ಕನ್ನಡಕದ ಮೂಲಕವೇ ವಿಶ್ವದ ಬೆಸ್ಟ್ ಟೆಕ್ ಅನುಭವ ಉಣ ಬಡಿಸಲಿದ್ದಾರೆ ಅಂಬಾನಿ…!

ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಮೂಲಕ ಹೊಸ ಅಧ್ಯಾಯವನ್ನು ಶುರು ಮಾಡಿರುವ ಮುಖೇಶ್ ಅಂಬಾನಿ, ಜಿಯೋ ಮೂಲಕವೇ ಹೊಸ ಲೋಕವನ್ನು ಸೃಷ್ಠಿಸಲಿದ್ದಾರೆ ಎನ್ನುವುದು ಅವರ ಕಾರ್ಯ ಚಟುವಟಿಕೆಯಿಂದಲೇ ತಿಳಿದು ಬರುತ್ತಿದೆ.

ದೇಶದಲ್ಲಿ ಜಿಯೋ ತಂದಿರುವ ಬದಲಾವಣೆಯ ಗಾಳಿಯನ್ನು ಇನ್ನಷ್ಟು ಜೋರಾಗಿ ಬೀಸುವಂತೆ ಮಾಡುವ ಸಲುವಾಗಿ ವಿಶ್ವದ ಟೆಕ್‌ ದಿಗ್ಗಜರನ್ನು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸೇರಿಸಿಕೊಂಡಿದೆ. ಎಲ್ಲರನ್ನು ಒಳಗೊಂಡು ಒಂದೊಂದೇ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯನ್ನು ರೂಪಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಈ ಹಿಂದೇ ಮಾರುಕಟ್ಟೆಯಲ್ಲಿ ಟೆಕ್ ದೈತ್ಯ ಗೂಗಲ್, ಗೂಗಲ್ ಗ್ಲಾಸ್ ಎಂದು ಕರೆಯಲ್ಪಡುವ ಒಂದು ಉತ್ಪನ್ನವನ್ನು ನಿರ್ಮಾಣ ಮಾಡಿತ್ತು. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿತ್ತು. ಆದರೆ ಇದು ಮಾರುಕಟ್ಟೆಗೆ ಬರಲಿಲ್ಲ ಮತ್ತು ಅದು ಏನಾಯಿತು ಎನ್ನುವ ವಿಷಯವು ತಿಳಿದಿರಲಿಲ್ಲ. ಈಗ ಅದೇ ಮಾದರಿಯ ಉತ್ಪನ್ನವನ್ನು ಜಿಯೋ ಲಾಂಚ್ ಮಾಡಲು ಮುಂದಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ತನ್ನ 43 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಜಿಯೋ ಗ್ಲಾಸ್ ಎಂಬ ಹೊಸ ಉತ್ಪನ್ನವನ್ನು ಪ್ರದರ್ಶಿಸಿತು. ಇದು ಮಿಕ್ಸ್  ರಿಯಾಲಿಟಿ  ಸಲ್ಯೂಷನ್ ನಲ್ಲಿ ಕಾರ್ಯನಿರ್ವಹಿಸಲಿದೆ.

ಇದನ್ನು ಓದಿ: ಭಾರತೀಯ ಪ್ರಾದೇಶಿಕ ಭಾಷೆಗಳ ತಾಕತ್ತು ಗೂಗಲ್ ಗೆ ಗೊತ್ತು..! ಆದರೆ ..!?

ಸದ್ಯ ಜಿಯೋ ಗ್ಲಾಸ್‌ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಜಿಯೋ ಗ್ಲಾಸ್ ಸಾರ್ವಜನಿಕರಿಗೆ ಲಭ್ಯವಾದಾಗ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಡೆಮೊ ನೋಡಲು ಸಿಕ್ಕಿತು.

3 ಡಿ ವರ್ಚುವಲ್ ಕೊಠಡಿಗಳನ್ನು ಸಕ್ರಿಯಗೊಳಿಸಲು ಮತ್ತು ನೈಜ ಸಮಯದಲ್ಲಿ ಜಿಯೋ ಮಿಕ್ಸ್ಡ್ ರಿಯಾಲಿಟಿ ಸೇವೆಯ ಮೂಲಕ ಶಿಕ್ಷಕರು ಹೊಲೊಗ್ರಾಫಿಕ್ ತರಗತಿಗಳನ್ನು ನಡೆಸಲು ಹೊಸ ಜಿಯೋ ಗ್ಲಾಸ್ ಅನ್ನು ಬಳಕೆ ಮಾಡಬಹುದಾಗಿದೆ. ಇದಲ್ಲದೆ, ವರ್ಚುವಲ್ ಸಭೆಗಳನ್ನು ನಿರ್ವಹಿಸಲು ಸಹ ಬಳಸಬಹುದು ಎಂದು ಕಂಪನಿ ತಿಳಿಸಿದೆ.

“ಜಿಯೋ ಗ್ಲಾಸ್ ತಂತ್ರಜ್ಞಾನದ ಅತ್ಯಾಧುನಿಕ ಹಂತದಲ್ಲಿದೆ, ಇದು ಬಳಕೆದಾರರಿಗೆ ನಿಜವಾದ ಅರ್ಥಪೂರ್ಣವಾದ ತಲ್ಲೀನಗೊಳಿಸುವ ಅನುಭವವನ್ನು ನೀಡಲು ಅತ್ಯುತ್ತಮ ದರ್ಜೆಯ ಮಿಕ್ಸ್ಡ್ ರಿಯಾಲಿಟಿ ಸೇವೆಗಳನ್ನು ಒದಗಿಸುತ್ತದೆ” ಎಂದು  ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕಿರಣ್ ಥಾಮಸ್ ಹೇಳಿದರು.

ಜಿಯೋ ಗ್ಲಾಸ್ 75 ಗ್ರಾಂ ತೂಕವಿರುತ್ತದೆ ಮತ್ತು ಅದನ್ನು ಕೇಬಲ್ ಮೂಲಕ ಸ್ಮಾರ್ಟ್‌ಫೋನ್‌ಗೆ ಸಂಪರ್ಕ ಕಲ್ಪಿಸಬೇಕಾಗುತ್ತದೆ. ವರ್ಧಿತ ರಿಯಾಲಿಟಿ ವಿಡಿಯೋ ಸಭೆಗಳು ಮತ್ತು ಹೆಚ್ಚಿನ ಆಯ್ಕೆಗಳನ್ನು ನೀಡಲು 25 ಇನ್‌-ಬಿಲ್ಟ್ ಆಪ್‌ಗಳೊಂದಿಗೆ ಇದು ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ಹೇಳಿದೆ.

ಜಿಯೋ ಉತ್ಪನ್ನಗಳಿಗಾಗಿ ಗೂಗಲ್‌ನೊಂದಿಗೆ ಪಾಲುದಾರಿಕೆ ಹೊಂದಿದೆ, ಅಂದರೆ ಎರಡೂ ಕಂಪನಿಗಳು ಪರಸ್ಪರ ಸಹಕರಿಸಲು ಮತ್ತು ಉತ್ಪನ್ನವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಇದಲ್ಲದೇ ಫೇಸ್‌ಬುಕ್‌ ಸಹ ಇದರೊಂದಿಗೆ ಕೈ ಜೋಡಿಸಿರುವುದರಿಂದ ಸಾಧ್ಯವಾಗದೆ ಇರುವುದು ಯಾವುದು ಇಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.