಇ-ಪುಸ್ತಕ ಅಷ್ಟೇ ಅಲ್ಲದೇ ಪ್ರಿಂಟ್ ಆನ್ ಡಿಮ್ಯಾಂಡ್ ಮೂಲಕ ದೊರೆಯುವುದೂ ಕೂಡ ಡಿಜಿಟೈಜೆಷನ್‌ನ ಒಂದು ಮುಖವೇ. ಲಭ್ಯತೆ, ಬೆಲೆ, ವೈಶಿಷ್ಟ್ಯ ಪೂರ್ಣ ಸವಲತ್ತುಗಳು ನಿಘಂಟು ಇತ್ಯಾದಿಗಳ ಮಾದರಿಯಲ್ಲಿ ದೊರೆತರೆ ಕಿಸೆಯಲ್ಲಿ ಕನ್ನಡದ ಗ್ರಂಥಾಲಯಕ್ಕೂ ದೊಡ್ಡ ಸ್ಥಾನ ಸಿಗಲಿದೆ. ನಾವು ಭಾಷಾ ತಂತ್ರಜ್ಞಾನದ ಮಟ್ಟಿಗೆ ಇನ್ನೂ ೨ಜಿ ಯಲ್ಲೇ ಇದ್ದೇವೆ. ೫ ಜಿಗೆ ಜಿಗಿಯುವ ಪ್ರಯತ್ನ ಆಗಬೇಕಷ್ಟೇ. ತಂತ್ರಜ್ಞಾನದ ಅಳವಡಿಕೆಗೆ ಮನಸ್ಸಿಟ್ಟು ಸಾಧ್ಯತೆಗಳನ್ನು ತಮ್ಮದಾಗಿಸುವ ಕಾರ್ಪೋರೇಟ್ ಮೆಂಟಾಲಿಟಿ ನಮಗೆ ಬರಬೇಕು. ಆಗ ಓದುಗನೂ ಹೆಚ್ಚಿನದನ್ನು ಬಯಸುತ್ತಾನೆ. ಪುಸ್ತಕಗಳ ಡಿಜಿಟಲ್ ರೂಪಕ್ಕೂ ಹಣವ್ಯಯಿಸುತ್ತಾನೆ.

ಕನ್ನಡದ ಪುಸ್ತಕಗಳನ್ನು ಇಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು
https://pustaka.sanchaya.net/
https://digital.sanchaya.net/

https://archive.org/details/ServantsOfKnowledge

3 thoughts on “ಇದುವರೆಗೂ ಕನ್ನಡ ಸೇರಿ 16 ಭಾಷೆಗಳ 6100 ಪುಸ್ತಕಗಳನ್ನು ಡಿಜಿಟಲೀಕರಿಸಿದ್ದೇವೆ: ಓಂ ಶಿವಪ್ರಕಾಶ್

  1. ಕನ್ನಡದ ಎಷ್ಟು ಜೈನ ಕೃತಿಗಳು ಇ-ಪುಸ್ತಕ ಆಗಿವೆ.ಶ್ರವಣಬೆಳಗೊಳದಲ್ಲಿ ೧೦೦ ವರ್ಷಕ್ಕೂ ಹಿಂದಿನ ಕನ್ನಡ ಪುಸ್ತಕಗಳಿವೆ. ಅವುಗಳನ್ನು ಇ-ಪುಸ್ತಕ ಮಾಡಲು ಸಾಧ್ಯವೇ? ನಿರ್ದೇಶಕರು, ಜೈನ ಅಧ್ಯಯನ ಸಂಸ್ಥೆ, ಶ್ರವಣಬೆಳಗೊಳ, ಮೊ: 94828 10694

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: