ಖಾಸಗಿ ನೀತಿ ಜಾರಿಯನ್ನು ಕೈಬಿಟ್ಟ ವಾಟ್ಸ್‌ಆಪ್‌, ನಿಮ್ಮ ಖಾತೆ ಇನ್ನು ಡಿಲೀಟ್‌ ಆಗುವ ಚಿಂತೆಯಿಲ್ಲ

ತನ್ನ ಹೊಸ ಖಾಸಗಿ ನೀತಿಯನ್ನು ಒಪ್ಪಿಕೊಳ್ಳಬೇಕು, ಇಲ್ಲವಾದರೆ ಖಾತೆಯನ್ನು ಡಿಲೀಟ್‌ ಮಾಡುವುದಾಗಿ ಹೇಳಿದ್ದ ವಾಟ್ಸ್‌ಆಪ್‌, ಮೇ 15ಕ್ಕೆ ಜಾರಿ ಮಾಡಲು ಉದ್ದೇಶಿಸಿದ ಹೊಸ ನಿಯಮಗಳನ್ನು ಕೈಬಿಟ್ಟಿದೆ

ಮೇ 15ಕ್ಕೆ ಜಾರಿಗೊಳಿಸಲು ಉದ್ದೇಶಿಸಿದ್ದ ವಿವಾದಾತ್ಮಕ ಖಾಸಗಿ ನೀತಿ ನಿಯಮಾವಳಿಯನ್ನು ವಾಟ್ಸ್‌ಆಪ್‌ ಕೈಬಿಟ್ಟಿದೆ. ನಿಯಮಗಳಿಗೆ ಒಪ್ಪಿಕೊಳ್ಳದಿದ್ದರೆ, ಖಾತೆ ಡಿಲೀಟ್‌ ಮಾಡುವುದಾಗಿ ಹೇಳಿದ್ದ ವಾಟ್ಸ್‌ಆಪ್‌ ಈಗ ತನ್ನ ನಿಲುವಿನಿಂದ ಹಿಂದೆ ಸರಿದಿದೆ.

ಫೇಸ್‌ಬುಕ್‌ ಮಾಲೀಕತ್ವದಡಿ ಬಂದ ಮೇಲೆ ಸಾಕಷ್ಟು ಬದಲಾವಣೆಗಳನ್ನು ಕಂಡ ವಾಟ್ಸ್‌ಆಪ್‌ ಕಳೆದ ಜನವರಿ ತಿಂಗಳಲ್ಲಿ ಹೊಸ ಖಾಸಗಿ ನೀತಿಯನ್ನು ಜಾರಿಗೊಳಿಸುವುದಾಗಿ ಪ್ರಕಟಿಸಿತ್ತು .

ಬಳಕೆದಾರರನಿಗೆ ಯಾವುದೇ ಆಯ್ಕೆಯನ್ನು ನೀಡಿದ ಈ ನಿಯಮಾವಳಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಕೂಡ ಈ ನಿಯಮಗಳನ್ನು ಹಿಂಪಡೆಯುವುದಕ್ಕೆ ಒತ್ತಾಯಿಸಿತು.

ಹರ್ಷಾ ಗುಪ್ತ ಅವರು ಸಾರ್ವಜನಿಕ ಹಿತಾಸಕ್ತಿಯ ದಾವೆಯನ್ನು ದೆಹಲಿ ಹೈಕೋರ್ಟ್‌ನಲ್ಲಿ ಹೂಡಿದರು. ಹೈಕೋರ್ಟ್‌ ಕೇಂದ್ರಕ್ಕೆ ಈ ಕುರಿತು ನಿಲುವು ತಳೆಯುವ ಒತ್ತಡವೂ ಬಿತ್ತು.

ಅನಿರೀಕ್ಷಿತವಾದ ಪ್ರತಿರೋಧದಿಂದ ಬೆದರಿದ ವಾಟ್ಸ್‌ಆಪ್‌ ಫೆಬ್ರವರಿ 8ಕ್ಕೆ ಜಾರಿ ಮಾಡಲು ಉದ್ದೇಶಿಸಿದ ನಿಯಮಗಳನ್ನು ಮೇ 15ಕ್ಕೆ ಮುಂದೂಡಿತು. ಈ ನಡುವೆ ದೇಶದ ಎಲ್ಲ ಪ್ರಮುಖ ಪತ್ರಿಕೆಗಳ ಮುಖ ಪುಟದಲ್ಲಿ, ‘ನಾವು ನಿಮ್ಮ ಖಾಸಗಿತನ ಗೌರವಿಸುತ್ತೇವೆ’ ಎಂಬ ಜಾಹೀರಾತು ನೀಡಿ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿತು.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ವಾಟ್ಸ್‌ಆಪ್‌ ಬಳಕೆದಾರರು ಸಿಗ್ನಲ್‌ ಮತ್ತು ಟೆಲಿಗ್ರಾಮ್‌ ಆಪ್‌ಗಳತ್ತ ವಾಲಿದ್ದು, ದೊಡ್ಡ ಪೆಟ್ಟು ನೀಡಿತು. ಜನವರಿ 3ನೇ ವಾರದ ಹೊತ್ತಿಗೆ ಟೆಲಿಗ್ರಾಂ 75 ಲಕ್ಷ ಹಾಗೂ ಸಿಗ್ನಲ್‌ 2.5 ಕೋಟಿ ಭಾರತೀಯ ಬಳಕೆದಾರರನ್ನು ಪಡೆದುಕೊಂಡಿದ್ದು ವಾಟ್ಸ್‌ಆಪ್‌ಗೆ ಭಾರತೀಯ ಮಾರುಕಟ್ಟೆ ಕಳೆದುಕೊಳ್ಳುವ ಭೀತಿ ಹುಟ್ಟಿಸಿತು.

ತನ್ನ ಪಿಆರ್‌ ಪ್ರಯತ್ನಗಳ ಮೂಲಕ ಭಾರತೀಯರ ಮನಸ್ಸು ಗೆಲ್ಲುವ ಪ್ರಯತ್ನ ಹೆಚ್ಚುಫಲವೇನು ಕೊಡಲಿಲ್ಲ. ಶುಕ್ರವಾರ ಹೇಳಿಕೆ ನೀಡಿರುವ ವಾಟ್ಸ್‌ಆಪ್‌, ಕಳೆದ ಕೆಲವು ತಿಂಗಳಿಂದ ಖಾಸಗಿ ನೀತಿ ವಿಷಯದಲ್ಲಿರುವ ಗೊಂದಲ, ತಪ್ಪು ಮಾಹಿತಿಯನ್ನು ಸ್ಪಷ್ಟಪಡಿಸುವ ಪ್ರಯತ್ನ ಮಾಡಿದ್ದೇವೆ” ಎಂದಿದೆ.

ವಾಟ್ಸ್‌ಆಪ್‌ ಹೊಸ ನಿಯಮಗಳನ್ನು ಒಪ್ಪಿಕೊಳ್ಳದೇ ಬಳಸುತ್ತಿರುವವರು, ಖಾತೆ ಡಿಲೀಟ್‌ ಆಗುವ ಭಯವಿಲ್ಲದೆ ಇನ್ನು ವಾಟ್ಸ್‌ಆಪ್‌ ಬಳಸಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.