ವಾಟ್ಸ್‌ಆಪ್‌ನಲ್ಲಿ ಹಣ ಕಳಿಸಿದರೆ ಗರಿಷ್ಠ 10 ರೂ ಕ್ಯಾಷ್‌ ಬ್ಯಾಕ್‌ ಸಿಗುತ್ತಂತೆ!

ಬಹುದಿನಗಳಿಂದ ಪರೀಕ್ಷೆ ನಡೆಸುತ್ತಿದ್ದ ವಾಟ್ಸ್ಆಪ್‌ ಪೇ ಈಗಾಗಲೇ ಭಾರತದಲ್ಲಿ ಜಾರಿಗೆ ಬಂದಿದೆ. ಹೆಚ್ಚು ಹೆಚ್ಚು ಬಳಕೆದಾರರನ್ನು ಸೆಳೆಯುವುದಕ್ಕಾಗಿ ಈಗ ತಮ್ಮ ಆಪ್‌ಮೂಲಕ ಹಣ ಕಳಿಸುವವರಿಗೆ ಕ್ಯಾಷ್‌ ಬ್ಯಾಕ್‌ ನೀಡಲು ಮುಂದಾಗಿದೆ.

2014ರಲ್ಲಿ ವಾಟ್ಸ್‌ಆಪ್‌ ಅನ್ನು ಖರೀದಿಸಿದ ಫೇಸ್‌ಬುಕ್‌ ಸಂಸ್ಥೆ, ವಾಟ್ಸ್‌ಆಪ್‌ನಿಂದ ಆದಾಯ ಗಳಿಸುವ ದಾರಿಗಳಿಗಾಗಿ ಹುಡುಕುತ್ತಲೇ ಇತ್ತು. ವಾಟ್ಸ್‌ಆಪ್‌ ಸ್ಟೇಟಸ್‌ನಲ್ಲಿ ಜಾಹೀರಾತು ಪರಿಚಯಿಸುವ ಉದ್ದೇಶವಿತ್ತಾದರೂ ಬಳಕೆದಾರರ ಖಾಸಗಿತನಕ್ಕೆ ಸಂಬಂಧಿಸಿದ ಟೀಕೆಯ ಹಿನ್ನೆಲೆಯಲ್ಲಿ ಹಿಂದೆ ಸರಿದಿತ್ತು.

ಆದರೆ ಹೇಗಾದರೂ ವಾಟ್ಸ್‌ಆಪ್‌ನಿಂದ ಹಣಗಳಿಸುವ ಅದರ ಪ್ರಯತ್ನ ನಿಲ್ಲದೆ ವಾಟ್ಸ್ಆಪ್‌ ಪೇ ಮೂಲಕ ಸಾಧ್ಯವಾಗಿಸಿಕೊಳ್ಳಲು ಹೊರಟಿದೆ. ಅತಿ ದೊಡ್ಡ ಬಳಕೆದಾರರನ್ನು ಹೊಂದಿರುವ ಭಾರತ ದೇಶದಲ್ಲಿ ಇದರ ಪ್ರಯೋಗ ನಡೆದು, ಬಹುತೇಕ ಎಲ್ಲ ಬಳಕೆದಾರರಿಗೂ ವಾಟ್ಸ್‌ಆಪ್‌ ಸೇವೆ ಲಭ್ಯವಾಗಿದೆ. ಆದರೆ ಗೂಗಲ್‌ ಪೇ, ಫೋನ್‌ ಪೇ, ಅಮೆಜಾನ್‌ ಪೇಯಂತಹ ಹಲವು ಯುಪಿಐ ಸೇವೆಗಳನ್ನು ಬಳಸುತ್ತಿರುವವರು ಇನ್ನು ವಾಟ್ಸ್‌ಆಪ್‌ ಪೇ ಬಳಸುತ್ತಿಲ್ಲ. ಹಾಗಾಗಿ ಹೆಚ್ಚು ಬಳಸುವಂತೆ ಆಕರ್ಷಿಸಲು ಕ್ಯಾಷ್‌ ನೀಡಲು ಮುಂದಾಗಿದೆ. ಪ್ರತಿ ವ್ಯವಹಾರದ 48 ಗಂಟೆಗಳ ನಂತರ ನಿಮಗೆ ಗರಿಷ್ಠ 10 ರೂ ದೊರೆಯಲಿದೆ.

ಗೂಗಲ್‌ ಮತ್ತು ಅಮೆಜಾನ್‌ ಪೇಗಳು ನೀಡುತ್ತಿರುವ ಕ್ಯಾಷ್‌ಬ್ಯಾಕ್‌, ಕೂಪನ್‌ ಕೊಡುಗೆಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ. ಜನವರಿ 2021ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 5 ಲಕ್ಷ ಮಂದಿ ವಾಟ್ಸ್‌ಆಪ್‌ ಪೇ ಬಳಸುತ್ತಿದ್ದಾರೆ. ಯುಪಿಐ ಕ್ಷೇತ್ರಕ್ಕೆ ತಡವಾಗಿ ಕಾಲಿಟ್ಟಿದ್ದು ಇದಕ್ಕೆ ಕಾರಣವಿರಬಹುದು. ಕಳೆದ ತಿಂಗಳು ಫೋನ್‌ ಪೇ 1600 ಕೋಟಿ ರೂ.ಗಳನ್ನು, ಗೂಗಲ್‌ ಪೇ 1200 ಕೋಟಿ ರೂ.ಗಳ ವಹಿವಾಟು ಮಾಡಿರುವುದಾಗಿ ತಿಳಿದು ಬಂದಿದೆ.

ತನ್ನ ವಾಟ್ಸ್‌ಪೇ ಬಳಕೆದಾರರ ಸಂಖ್ಯೆಯನ್ನು ಹಿಗ್ಗಿಸುವ ನಿಟ್ಟಿನಲ್ಲಿ ವಾಟ್ಸ್‌ಆಪ್‌ ಕ್ಯಾಷ್‌ಬ್ಯಾಕ್‌ ಕೊಡುಗೆ ನೀಡುವ ಪರೀಕ್ಷೆ ನಡೆಸುತ್ತಿದೆ. ಯಶಸ್ವಿಯಾದಲ್ಲಿ ಇನ್ನಷ್ಟು ಕೊಡುಗೆಗಳನ್ನು ನೀಡಲು ಮುಂದಾಗಬಹುದು ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.