ದಿಢೀರನೆ ಮೊಬೈಲ್ ಕರೆ, ಡಾಟಾ ದರ ಏರುತ್ತಿರುವುದು ಯಾಕೆ ಗೊತ್ತಾ?

ಜಿಯೋ ಕಾಲಿಟ್ಟಿದ್ದರಿಂದ ಟೆಲಿಕಾಂ ವಲಯದಲ್ಲಿ ತೀವ್ರವಾದ ಸ್ಪರ್ಧೆ ಏರ್ಪಟ್ಟು, ಕರೆ ಮತ್ತು ಡಾಟಾವನ್ನು ಅತ್ಯಂತ ಅಗ್ಗದ ಬೆಲೆಗೆ ನೀಡಲಾಯಿತು. ಈ ಸ್ಪರ್ಧೆಯಲ್ಲಿ ಭಾರತದ ಟೆಲಿಕಾಂ ಕಂಪನಿಗಳು ಹೈರಾಣಾಗಿವೆ. ಕೆಲವು ಸೇವೆ  ನಿಲ್ಲಿಸಿವೆ, ಕೆಲವು ದೇಶ ಬಿಡಲು ಸಿದ್ಧವಾಗಿವೆ. ಈ ನಡುವೆ ಎಲ್ಲ ಟೆಲಿಕಾಂ ಕಂಪನಿಗಳು ದರ ಹೆಚ್ಚಿಸಲು ಮುಂದಾಗಿವೆ

ಭಾರತೀಯ ಖಾಸಗಿ ದೂರಸಂಪರ್ಕ ಸೇವೆಯನ್ನು ಒದಗಿಸುವ ಮುಂಚೂಣಿಯ ಸಂಸ್ಥೆಗಳಾದ ರಿಲಯನ್ಸ್ ಜಿಯೋ ಇನ್ಫೋಕಾಮ್, ಭಾರ್ತಿ ಏರಟೆಲ್ ಹಾಗೂ ವೋಡಾಫೋನ್ ಐಡಿಯಾ ಲಿಮಿಟೆಡ್ ಕಂಪನಿಗಳು ತಮ್ಮ ಮೊಬೈಲ್ ಪ್ರೀಪೇಯ್ಡ್ ಗ್ರಾಹಕರ ಕರೆ ಮತ್ತು ಡೇಟಾ ದರಗಳನ್ನು 40% ಹೆಚ್ಚಿಸಲು ಮುಂದಾಗಿವೆ. ಇದೇ ಡಿಸೆಂಬರ್ 3-6ನೇ ತಾರೀಖಿನಿಂದ ಹೊಸ ದರಗಳು ಜಾರಿಯಾಗುತ್ತಿವೆ. 2016 ರ ನಂತರ ಮೊಬೈಲ್ ಕರೆಗಳ ಸೇವೆಯ ದರಗಳಲ್ಲಿ ಏರಿಕೆಯಾಗುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ವರ್ಷಾಂತ್ಯದಲ್ಲಿ ಈ ದಿಢೀರ್ ಬೆಳವಣಿಗೆಯಿಂದ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

ವೋಡಾಫೋನ್ ಐಡಿಯಾ ದರಗಳಿಗೆ ಹೋಲಿಸಿದರೆ ಏರ್ ಟೆಲ್ ದರಗಳ ಸ್ವಲ್ಪ ಮಟ್ಟಿಗೆ ಗ್ರಾಹಕ ಸ್ನೇಹಿ ಹಾಗೂ ಅಗ್ಗವಾಗಿರಲಿವೆ. ಗ್ರಾಹಕರು ಬೇರೆ ಕಂಪನಿಗಳ ಮೊಬೈಲ್ ನಂಬರ್ ಗೆ ಕರೆ ಮಾಡಿದರೆ (Off Net Calls) ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ಭರಿಸಬೇಕಾಗುತ್ತದೆ.

ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಕಂಪನಿಯು ಇದೇ ಡಿಸೆಂಬರ್ 6 ರಿಂದ ತನ್ನ ನವೀನ All in One Plan ಗ್ರಾಹಕರಿಗೆ ಪರಿಚಯಿಸಲಿದೆ. ಇದರಲ್ಲಿ ಕೂಡ ಕರೆ ಮತ್ತು ಡೇಟಾ ದರಗಳು ಗರಿಷ್ಠ ಶೇ.40 ರಷ್ಟು ಹೆಚ್ಚಳವಾಗಲಿವೆ. ದೂರಸಂಪರ್ಕ ದರಗಳ ಪರಿಷ್ಕರಣೆ  ದೂರ ಸಂಪರ್ಕ ಸೇವಾ ಸಂಸ್ಥೆಗಳಿಗೆ ತೀರಾ ಅನಿವಾರ್ಯವಾಗಿ ಪರಿಣಮಿಸಿದೆ. ಭಾರೀ ನಷ್ಟವನ್ನು ಭರಿಸುವ ಶುಲ್ಕ ಹೆಚ್ಚಳ  ತಂತ್ರವನ್ನು ಅನುಸರಿಸುವುದರಿಂದ ಮೊಬೈಲ್ ಸೇವಾ ವಹಿವಾಟು ಲಾಭದಾಯಕವಾಗಿರಲು ಈ ನಿರ್ಧಾರವನ್ನು ಪ್ರಕಟಿಸಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ವೋಡಾಫೋನ್ ಐಡಿಯಾ ಮತ್ತು ಏರ್ ಟೆಲ್ ಕಂಪನಿಗಳ ಒಟ್ಟಾರೆ ನಷ್ಟ ರೂ.74 ಸಾವಿರ ಕೋಟಿಗಳಷ್ಟಾಗಿದೆ. ಇದರ ಜೊತೆಗೆ ಕೇಂದ್ರ ಸರಕಾರಕ್ಕೆ ಮೊಬೈಲ್ ಕಂಪನಿಗಳು ತರಂಗಾಂತರ ಬಳಕೆ (Spectrum Usage) ಹಾಗೂ ಲೈಸನ್ಸ್ ಶುಲ್ಕವನ್ನು ದಂಡ ಹಾಗೂ ಬಡ್ಡಿಯೊಂದಿಗೆ ಪಾವತಿಸಬೇಕಾಗಿದೆ.

ಜಿಯೋ ದರ ಸಮರ ದಿಂದ ತತ್ತರಿಸಿದ ಭಾರತೀಯ ದೂರಸಂಪರ್ಕ ಮಾರುಕಟ್ಟೆ ದೂರಸಂಪರ್ಕ ಕ್ಷೇತ್ರದ ವಿಶ್ಲೇಷಕರ ಪ್ರಕಾರ 2015 ಡಿಸೆಂಬರ್ ನಲ್ಲಿ ರಿಲಯನ್ಸ್ ಜಿಯೋ ಉಚಿತ ಹಾಗೂ ಅಗ್ಗದ 4G ಸೇವೆ ಆರಂಭವಾದ ಮೇಲೆ ದರ ಸಮರದಿಂದ ಸ್ಪರ್ಧೆಯನ್ನು ಎದುರಿಸಲಾಗದೇ, ಹೊಸ ತಂತ್ರಜ್ಞಾನಗಳ ಮೇಲೆ ಹೂಡಿಕೆ ಮಾಡಲಾಗದೇ ನಷ್ಟವನ್ನು ಅನುಭವಿಸಿ, ಉದ್ಯೋಗ ಕಡಿತಗಳೆಂಬ ಕಠಿಣ ತಂತ್ರಗಳನ್ನು ಬಳಸಿ ಕೊನೆಗೆ ಹಲವಾರು ಟೆಲಿಕಾಂ ಸಂಸ್ಥೆಗಳು ಮೂಲೆಗುಂಪಾದವು ಹಾಗೂ ದಿವಾಳಿ ಎದ್ದವು. ಕೆಲವು ಸಂಸ್ಥೆಗಳು ನಷ್ಟವನ್ನು ಭರಿಸಲಾಗದೆ ಮತ್ತೊಂದು ಸಂಸ್ಥೆಗಳೊಂದಿಗೆ ವಿಲೀನಗೊಂಡವು. ಅದರಲ್ಲಿ ಪ್ರಮುಖವಾಗಿ ಎಂ.ಟಿ.ಎಸ್, ಟಾಟಾ ಡೊಕೋಮೋ, ಏರ್ಸೆಲ್, ರಿಲಾಯನ್ಸ್ ಕಮ್ಯುನಿಕೇಶನ್ಸ್, ಟೆಲಿನಾರ್ ಮುಂತಾದವು ಸೇರಿವೆ. ಸರಕಾರಿ ಸ್ವಾಮ್ಯದ ಬಿ.ಎಸ್ ಎನ್ ಎಲ್ ಸಂಸ್ಥೆಯೂ ಕೂಡ ತೀವ್ರ ಆರ್ಥಿಕ ಸಂಕಷ್ಟದಿಂದ ನಷ್ಟವನ್ನು ಅನುಭವಿಸುವ ಪರಿಧಿಯಿಂದ ಹೊರತಾಗಿಲ್ಲ.

ಭಾರ್ತಿ ಏರ್ ಟೆಲ್  ಹಾಗೂ ವೋಡಾಫೋನ್ ಐಡಿಯಾ ಸಂಸ್ಥೆಗಳು ಸರಕಾರಕ್ಕೆ ಕಾನೂನಿಡಿಯಲ್ಲಿ ಪಾವತಿಸಬೇಕಾದ ಸ್ಪೆಕ್ಟ್ರಮ್ ಶುಲ್ಕ ಹಾಗೂ ಲೈಸನ್ಸ್ ಶುಲ್ಕವಾದ  AGR (Adjusted Gross Revenue) 1.47 ಲಕ್ಷ ಕೋಟಿ ಮೊತ್ತವನ್ನು 3 ತಿಂಗಳೊಳಗೆ ಪಾವತಿಸಲು ಸರಕಾರ ಸಮಯಾವಕಾಶ ನೀಡಿದೆ.ಈ ಬೆಳವಣಿಗೆಯಿಂದ ಮರುಭೂಮಿಲ್ಲಿದ್ದ ಟೆಲಿಕಾಂ ಕಂಪನಿಗಳಿಗೆ ಓಯಾಸಿಸ್ ಸಿಕ್ಕ ಹಾಗಾಗಿದೆ.

ಆರ್ಥಿಕ ಹಿಂಜರಿತದ ಹಾಗೂ ದರ ಪೈಪೋಟಿಯಿಂದ ತೀವ್ರವಾಗಿ ತತ್ತರಿಸಿರುವ ದೂರಸಂಪರ್ಕ ಕ್ಷೇತ್ರ ಚುರುಕಾದ, ಚಟುವಟಿಕೆಯುಕ್ತವಾದ ತನ್ನ ಹೊಸ ಸೇವೆಗಳ ಹೂಡಿಕೆಗಳನ್ನು ಉತ್ತೇಜಿಸಲು, 5G ನಂತಹ ನವ್ಯ ಡಿಜಿಟಲ್ ತಂತ್ರಜ್ಞಾನದ ಮೂಲಭೂತ ಸೌಕರ್ಯಗಳ ಸಿದ್ಧತೆಗಳನ್ನು  ಆರಂಭಿಸಲು, IoT ಯಂತಹ ಇನ್ನಿತರ ಹೊಸ ತಂತ್ರಜ್ಞಾನದ ಅನ್ವೇಷಣೆಗಳಿಗೆ ಹೊಂದಿಕೊಳ್ಳಲು ಹಾಗೂ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿಸಲು, ಆರ್ಥಿಕ ಪ್ರಗತಿ ಸಾಧಿಸಲು,ಭವಿಷ್ಯದಲ್ಲಿ ಟೆಲಿಕಾಂ ನೆಟ್ವರ್ಕ್ ಕ್ಷೇತ್ರವನ್ನು ಬಲಿಗೊಳಿಸಲು ಹಾಗೂ ಔದ್ಯೋಗಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಈ ದರ ಹೆಚ್ಚಳ ನೆರವಾಗುವುದೆಂಬುದು ತಜ್ಞರ ಹಾಗೂ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಟೆಲಿಕಾಂ ಸೇವೆಯ ದರಗಳು ಅತೀ ಅಗ್ಗವಾಗಿವೆ. ಅಂದರೆ ಭಾರತೀಯ ಟೆಲಿಕಾಂ ಕಂಪನಿಗಳು ವಿಶ್ವದಲ್ಲೇ ಪ್ರತೀ ಬಳಕೆದಾರರಿಗೆ ಅತೀ ಕಡಿಮೆ ಸರಾಸರಿ ಆದಾಯ ಹೊಂದಿವೆ. ಉದಾಹರಣೆಗೆ ವೋಡಾಫೋನ್ ಐಡಿಯಾ ಗ್ರಾಹಕರ ಸರಾಸರಿ ಆದಾಯ ತಿಂಗಳಿಗೆ ರೂ.105 ಇದು ಲಾಭದಾಯಕ ಬೆಳವಣಿಗೆಗೆ ಪೂರಕವಾಗಿಲ್ಲದಿರುವುದು ಇತ್ತೀಚಿನ ಬೆಳವಣಿಗೆಗಳಿಂದ ತಿಳಿದು ಬಂದಿದೆ.

ಹೀಗೆ ಅತೀ ದೊಡ್ಡ ಸ್ಪೆಕ್ಟ್ರಮ್ ಹೆಜ್ಜೆ ಗುರುತುಗಳನ್ನು ಇಡಲು ಹಾಗೂ ಟೆಲಿಕಾಂ ನೆಟ್ವರ್ಕ್ ಕ್ಷೇತ್ರದಲ್ಲಿ ಅಖಂಡ ಹಾಗೂ ಸಮಗ್ರ ಬೆಳವಣಿಗೆಗೆ, ಗುಣಮಟ್ಟದ ನೆಟ್ವರ್ಕ್ ಕವರೇಜ್ ವಿಸ್ತರಿಸಲು ಮತ್ತು ಅದರ ಸಾಮರ್ಥ್ಯವನ್ನು ಬಲಗೊಳಿಸಲು 5G ಯಂಥಹ ನವ ತಂತ್ರಜ್ಞಾನಕ್ಕೆ ಅಣಿಯಾಗಲು ಈ ದರ ಬದಲಾವಣೆಯ ತೀರ್ಮಾನ ಹಾಗೂ ಗ್ರಾಹಕ ಸೇವೆಗಳ ನೀತಿ ನಿಯಮಗಳ ಸುಧಾರಣೆಗಳಿಗೆ ಸಜ್ಜಾಗಿವೆ. ಈ ನಿಟ್ಟಿನಲ್ಲಿ ಅಳಿದುಳಿದಿರುವ ದೂರಸಂಪರ್ಕ ಸೇವೆಯನ್ನು ಒದಗಿಸುವ ಸಂಸ್ಥೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಶುಲ್ಕ ಹೆಚ್ಚಳವೆಂಬ ‘ಉಳಿವಿಗಾಗಿ ಹೋರಾಟ’ಎಂಬ ಅಸ್ತ್ರವನ್ನು ಅನುಸರಿಸುತ್ತಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

One thought on “ದಿಢೀರನೆ ಮೊಬೈಲ್ ಕರೆ, ಡಾಟಾ ದರ ಏರುತ್ತಿರುವುದು ಯಾಕೆ ಗೊತ್ತಾ?

  1. ಜಿಯೋ ಬಂದ ಮೇಲೆ ಈ ಕರೆ ಮತ್ತು ಡೇಟಾ ಇವುಗಳಿಗೆ ಮರ್ಯಾದೇಯೇ ಹೋಯ್ತು..ಹಗಲು ರಾತ್ರಿ ಮಾತು (ಕತೆ) ಮತ್ತು ಇಂಟರ್ನೆಟ್ ಬಳಕೆ ಗಬ್ಬೆದ್ದು ಹೋಯ್ತು..
    ಇದೇನೂ ಅಭಿವೃದ್ಧಿ ಅಂದುಕೋಬೇಕಿಲ್ಲ..ಯುವಜನತೆ ಅಂತೂ ಪೂರ ಹಳ್ಳ ಹಿಡಿದು ಹೋಯ್ತು..
    ತಿಂಗಳಿಗೆ ಇನ್ನೂರು ಕೊಟ್ಟಾಗ ಸಿಗುತ್ತಿದ್ದ ಒಂದು ಜಿಬಿ ಯನ್ನು ಅತೀ ಎಚ್ಚರಿಕೆಯಿಂದ ಕಾಯ್ದುಕೊಳ್ಳುತ್ತಿದ್ದ ಅಂದಿನ ಸನ್ನಿವೇಶ, ಇಂದಿನ ಸನ್ನಿವೇಶ ಹೋಲಿಸಿ ನೋಡಿ..ಏನಾಗುತ್ತಿದೆಯಂದು ಸ್ಪಷ್ಟವಾಗುತ್ತದೆ.
    ಹೆಚ್ಚಾಗಲಿರೋ ದರಗಳಿಂದ ಒಂದಿಷ್ಟು ನಿಯಂತ್ರಣ ಸಾಧ್ಯವಾಗಲಿ ಎಂದು ಆಶಿಸೋಣ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: