ಇಂದು ಭೌತವಿಜ್ಞಾನಕ್ಕೆ ನೊಬೆಲ್‌ ಪ್ರಕಟ ; ಈ ಸಂಶೋಧನೆಗಳು ಸ್ಪರ್ಧೆಯಲ್ಲಿವೆ..

ನೊಬೆಲ್‌ ಪ್ರಶಸ್ತಿಯ ಘೋಷಣೆ ಆರಂಭವಾಗಿದೆ. ವೈದ್ಯಕೀಯ ಕ್ಷೇತ್ರದ ಘೋಷಣೆಯಾಗಿದ್ದು, ಅಕ್ಟೋಬರ್‌ 8 ರಂದು ಭೌತವಿಜ್ಞಾನದ ಪ್ರಶಸ್ತಿ ಪ್ರಕಟವಾಗಲಿದೆ. ಈ ಬಾರಿ ಯಾವ ಸಂಶೋಧನೆಗೆ ಗೌರವ ಸಲ್ಲಲ್ಲಿದೆ? ಭಾರತೀಯ ಕಾಲ ಮಾನ ಸಂಜೆ 4.15ಕ್ಕೆ ತಿಳಿಯಲಿದೆ

ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ನೊಬೆಲ್‌ ಪುರಸ್ಕಾರವನ್ನು ನೀಡಲಾಗುತ್ತಿದೆ. ವಿಜ್ಞಾನ, ಅರ್ಥಶಾಸ್ತ್ರ, ಸಾಹಿತ್ಯ ಮತ್ತು ಶಾಂತಿ ಸೇರಿದಂತೆ ಒಟ್ಟು ಆರು ವಿಭಾಗಗಳಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಜಗತ್ತಿನ ಶ್ರೇಷ್ಠ ಪುರಸ್ಕಾರವೆಂದು ಪರಿಗಣಿಸಲಾಗಿದೆ.

ಈ ವರ್ಷದ ಪ್ರಶಸ್ತಿ ಸೋಮವಾರ ವೈದ್ಯ ವಿಜ್ಞಾನದ ಸಂಶೋಧನೆಗೆ ಪ್ರಶಸ್ತಿ ಘೋಷಣೆಯಾಗಿದ್ದು, ಇಂದು ಭೌತಶಾಸ್ತ್ರದ ಸರದಿ. ಸಾಮಾನ್ಯವಾಗಿ ಇತರೆ ಪ್ರಶಸ್ತಿಗಳಂತೆ ನೊಬೆಲ್‌ ಪ್ರಶಸ್ತಿಯ ಅಂತಿಮ ಪಟ್ಟಿ, ಅದರಲ್ಲಿರುವ ವಿಜ್ಞಾನಿಗಳು ಎಂಬೆಲ್ಲಾ ಮಾಹಿತಿ ಹೊರಬರುವುದಿಲ್ಲ.

ಆದರೆ ವಿಜ್ಞಾನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಅನೇಕರು ತಮ್ಮ ಕ್ಷೇತ್ರದ ಸಾಧನೆಗಳಲ್ಲಿ ಈ ಬಾರಿ ಇದಕ್ಕೆ ಮನ್ನಣೆ ಸಿಗಬಹುದು ಎಂಬ ಲೆಕ್ಕಾಚಾರ ಹಾಕುತ್ತಿರುತ್ತಾರೆ. ಪ್ರಸ್ತುತ 2019ರ ಸಾಲಿನ ಭೌತಶಾಸ್ತ್ರದ ವಿಭಾಗದ ಪ್ರಶಸ್ತಿಗೆ ಗಮನಸೆಳೆಯುತ್ತಿರುವ ಅಂತಹ ಅಂತಹ ಬಹುಮುಖ್ಯ ಸಂಶೋಧನೆಗಳು ಇಲ್ಲಿವೆ

ಸೌರವ್ಯೂಹದಾಚೆಗಿನ ಗ್ರಹಗಳು, ಕಪ್ಪು ಕುಳಿಗಳು

ತೊಂಬತ್ತರ ದಶಕದವರೆಗೆ ನಾವೆಲ್ಲರೂ ಭಾವಿಸಿದ್ದು ಎಂಟೊ ಒಂಬತ್ತು ಗ್ರಹಗಳು- ಪ್ಲೂಟೋವನ್ನೂ ಸೇರಿಸಿಕೊಂಡು – ಇವೆ ಎಂದು. ಆದರೆ ಅಲ್ಲಿಂದೀಚೆಗೆ ವಿಜ್ಞಾನಗಳು ಸೌರಮಂಡಲದಾಚೆಗೂ ಇರುವ 4,000 ಗ್ರಹಗಳನ್ನು ಪತ್ತೆ ಮಾಡಿದ್ದಾರೆ. ಹಾಗಾಗಿ ನಮ್ಮ ಸೌರವ್ಯೂಹವೇ ಅನನ್ಯವಾದದ್ದು ಎಂದು ನಂಬಿದ್ದ ನಮಗೆ, ನಮ್ಮ ಕಲ್ಪನೆಗೂ ನಿಲುಕದ ಸಂಗತಿಗಳು ಬಹಳಷ್ಟಿವೆ ಎಂಬುದು ವೇದ್ಯವಾಯಿತು. ಈ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡಿದ ಮೊದಲಿಗರು ಅಲೆಕ್ಸಾಂಡರ್‌ ವೋಲ್ಸಜಾನ್‌. 1992ರಲ್ಲಿ ಮೊದಲ ಬಾರಿಗೆ ಸೌರವ್ಯೂಹದಾಚೆಗೆ ಎರಡು ಗ್ರಹಗಳನ್ನು ಗುರುತಿಸಿದರು. ಅವುಗಳಿಗೆ ಪೋಲ್ಟರ್‌ಜಿಸ್ಟ್‌ ಮತ್ತು ಫೋಬೆಟರ್‌ ಎಂದು ಹೆಸರಿದರು. ಭೂಮಿಯಿಂದ 2300 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ನ್ಯೂಟ್ರನ್‌ ನಕ್ಷತ್ರದ ಸುತ್ತ ಸುತ್ತುತ್ತಿವೆ. ನಂತರದಲ್ಲಿ 1995ರಲ್ಲಿ ಮೈಕೆಲ್‌ಮೇಯರ್‌ ಮತ್ತು ಡೈಡಿಯರ್‌ ಕ್ವೆಲೊಜ್‌ ಕೇವಲ 50 ಜ್ಯೋತಿರ್ವರ್ಷ ದೂರದಲ್ಲಿ ಸೂರ್ಯನಂತಿರುವ ನಕ್ಷತ್ರದ ಸುತ್ತ ಸುತ್ತುವ ಗ್ರಹಗಳನ್ನು ಗುರುತಿಸಿದರು. ಇವರು ಈ ಗ್ರಹಗಳನ್ನು ಗುರುತಿಸುವುದಕ್ಕೆ ಅನನ್ಯವಾದ ವಿಧಾನವನ್ನು ಅನುರಿಸಿದ್ದರು.

ಇವುಗಳ ಜೊತೆಗೆ ಈ ವರ್ಷದ ಆರಂಭದಲ್ಲಿ ಕಪ್ಪು ಹುಳಿಯ ಚಿತ್ರವೊಂದು ವೈರಲ್‌ ಆಗಿತ್ತು. ಏಪ್ರಿಲ್‌ನಲ್ಲಿ ಅಧಿಕೃತವಾಗಿ ಪ್ರಕಟಣೆ ನೀಡಿದ ಈವೆಂಟ್‌ ಹಾರಿಜನ್‌ ಟೆಲಿಸ್ಕೋಪ್‌ ಕೊಲಬೊರೇಷನ್‌, ಕಪ್ಪುಕುಳಿಯೊಂದರ ಚಿತ್ರವನ್ನು ಸೆರೆಹಿಡಿದುದಾಗಿ ತಿಳಿಸಿತು. ಇವು ಅತಿ ಮಹತ್ವದ ಸಂಶೋಧನೆಗಳಾಗಿ ಚರ್ಚೆಯಲ್ಲಿವೆ.

ಎರಡು ಹೊಸ ಸೂಪರ್‌ ಕಂಡಕ್ಟರ್‌ಗಳು

ಶೂನ್ಯ ಪ್ರತಿರೋಧವಿರುವ ವಸ್ತುವಿನ ಮೂಲಕ ವಿದ್ಯುತ್‌ ಹರಿದು ಹೋಗುವುದನ್ನು ಸೂಪರ್‌ ಕಂಡಕ್ಟಿವಿಟಿ ಎನ್ನುತ್ತಾರೆ. ಇದನ್ನು ಮೊದಲು ಕಂಡುಕೊಂಡಿದ್ದು ಹೀಕೆ ಕ್ಯಾಮರ್‌ಲಿಂಗ್‌ ಒನೆಸ್‌. 1911ರ ಈ ಸಂಶೋಧನೆಗೆ 1913ರಲ್ಲಿ ನೊಬೆಲ್‌ ಪುರಸ್ಕಾರ ನೀಡಲಾಗಿತ್ತು. 1957ರಲ್ಲಿ ಜಾನ್‌ ಬರ್ಡೀನ್‌, ಲಿಯೋನ್‌ ಕೂಪರ್‌ ಮತ್ತು ರಾಬರ್ಟ್‌ ಶ್ರೀಫರ್‌ ಮತ್ತಷ್ಟು ಹೊಸ ವಿವರಗಳನ್ನು ನೀಡಿದ್ದರು. ಇವರಿಗೆ 1972ರಲ್ಲಿ ನೊಬೆಲ್‌ ಲಭಿಸಿತು. 1986ರಲ್ಲಿ ಜೊಹಾನೆಸ್‌ ಜಾರ್ಜ್‌ ಬೆಡ್‌ನೋರ್ಜ್‌ ಮತ್ತು ಅಲೆಕ್ಸ್‌ ಮುಲ್ಲರ್‌ ಕಾಪರ್ ಆಕ್ಸೈಡ್‌ ಇರುವ ಪದಾರ್ಥವನ್ನು ಕಂಡು ಕೊಂಡರು. ಇದು 1957ರಲ್ಲಿ ಪ್ರತಿಪಾದಿಸಿದ ಸಿದ್ಧಾಂತದಲ್ಲಿ ಹೇಳಿದಕ್ಕಿಂತ ಹೆಚ್ಚಿನ ತಾಪಮಾನದಲ್ಲೂ ತನ್ನ ಸೂಪರ್‌ ಕಂಡಕ್ಟಿವಿಟಿ ಗುಣವನ್ನು ಉಳಿಸಿಕೊಳ್ಳ ಸಾಮರ್ಥ್ಯವಿರುವ ಪದಾರ್ಥವೆಂದು ಮುಲ್ಲರ್‌ ಜೋಡಿ ಕಂಡುಕೊಂಡಿತು. ಇವರಿಗೂ 1987ರಲ್ಲಿ ನೊಬೆಲ್‌ ಲಭಿಸಿತು. ಅಲ್ಲಿಂದ ಎರಡು ದಶಕಗಳ ಕಾಲ ತಾಮ್ರದ ಆಕ್ಸೈಡ್ ಯಾವುದೇ ಸವಾಲುಗಳಿಲ್ಲದೆ ಬಳಕೆಯಾಗುತ್ತಾ ಬಂದಿತು. ಆದರೆ 2008ರಲ್ಲಿ ಹಿಡಿಯೋ ಹೊಸೊನೊ ನೇತೃತ್ವದ ಜಪಾನಿ ವಿಜ್ಞಾನಿಗಳ ತಂಡ, ಹೊಸ ಶ್ರೇಣಿಯ ಕಬ್ಬಿಣವನ್ನು ಗುರುತಿಸಿದು. ಇದು ಅತಿ ಹೆಚ್ಚಿನ ತಾಪಮಾನದಲ್ಲೂ ವಿದ್ಯುತ್‌ ಹರಿಯುವ ಸಾಮರ್ಥ್ಯವನ್ನು ಉಳಿಸಿಕೊಳ್ಳಬಲ್ಲದು ಎಂದು ಸಾಬೀತು ಮಾಡಿದರು. 2014ರಲ್ಲಿ ಮಿಕೇಲ್‌ ಎರೆಮಟ್ಸ್‌ ನೇತೃತ್ವದ ಜರ್ಮನ್‌ ವಿಜ್ಞಾನಿಗಳ ತಂಡ ಹೈಡ್ರೋಜನ್‌ ಉಳ್ಳ ಸೂಪರ್‌ಕಂಡಕ್ಟರ್‌ ವಸ್ತುವನ್ನು ಕಂಡುಕೊಂಡರು. ಈ ಸೂಪರ್‌ ಕಂಡಕ್ಟರ್‌ಗಳು ಈ ಬಾರಿ ನೊಬೆಲ್‌ ಗೌರವ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಆಮ್ಲಜನಕ ಲಭ್ಯತೆಗೆ ತಕ್ಕಂತೆ ಒಗ್ಗಿಕೊಳ್ಳುವ ಜೀವಕೋಶ ಕುರಿತ ಸಂಶೋಧನೆಗೆ ವೈದ್ಯಕೀಯ ನೊಬೆಲ್‌

ಕ್ವಾಂಟಂ ಸಂವಹನ

ಕಳೆದ ವರ್ಷದ ಮಾತು. ಕ್ವಾಂಟಂ ಎನ್‌ಕ್ರಿಪ್ಟೆಡ್‌ ವಿಡಿಯೋ ಕರೆಯೊಂದು ಚೀನಾ ಮತ್ತು ಆಸ್ಟ್ರಿಯಾ ನಡುವೆ ವಿನಿಮಯವಾಯಿತು. ಇದನ್ನು ಸಾಧ್ಯವಾಗಿಸಿದ್ದು ಕ್ವಾಂಟಂ ಕಮ್ಯುನಿಕೇಷನ್‌ ಸ್ಯಾಟಲೈಟ್ ಮೂಲಕ . ಮೊತ್ತ ಮೊದಲ ಬಾರಿಗೆ ಇಂಥದ್ದೊಂದು ಸಂವಹನವನ್ನು ವಿಜ್ಞಾನಿಗಳು ಸಾಧ್ಯವಾಗಿಸಿದ್ದರು. ಕ್ವಾಂಟಂ ಕಮ್ಯುನಿಕೇಷನ್‌ ಅಂದರೆ, ಪ್ರಬಲ ಸುರಕ್ಷತೆಯ ಸಂವಹನ-ಮಾಹಿತಿ ವಿನಿಮಯದ ಮಾಧ್ಯ. ಸೈಬರ್‌ ಸೆಕ್ಯುರಿಟಿ, ಖಾಸಗಿತನದ ಎಲ್ಲವೂ ರಾಜಿಯಾಗಿರುವ ಈ ಹೊತ್ತಲ್ಲಿ ಭಾರಿ ಮಹತ್ವದ ಸಂಶೋಧನೆ ಇದು. ಕ್ವಾಂಟಂ ಸಂವಹನ ಎರಡು ವ್ಯಕ್ತಿಗಳ ನೇರವಾಗಿ ನಡೆಯುತ್ತದೆ. ಸ್ಯಾಟಲೈಟ್‌ ಫೋನ್‌ಗಳ ಮಾದರಿಯಲ್ಲಿ. ಆದರೆ ಇಲ್ಲಿ ಮಾಹಿತಿ ವಿನಿಮಯದ ಕ್ರಮವು ಫೋಟೋನ್‌ಗಳ ರೀತಿಯಲ್ಲಿ ಸಂವಹನವಾಗುತ್ತವೆ. ಅಂದರೆ ಫೋಟೋನ್‌ಗಳು ತನ್ನದೇ ಪ್ರತಿರೂಪಗಳನ್ನು ಹುಟ್ಟುಹಾಕುವುದಿಲ್ಲ. ಈ ಪದ್ಧತಿಯಲ್ಲಿ ವಿನಿಮಯವಾಗುವ ಯಾವುದೇ ಸಂವಹನವನ್ನು ಹ್ಯಾಕ್‌ ಮಾಡಲು ಆಗುವುದಿಲ್ಲ ಎಂಬುದನ್ನು ವಿಜ್ಞಾನಿಗಳು ಅರಿತರು. ಚೀನಾದ ವಿಜ್ಞಾನಿಗಳು ಅಂತಹ ಮಾದರಿಯನ್ನು ಯಶಸ್ವಿಯಾಗಿ ಪ್ರಯೋಗಿಸಿದರು. ಈಗ ಅಮೆರಿಕ ರಾಷ್ಟ್ರೀಯ ಕ್ವಾಂಟಂ ಪ್ರಯೋಗದ ಕಾಯ್ದೆಗೆ ಜಾರಿಗೊಳಿಸಿದೆ. ಬ್ಯಾಂಕ್‌ಗಳು ತಮ್ಮ ಮಾಹಿತಿಯನ್ನು ಸುರಕ್ಷಿತವಾಗಿಸುವುದಕ್ಕೆ ಈ ತಂತ್ರಜ್ಞಾನವನ್ನು ಅನುಸರಿಸುವುದಕ್ಕೆ ಮುಂದಾಗಿದೆ. ಗೂಗಲ್‌ ಮತ್ತು ಐಬಿಎಂ ಕ್ವಾಂಟಂ ಕಂಪ್ಯೂಟರ್‌ಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ಈ ಕ್ಷೇತ್ರದಲ್ಲಿ ಹೆಸರು ಮಾಡಿರುವವರು ಮೂವರು ಭೌತಶಾಸ್ತ್ರಜ್ಞರು ಜಾನ್‌ ಕ್ಲಾಸರ್‌, ಆಲೈನ್‌ ಆಸ್ಪೆಕ್ಟ್‌ ಮತ್ತು ಆಂಟನ್‌ ಝೀಲಿಂಗರ್‌.