ಸೋಮವಾರ ದಾವೋಸ್ ವರ್ಲ್ಡ್ ಎಕಾನಾಮಿಕ್ ಫೋರಂನ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ಘಟನೆ ನಡೆಯಿತು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೋದಿ ಅವರು ಬಳಸುತ್ತಿದ್ದ ಟೆಲಿಪ್ರಾಮ್ಟರ್ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದೇ ಅಭಾಸಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬಂದವು. ಈ ಹಿಂದೆಯೂ ಮೋದಿಯವರು ಭಾಷಣ ಮಾಡಲು ಟೆಲಿಪ್ರಾಮ್ಟರ್ ಬಳಸುತ್ತಾ ಬಂದಿರುವ ಬಗ್ಗೆ ಸಾಮಾಜಿಕ ಜಾಲತಾಣಿಗರು ಚರ್ಚಿಸುತ್ತಾ ಬಂದಿದ್ದಾರೆ. ರಾಜಕಾರಣಿಗಳು, ಸಾರ್ವಜನಿಕ ವ್ಯಕ್ತಿಗಳು ದೀರ್ಘ ಭಾಷಣಗಳನ್ನು ಮಾಡುವಾಗ ಈ ಟೆಲಿಪ್ರಾಮ್ಟರ್ ಬಳಸುವುದು ಸಾಮಾನ್ಯ. ಏನಿದು ಟೆಲಿಟ್ರಾಮ್ಟರ್? ಇದು ಹೇಗೆ ಕೆಲಸ ಮಾಡುತ್ತದೆ? ಇದರ ಕಿರುಪರಿಚಯ ಇಲ್ಲಿದೆ.
ಟೆಲಿಪ್ರಾಮ್ಟರ್ ಎಂದರೇನು?
ಆಟೋ ಕ್ಯೂ ಎಂದೂ ಕರೆಯಲ್ಪಡುವ ಟೆಲಿಪ್ರಾಮ್ಟರ್, ಟಿ.ವಿ ಅಥವಾ ಸಮಾರಂಭಗಳಲ್ಲಿ ಮಾತನಾಡುವ ವ್ಯಕ್ತಿಯ ಕಣ್ಣಿಗೆ ಕಾಣುವಂತೆ ಭಾಷಣದ ಸ್ಕ್ರಿಪ್ಟ್ ಅನ್ನು ಪ್ರದರ್ಶಿಸುವ ಸಾಧನ. ಟೆಲಿಪ್ರಾಮ್ಟರ್ ಬಳಕೆ ಇಂದಿನದಲ್ಲ. ಸುಮಾರು 1948ರಿಂದಲೂ ಇದನ್ನು ಬಳಸಲಾಗುತ್ತಿದೆ. ಈ ಹಿಂದೆ ಟಿ.ವಿಗಳಲ್ಲಿ ಸುದ್ದಿ ಮುಖ್ಯಾಂಶಗಳನ್ನು ಹಾಳೆಗಳಲ್ಲಿ ಬರೆದುಕೊಡಲಾಗುತ್ತಿತ್ತು. ಸುದ್ದಿ ವಾಚನ ಮಾಡುವವರು ಪದೇ ಪದೇ ತಲೆ ಬಗ್ಗಿಸಿ ಹಾಳೆ ನೋಡಿ ಸುದ್ದಿ ಓದುತ್ತಿದ್ದರು. ಇದು ನೋಡುಗರಿಗೆ ಆಭಾಸವನ್ನುಂಟು ಮಾಡುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಮೊದಮೊದಲು ಅರ್ಧ ರೋಲ್ ಕಾಗದದಲ್ಲಿ ಸುದ್ದಿ ಮುಖ್ಯಾಂಶಗಳನ್ನು ವಾಚನ ಮಾಡುವವರ ಎದುರಿಗೆ ರೋಲ್ ಮಾಡಲಾಗುತ್ತಿತ್ತು. ನಂತರದಲ್ಲಿ ಇದು ಸುಧಾರಣೆಗಳನ್ನು ಪ್ರಸ್ತುತ ಇದೊಂದು ಚಿಕ್ಕ ಡಿಜಿಟಲ್ ಸಾಧನವಾಗಿ ಬಳಕೆಯಲ್ಲಿದೆ.
ಟೆಲಿಪ್ರಾಮ್ಟರ್ ಜನಪ್ರಿಯತೆಯು ಇದು ಕೇವಲ ಟಿ.ವಿ. ಮಾಧ್ಯಮದವರು ಮಾತ್ರವಲ್ಲದೇ ರಾಜಕಾರಣಿಗಳು ಕೂಡ ಇದನ್ನು ಬಳಸುವಂತಾಗಿದೆ. ಆದರೆ ಕೆಲವೊಮ್ಮೆ ಇಂತಹ ಚಿಕ್ಕ ಯಂತ್ರಗಳು ಕೂಡ ಕೈಕೊಡುತ್ತವೆ. ರಾಜಕಾರಣಿಗಳು ಬಳಸುವ ಟೆಲಿಪ್ರಾಮ್ಟರ್ಗಳು ಕೈಕೊಟ್ಟರೆ ಅದೊಂದು ರಾಜಕೀಯ ಚರ್ಚೆಯ ವಿಷಯವಾಗುತ್ತದೆ ಎಂಬುದಕ್ಕೆ ನೆನ್ನೆ ನಡೆದ ಘಟನೆಯೇ ಸಾಕ್ಷಿ.
ಟೆಲಿಪ್ರಾಮ್ಟರ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಟೆಲಿಪ್ರಾಮ್ಟರ್ ಒಂದು ಪರದೆಯಾಗಿದ್ದು, ಅದು ಓದಬೇಕಾಗಿರುವ ಪಠ್ಯವನ್ನು ನಿರ್ದಿಷ್ಟ ವೇಗದಲ್ಲಿ ಚಲಿಸುತ್ತಿರುವಂತೆ ಪ್ರದರ್ಶಿಸುತ್ತದೆ. ಭಾಷಣ ಮಾಡುವವರು ಅಥವಾ ಓದುವವರು ಜನ ಅಥವಾ ಕ್ಯಾಮೆರಾವನ್ನು ನೋಡುತ್ತಲೇ ಮಾತನಾಡುವುದಕ್ಕೆ ಅನುಕೂಲಕರವಾಗುವ ಕೋನದಲ್ಲಿ ಇದನ್ನು ಗಮನಿಸಿ ಓದಬಹುದು. ಈ ವಿಡಿಯೋ ನೋಡಿ:
ಟೆಲಿಪ್ರಾಮ್ಟರ್ ಬಳಸಿದ ವಿಶ್ವನಾಯಕರು
1952ರಲ್ಲಿ ಅಮೇರಿಕಾದ ಅಧ್ಯಕ್ಷರಾಗಿದ್ದ ಡ್ವೈಟ್ ಡಿ ಐಸೆನ್ಹೋವರ್ ಅವರು ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ಟೆಲಿಪ್ರಾಮ್ಟರ್ ಬಳಸಿದ್ದರು. ರಾಷ್ಟ್ರವನ್ನು ಉದ್ದೇಶಿಸಿ ತಮ್ಮ ಭಾಷಣದ ಸಮಯದಲ್ಲಿ ಅವರು ತುಂಬಾ ನಿಧಾನವಾಗಿ ಚಲಿಸುತ್ತಿದ್ದ ಈ ಟೆಲಿಪ್ರಾಮ್ಟರ್ ಅನ್ನು ಬೈಯ್ಯುವುದು ಕೇಳಿಸಿದ್ದಾಗಿ ವರದಿಯಾಗಿತ್ತು.
ರೊನಾಲ್ಡ್ ರೇಗನ್, ಬಿಲ್ ಕ್ಲಿಂಟನ್, ಜಾರ್ಜ್ ಡಬ್ಯ್ಲೂ ಬುಷ್, ಸಾರಾ ಪಾಲಿನ್, ಡೊನಾಲ್ಡ್ ಟ್ರಂಪ್, ಬರಾಕ್ ಒಬಾಮಾ ಸೇರಿದಂತೆ ಹಲವಾರು ವಿಶ್ವ ನಾಯಕರು ಟೆಲಿಪ್ರಾಮ್ಟರ್ ಬಳಸುತ್ತಿದ್ದರು.