ಚಂದಿರನ ಬಗ್ಗೆ ನಮಗೆ ಇಷ್ಟೇಕೆ ಕುತೂಹಲ?

ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ. ಮನುಷ್ಯ ಅಂತರಿಕ್ಷಕ್ಕೆ ಕಾಲಿಟ್ಟಾಗಿನಿಂದಲೂ ಚಂದ್ರನ ಬಗ್ಗೆ ವಿವಿಧ ಕಾರಣಗಳಿಗೆ ಕುತೂಹಲ ಬೆಳೆಸಿಕೊಂಡಿದ್ದಾನೆ. ಅಲ್ಲಿಗೆ ಹೋಗಿ ಬಂದಿದ್ದಾನೆ. ಭಾರತವೂ ಹಿಂದೆ ಬಿದ್ದಿಲ್ಲ. ಸೆಪ್ಟೆಂಬರ್‌ 7ರಂದು ಚಂದ್ರ ಮೇಲೆ ಇಳಿಯಲಿರುವ ಚಂದ್ರಯಾನ -2 ಹಲವು ಕುತೂಹಲಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಚಂದ್ರನ ಬಗೆಗಿನ ಆಸಕ್ತಿ, ಅಧ್ಯಯನ ಹಾಗೂ ಯೋಜನೆಗಳು ಕುರಿತ ಲೇಖನ ಇಲ್ಲಿದೆ

ಚಂದ್ರ ಭೂಮಿಯನ್ನು 27 ದಿನಗಳಲ್ಲಿ ಪರಿಭ್ರಮಿಸುತ್ತಿರುವ ಉಪಗ್ರಹ. ತನ್ನ ಸುತ್ತಲು ಪರಿಭ್ರಮಿಸಲೂ ಅಷ್ಟೇ ಸಮಯ ತೆಗೆದುಕೊಳ್ಳುವುದರಿ೦ದ ಚಂದ್ರನ ಒಂದು ಬದಿಯನ್ನು ಮಾತ್ರ ನಾವು ನೋಡುತ್ತೇವೆ. ಚ೦ದ್ರನಿಂದ ಹೊರಟ ಬೆಳಕು ಭೂಮಿಯನ್ನು ಸೇರಲು 1.3 ಸೆಕೆ೦ಡುಗಳನ್ನು ತೆಗೆದುಕೊಳ್ಳುತ್ತದೆ.

ಚ೦ದ್ರನ ಗುರುತ್ವಾಕರ್ಷಣೆ ಭೂಮಿಯ 16% ಮಾತ್ರವಾಗಿದ್ದು ವಿಮೋಚನಾ ವೇಗ ಬಹಳ ಕಡಿಮೆಯಾದ್ದರಿ೦ದ ಅಲ್ಲಿ ಯಾವ ತರಹದ ವಾತಾವರಣವೂ ಇಲ್ಲ. ಚ೦ದ್ರನ ಮೇಲ್ಮೈ ಭೂಮಿಗಿಂತ ಬಹಳ ಹೆಚ್ಚು ಕುಳಿ (ಕ್ರೇಟರ್)ಗಳಿ೦ದ ಕೂಡಿದೆ; ದಾರಿ ತಪ್ಪಿ ಬ೦ದ ಕ್ಷುದ್ರಗ್ರಹವೋ ಅಥವ ಧೂಮಕೇತುವೋ ಚಂದ್ರನನ್ನು ಅಪ್ಪಳಿಸಿ ಈ ಕುಳಿಗಳು ಉಂಟಾಗಿವೆ.

ಇಲ್ಲಿ ವಾತಾವರಣ ಇಲ್ಲದಿರುವುದರಿ೦ದ ಚಂದ್ರನ ತಾಪಮಾನದಲ್ಲಿ ಬಹಳ ವ್ಯತ್ಯಾಸಗಳಿರುತ್ತವೆ – ದಿನದಲ್ಲಿ 123 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿ -233 ಡಿಗ್ರಿ ಸೆಲ್ಸಿಯಸ್. ಆ ಕಾರಣದಿಂದಲೇ ಸೂರ್ಯನ ಬೆಳಕೂ ಬಹಳ ಪ್ರಖರ ಮತ್ತು ಕಾಂತಕ್ಷೇತ್ರವಿಲ್ಲದಿರುವುದರಿಂದ ಹೊರಗಿ೦ದ ಬರುವ ಕಾಸ್ಮಿಕ್ ಕಿರಣಗಳ ಕಣಗಳೂ ಯಾವ ಅಡಚಣೆಯೂ ಇಲ್ಲದೆ ಚಂದ್ರನ ನೆಲವನ್ನು ತಲಪುತ್ತವೆ. ಆದ್ದರಿ೦ದ ಚ೦ದ್ರನ ಮೇಲೆ ಜೀವಿಸಲು ಮಾನವನಿಗೆ ವಿವಿಧ ರೀತಿಯ ರಕ್ಷಣೆಗಳು ಬೇಕು. ಭೂಮಿ ಮೊದಲು ಹುಟ್ಟಿದಾಗ ಬಹಳ ವೇಗದಿ೦ದ ತಿರುಗುತ್ತಿದ್ದ ಚ೦ದ್ರನ ಗುರುತ್ವಾಕರ್ಷಣೆ ಆ ಭ್ರಮಣೆಯ ಅವಧಿಯನ್ನು ನಿಧಾನವಾಗಿಸಿದೆ; ಚಂದ್ರನಿರದಿದ್ದರೆ ನಮ್ಮ ದಿನದ ಅವಧಿ ಬಹಳ ಕಡಿಮೆ ಇರುತ್ತಿತ್ತು . ಭೂಮಿಯ ಮೇಲಿನ ಸಮುದ್ರದ ಉಬ್ಬರವಿಳಿತಗಳಿಗೆ ಚಂದ್ರನ ಗುರುತ್ವಾಕರ್ಷಣೆಯೇ ಕಾರಣವೆ೦ದು 17ನೆಯ ಶತಮಾನದಲ್ಲಿಯೇ ಯೊಹಾನ್ಸ್ ಕೆಪ್ಲರ್ ಮ೦ಡಿಸಿದ್ದನು.

ಚಂದ್ರನ ಅಧ್ಯಯನ ಏತಕ್ಕೆ?

  • ಮುಖ್ಯವಾಗಿ ಚಂದ್ರನ ಬಗ್ಗೆ ನಮಗೆ ಸಿಗುವ ಮಾಹಿತಿ ಬೇರೆ ಗ್ರಹಗಳ ಅಧ್ಯಯನಕ್ಕೂ ಬಹಳ ಉಪಯೋಗಕ್ಕೆ ಬರುತ್ತದೆ. ಚ೦ದ್ರ ಹೇಗೆ, ಯಾವಾಗ ಹುಟ್ಟಿದ? ಪ್ರಾಯಶಃ ಮ೦ಗಳದಷ್ಟು ಗಾತ್ರದ ಆಕಾಶಕಾಯವೊಂದು ಭೂಮಿಯನ್ನು ಅಪ್ಪಳಿಸಿದಾಗ ದೊಡ್ಡ ತು೦ಡೊ೦ದು ಹೊರ ಹೋಗಿ ಭೂಮಿಯನ್ನು ಸುತ್ತಲು ಶುರುಮಾಡಿತು ಎ೦ಬ ಸಿದ್ಧಾಂತವನ್ನು ಹೆಚ್ಚು ಖಗೋಳವಿಜ್ಞಾನಿಗಳು ಒಪ್ಪುತ್ತಾರೆ.
  • ಚಂದ್ರನ ಮೇಲೆ ಇರುವ ಹಲವಾರು ಮೂಲಧಾತುಗಳು ಭೂಮಿಯಲ್ಲಿ ಮಾನವಜೀವನಕ್ಕೆ ಉಪಯೋಗಕ್ಕೆ ಬರುತ್ತವೆ. ಸೌರ ಮಾರುತದಿಂದ ಹೆಚ್ಚಿನ ಪ್ರಮಾಣದಲ್ಲಿ ಹೀಲಿಯಂ -3 ಚ೦ದ್ರನಲ್ಲಿ ಸೇರಿರುತ್ತದೆ. ಇದನ್ನು ಉಪಯೋಗಿಸಿಕೊಂಡು ಸುರಕ್ಷಿತ ಪರಮಾಣು ಶಕ್ತಿಯನ್ನು ಉತ್ಪಾದಿಸಬಹುದೆ೦ಬ ನಿರೀಕ್ಷೆ ಇದೆ. ಇದಲ್ಲದೆ ಚ೦ದ್ರನಿ೦ದ ಪ್ಲಾಟಿನಂ ಗು೦ಪಿನ ಧಾತುಗಳು (ತಾಮ್ರ, ಬೆಲ್ಲಿ, ಚಿನ್ನ, ಪ್ಲಾಟಿನಮ್ ಇತ್ಯಾದಿ) ಮತ್ತು ವಿರಳ ಭಸ್ಮ (ರೇರ್ ಅರ್ಥ್ – ಸೆರೆಯಮ್ ನಿಂದ ಹಿಡಿದು ಇಟ್ರಿಯಮ್ ತನಕ ೧೭ ಮೂಲಧಾತುಗಳು ) ಚ೦ದ್ರನಲ್ಲಿ ಸಿಗುತ್ತವೆ ಎ೦ಬ ನಿರೀಕ್ಷೆ ಇದೆ.
  • ಚಂದ್ರನ ಮೇಲೆ ವಾಸಮಾಡಲು ಮತ್ತು ಮುಂದಿನ ಬಾಹ್ಯಾಕಾಶ ಪ್ರವಾಸಗಳಿಗೆ ನೀರು ಮುಖ್ಯ ಬಹಳ ಮುಖ್ಯವಾದದ್ದು. ಭಾರತದ ಚ೦ದ್ರಯಾನ-1ರ ಉಪಕರಣ (ಚೇಸ್) ಚ೦ದ್ರನ ವಾತಾವರಣದಲ್ಲಿ ನೀರಿನ ಅ೦ಶವನ್ನು ಕ೦ಡುಹಿಡಿಯಿತು ಮತ್ತು ಅದರ ಜೊತೆ ಇದ್ದ ನ್ಯಾಸಾ ಉಪಕರಣ (ಎಮ್ 3) ಚ೦ದ್ರನ ನೆಲದಲ್ಲೂ ನೀರಿನ ಅ೦ಶವನ್ನು ಕಂಡುಹಿಡಿಯಿತು. ಇದು ಬಹಳ ಮಹತ್ವದ ಸಂಶೋಧನೆ.

ಇಲ್ಲೇನಾದರೂ ಆದರೆ, ಅಲ್ಲಿಗೆ ಹೋಗಲು!

ಅದು ನಮಗೆ ಬಹು ಹತ್ತಿರವಾದ ಆಕಾಶಕಾಯ ಎನ್ನುವುದು ಚಂದ್ರನ ಬಗೆಗಿರುವ ದೊಡ್ಡ ಆಕರ್ಷಣೆ. ಭೂಮಿಗೆ ಈಗಿಲ್ಲದಿದರೂ ಮುಂದೆ ಹಲವಾರು ಗಂಡಾಂತರಗಳು ಕಾದಿವೆ. ಸೂರ್ಯನ ತಾಪ ಹೆಚ್ಚಾಗುತ್ತ ಇನ್ನು ಒ೦ದು ಬಿಲಿಯನ್‌ ವರ್ಷದೊಳಗಡೆಯೇ ಭೂಮಿಯ ತಾಪಮಾನವೂ ಹೆಚ್ಚಾಗುತ್ತ ಹೋಗುವುದರಿಂದ ಅದಕ್ಕೆ ಮೊದಲೇ ನಾವು ಈ ಜಾಗ ಖಾಲಿ ಮಾಡಬೇಕಾಗುತ್ತದೆ. ಅದಲ್ಲದೆ 63 ಮಿಲಿಯನ್‌ ವರ್ಷಗಳ ಹಿಂದೆ ಡೈನಾಸಾರ್‌ಗಳು ಒ೦ದು ಧೂಮಕೇತುವಿನ ಅಪ್ಪಳಿಕೆಯಿಂದ ನಾಶವಾದಂತೆ ಭೂಮಿಗೂ ಯಾವುದಾದರೋ ಆಕಾಶಕಾಯ ಹೊಡೆದು ಭೂಮಿಯ ಜೀವಿಗಳೆಲ್ಲಾ ನಾಶವಾಗಬಹುದು. ಅದಕ್ಕೆ ಮೊದಲೇ ನಾವು ಬೇರೆ ಜಾಗಗಳನ್ನು ಹುಡುಕಿಕೊಂಡಿರಬೇಕಾಗುತ್ತದೆ. ಇವೆಲ್ಲ ಕಾರಣಗಳಿಂದ ನಾವು ನಮ್ಮ ಉಳಿವಿಗಾಗಿ ಬೇರೆ ವಾಸಯೋಗ್ಯ ಗ್ರಹಗಳನ್ನು ಹುಡುಕಬೇಕಾಗುತ್ತದೆ.

ಕಳೆದ ಎರಡು ದಶಕಗಳಿಂದ ಕೆಪ್ಲರ್ ಉಪಗ್ರಹ ಮತ್ತು ಇತರ ಪ್ರಯೋಗಗಳು ಹತ್ತಿರದ ನಕ್ಷತ್ರಗಳಲ್ಲಿ ಭೂಮಿಯ ಗುಣಗಳುಳ್ಳ ಗ್ರಹಕ್ಕೆ ಹುಡುಕುತ್ತಲೇ ಇದ್ದು ಸುಮಾರು 20 ಅಂತಹ ಗ್ರಹಗಳೂ ಸಿಕ್ಕಿವೆಯಾದರೂ ಅವು ಹತ್ತಿರದಲ್ಲೇನು ಇಲ್ಲ. ಸೌರಮಂಡಲದ ಗ್ರಹಗಳ ಉಪಗ್ರಹಗಳಲ್ಲಿ ಕೆಲವು (ಉದಾ: ಯೂರೋಪಾ, ಟೈಟನ್ ) ವಾಸಯೋಗ್ಯವಿರಬಹುದು. ಏನೇ ಆಗಲಿ ಬೇರೆ ಗ್ರಹಗಳಿಗೆ ಹೋಗಬೇಕಾದರೂ ಮೊದಲು ಚಂದ್ರನಿಗೆ ಹೋಗಬೇಕಾಗುತ್ತದೆ. ಚಂದ್ರನಲ್ಲಿ ಕಡಿಮೆ ಗುರುತ್ವವಿರುವುದರಿಂದ ಅಲ್ಲಿಂದ ರಾಕೆಟ್ ಉಡಾವಣೆಗಳು ಸುಲಭವಾಗುತ್ತದೆ. ಅಂತೂ ಏನೇ ಆಗಲಿ ಚಂದ್ರನ ಮೇಲೆ ವಾಸ ಮಾಡುವುದು ಅನಿವಾರ್ಯವಾಗಿದ್ದು, ಅಲ್ಲಿರುವ ಹಲವಾರು ಅಪಾಯಗಳನ್ನು ಹೇಗೆ ಎದುರಿಸಬೇಕೆಂದು ಕಲಿಯಬೇಕಾಗುತ್ತದೆ. ಭೂಮಿಯಲ್ಲಿ ಈ ಅಪಾಯಗಳು ಇರಲಿಲ್ಲವಾದ್ದರಿಂದಲೇ ವಿಕಾಸ ಸಾಧ್ಯವಾಗಿ ಜೀವಹುಟ್ಟಿ ಮಾನವನ ನಾಗರಿಕತೆ ಸಾಧ್ಯವಾಗಿರುವುದು. ಈ ಅಪಾಯಗಳು ಮೂರು: ತೀಕ್ಷ್ಣವಾದ ತಾಪಮಾನ ಬದಲಾವಣೆಗಳು, ವಾತಾವರಣ ಅಥವಾ ಕಾಂತಕ್ಷೇತ್ರದ ಕೊರತೆ ಮತ್ತು ದೀರ್ಘ ರಾತ್ರಿಗಳು.

ಚಂದ್ರನ ಬಗ್ಗೆ ಹೆಚ್ಚು ತಿಳಿದ ನಂತರ ಇನ್ನೂ ಕೆಲವು ಅಪಾಯಗಳ ಅರಿವಾಗಬಹುದು. ಚಂದ್ರನ ನೆಲದೊಳಗೆ ಹಲವಾರು ಮೀಟರ್ ಆಳದಲ್ಲಿ, ಮನೆಗಳನ್ನು ಕಟ್ಟಿದರೆ ಮೇಲೆ ಹೇಳಿದ ತೊಂದರೆಗಳನ್ನು ಎದುರಿಸಬಹುದು. ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಉತ್ಖನನ ಕಾರ್ಯ ನಡೆಸಬೇಕಾಗುತ್ತದೆ. ಕ್ರೇಟರುಗಳಲ್ಲೇ ಮನೆಗಳನ್ನು ಕಟ್ಟಿದರೆ ವಿಕಿರಣ ಮತ್ತು ಸೂರ್ಯನ ಕಿರಣಗಳಿಂದ ಸ್ವಲ್ಪವಾದರೂ ರಕ್ಷಣೆ ಸಿಗಬಹುದು. ಬೃಹತ್ ಅಯಸ್ಕಾಂತಗಳಿಂದ ಕೃತಕ ಕಾಂತಕ್ಷೇತ್ರಗಳನ್ನು ನಿರ್ಮಿಸಿದರೆ ವಿಕಿರಣಗಳಿಂದ ರಕ್ಷಣೆ ಸಿಗಬಹುದು. ಹೀಗೆಯೇ ಹಲವಾರು ಅಭಿಪ್ರಾಯಗಳಿವೆ. ಇವೆಲ್ಲಾ ಅಲ್ಲದೆ ಮನುಷ್ಯನಿಗೆ ಚ೦ದ್ರನ ಪರಿಚಯ ಹೆಚ್ಚಾದಂತೆಲ್ಲ ಹೊಸ ಅಪಾಯಗಳೂ ತಿಳಿಯಬಹುದು ಮತ್ತು ಅವುಗಳನ್ನು ದೂರವಿಡಲು ಹೊಸ ವಿಚಾರಗಳೂ ಹೊಳೆಯಬಹುದು.

ಬಾಹ್ಯಾಕಾಶ ಯೋಜನೆಗಳು

1950-1970ರ ಅವಧಿಯಲ್ಲಿ ಅಮೆರಿಕ ಮತ್ತು ರಷ್ಯಾ ಬಾಹ್ಯಾಕಾಶದಲ್ಲಿ ಸ್ಪರ್ಧಾತ್ಮಕ ರೀತಿಯಲ್ಲಿ ನಡೆಸಿದ ಸ೦ಶೋಧನೆಗಳಲ್ಲಿ ಹಲವಾರು ದುರ೦ತಗಳಿದ್ದರೂ ಒಟ್ಟಿನಲ್ಲಿ ಮಹತ್ತರ ಪ್ರಗತಿಯೂ ಆಯಿತು. 1957ರಲ್ಲಿ ನಡೆದ ಸ್ಪುಟ್ನಿಕ್ ಉಪಗ್ರಹದ ಉಡಾವಣೆ ಮತ್ತು 4 ವರ್ಷಗಳ ನ೦ತರ ಯೂರಿ ಗಗರಿನ್ ಅವರ ಗಗನಯಾತ್ರೆ ಸೋವಿಯಟ್ ಒಕ್ಕೂಟ ಬಾಹ್ಯಾಕಾಶದಲ್ಲಿ ಇಟ್ಟ ಮೊದಲ ಹೆಜ್ಜೆಗಳು. ಆನಂತರ ಅದೇ ದೇಶ ಚಂದ್ರನ ಮೇಲೆ ಪ್ರಥಮನೌಕೆಯನ್ನು ಇಳಿಸಿದ್ದಲ್ಲದೆ ಅದರ ನೌಕೆ ಚಂದ್ರನನ್ನು ಸುತ್ತುಹಾಕಿತು ಕೂಡ. ಅನಂತರ 1968 ರಿ೦ದ 1972ರ ವರೆಗೆ ನಡೆದ ಹಲವಾರು ಅಪೊಲೊ ಯೋಜನೆಗಳಲ್ಲಿ ಅಮೆರಿಕ ಮುಂದೆ ಹೋಯಿತು . 1968ರಲ್ಲಿ ಅಮೆರಿಕದ ಗಗನ ಯಾತ್ರಿಗಳು ಚ೦ದ್ರನನ್ನು ಪರಿಭ್ರಮಿಸಿ ವಾಪಸ್ಸು ಬ೦ದರಲ್ಲದೆ, ಮುಂದಿನ ವರ್ಷ ಅಮೆರಿಕದ ಇಬ್ಬರು ಗಗನಯಾತ್ರಿಗಳು ಚಂದ್ರನ ಮೇಲೆ ನಡೆದರು ಕೂಡ. ಚಂದ್ರನತ್ತ ಪ್ರಯಾಣಿಸಲು, ಅಲ್ಲಿ ವಾಹನ ನಡೆಸಲು ಮತ್ತು ವೈಜ್ಞಾನಿಕ ಸಂಶೋಧನಾ ಕಾರ್ಯಗಳನ್ನು ನಿರ್ವಹಿಸಲು ಮತ್ತು ಮಾದರಿ ವಸ್ತುಗಳನ್ನು ಮರಳಿ ತರಲು ಮಾನವನ ಸಾಮರ್ಥ್ಯವನ್ನು ಈ ಯೋಜನೆ ಸಾಬೀತುಪಡಿಸಿತು.

ಮನುಕುಲದ ಮಹಾ ಜಿಗಿತ ಎಂದು ಕರೆಸಿಕೊಂಡ ಕ್ಷಣ. 1969ರ ಜುಲೈ 20ರಂದು ಗಗನಯಾನಿಗಳಿಬ್ಬರು ಚಂದ್ರನ ಮೇಲೆ ಮೊದಲ ಬಾರಿಗೆ ಇಳಿದಿದ್ದರು. ಅಪೊಲೊ 11ರ ಪ್ರಯಾಣದ ಅನುಭವಗಳನ್ನು ಕಟ್ಟಿಕೊಡುವ ಸಾಕ್ಷ್ಯಚಿತ್ರವಿದು

ಆದರೆ ನಂತರದ ದಶಕಗಳಲ್ಲಿ ಚಂದ್ರನ ಬಗ್ಗೆ ಅಮೆರಿಕದ ಆಸಕ್ತಿ ಕ್ಷೀಣಿಸಲು ಪ್ರಾರಂಭಿಸಿ, ಚ೦ದ್ರನ ಬದಲಾಗಿ ಇತರ ಬಾಹ್ಯಾಕಾಶ ಸಂಶೋಧನೆಗಳು ಮೇಲ್ಗೈ ಗಳಿಸಿದವು: ಸ್ಪೇಸ್ ಸ್ಟೇಷನ್, ಮಂಗಳ ಗ಼ುರು, ಶನಿ, ಪ್ಲೂಟೊ ಇತ್ಯಾದಿ ಗ್ರಹಗಳ ದೀರ್ಘ ಆನ್ವೇಷಣೆಗಳು. ಇದಾದ ನಂತರ ಚೀನಾ ಮತ್ತು ಭಾರತ ಈ ವಿಷಯದಲ್ಲಿ ಅಸಕ್ತಿ ವಹಿಸಲು ಪ್ರಾರಂಭಿಸಿದವು. 2003ರಲ್ಲಿ ಚೀನಾ ತನ್ನ ಮೊದಲ ಗಗನಯಾತ್ರಿಯನ್ನು ಭೂಮಿಯ ಸುತ್ತ ಕಕ್ಷೆಯಲ್ಲಿಲಟ್ಟಿತು. ಆನ೦ತರ ಚೀನೀ ಯಂತ್ರವೊಂದು ಚಂದ್ರನನ್ನು ಪರಿಭ್ರಮಿಸಲೂ ಶುರುವಾಯಿತು. ಇತ್ತೀಚೆಗೆ 2019ರ ಜನವರಿಯಲ್ಲಿ ಚಂದ್ರನ ಮೆಲೆ ತನ್ನ ಪ್ರಥಮ ರೋಬಟನ್ನು ಇಳಿಸಿತು . ಭಾರತ 2009ರಲ್ಲಿ ತನ್ನ ಚ೦ದ್ರಯಾನ 1ಅನ್ನು ಪ್ರಾರಂಭಿಸಿತು ಮತ್ತು ಅಲ್ಲಿ ನೀರಿರುವ ಬಗ್ಗೆ ನಡೆಸಿದ ಸಂಶೋಧನೆ ಚ೦ದ್ರನಲ್ಲಿ ಮತ್ತೆ ಆಸಕ್ತಿ ಹುಟ್ಟಲು ಕಾರಣವಾಗಿದೆ.

ಈಗ ಚಂದ್ರಯಾನ -2 ರ ಯಂತ್ರೋಪಕರಣಗಳ ಪ್ರಾಥಮಿಕ ಉದ್ದೇಶವೆಂದರೆ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯುವ ಸಾಮರ್ಥ್ಯವನ್ನು ಪ್ರದರ್ಶಿಸುವುದು ಮತ್ತು ಮೇಲ್ಮೈಯಲ್ಲಿ ರೋಬಾಟ್ ರೋವರ್ ವನ್ನು ಚಲಿಸಿ ಅದರಿ೦ದ ಮಾಹಿತಿ ಪಡೆಯುವುದು. ಸೆಪ್ಟೆಂಬರ್ 7ರಂದು – “ಚಂದ್ರನ ದಕ್ಷಿಣ ಧ್ರುವ ಪ್ರದೇಶ”ದಲ್ಲಿ ನೌಕೆಯನ್ನು ಸುರಕ್ಷಿತವಾಗಿ ಇಳಿಸಲು ವಿಜ್ಞಾನಿಗಳು ಯೋಜನೆ ರೂಪಿಸಿದ್ದಾರೆ. ಎರಡು ಕುಳಿಗಳ ಮಧ್ಯೆ ಇಳಿಯುವ ಯೋಜನೆಯಿದ್ದು ಅದು ಬಹು ನಾಜೂಕು ಕೆಲಸವಾಗಿದ್ದು, ನೌಕೆ ಇಳಿಸುವ ಕೊನೆಯ ಹಂತದ ಕ್ಷಣಗಳು ಬಹು ಮಹತ್ವದ ಘಳಿಗೆಯಾಗಲಿವೆ.

ಚಂದ್ರ ಯಾರದು ?

ಬಹು ಹಿ೦ದೆಯೇ ಕೆಲವು ವಿಜ್ಞಾನಿಗಳು (ಕೆಪ್ಲರ್, ಹರ್ಶೆಲ್ ಇತ್ಯಾದಿ) ಚಂದ್ರನಲ್ಲಿ ಜೀವಿಗಳನ್ನು ಕಲ್ಪಿಸಿಕೊಂಡಿದ್ದರು. 19ನೆಯ ಶತಮಾನದಲ್ಲಿ ಜೂಲ್ಸ್ ವರ್ನ್ ಆಗ ಚಾಲ್ತಿಯಲ್ಲಿದ್ದ ವಿಜ್ಞಾನದ ಪರಿಕಲ್ಪನೆಗಳನ್ನು ಬಳಸಿಕೊಂಡು ಚಂದ್ರನ ಬಗ್ಗೆ ಕಾಲ್ಪನಿಕ ಸಾಹಿತ್ಯವನ್ನು ರಚಿಸಿದರು. ಇಪ್ಪತ್ತನೆಯ ಶತಮಾನದಲ್ಲಿ ಆರ್ಥರ್ ಕ್ಲಾರ್ಕ್ ತಮ್ಮ ಖ್ಯಾತ ಕೃತಿ – ಸ್ಪೇಸ್ ಓಡೆಸ್ಸಿ 2001 -ನಲ್ಲಿ ಚಂದ್ರನ ಮೇಲೆ ಒಂದು ತಂಗುದಾಣವನ್ನೂ ಕಲ್ಪಿಸಿ ಕೊಂಡಿದ್ದರು. ಹಲವಾರು ದೇಶಗಳಿಗೆ ಮತ್ತು ಅಮೆರಿಕದಂತಹ ದೇಶದ ಖಾಸಗಿ ಉದ್ಯಮಿಗಳಿಗೂ ಚಂದ್ರನ ಮೆಲೆ ಮನೆ ಮಾಡುವ ಕನಸುಗಳಿವೆ. ಹಲವಾರು ಉದ್ಯಮಿಗಳ ಯೋಜನೆಗೆ ಪ್ರಯಾಣಿಕರೂ ಹಣಕೊಟ್ಟು ಚಂದ್ರಯಾತ್ರೆಗೆ ಸಿದ್ಧರಾಗಿದ್ದಾರೆ! ಆದರೆ ಚಂದ್ರ ನಿಜವಾಗಿಯೂ ಯಾರದ್ದು? ಐನೂರು ವರ್ಷಗಳ ಹಿಂದೆ ಹೊರ ಪ್ರದೇಶಗಳನ್ನು ಕಂಡುಕೊಂಡ ಯೂರೋಪಿನ ದೇಶಗಳು ನಿಧಾನವಾಗಿ ಅವನ್ನೇ ವಸಾಹತುಗಳಾಗಿ ಪರಿವರ್ತಿಸಿಕೊಂಡರಲ್ಲವೆ? ಈ ರೀತಿಯಲ್ಲೇ ಚಂದ್ರ ಅಮೆರಿಕಾದ್ದೋ ರಷ್ಯಾದ್ದೋ ಆಗಿಬಿಡುತ್ತದೆಯೇ? ಇಲ್ಲ, ಹಾಗಾಗಬಾರದು ಎಂದು ಎರಡು ದೇಶಗಳೂ 1967ರಲ್ಲಿ ಒಪ್ಪಂದ ಮಾಡಿಕೊಂಡವು. ಈಗ ಆ ಒಪ್ಪಂದಕ್ಕೆ 104 ರಾಷ್ಟ್ರಗಳು ಸಹಿ ಹಾಕಿವೆ. ಆ ಒಪ್ಪಂದದಲ್ಲಿ ಚಂದ್ರನನ್ನು ಎಲ್ಲರೂ ಮಾನವೀಯತೆಯ ಹಿತಕ್ಕಾಗಿ ಬಳಸಬೇಕು ಮತ್ತು ಯಾವುದೇ ವೈಯಕ್ತಿಕ ರಾಜ್ಯದ ಸಲುವಾಗಿ ಬಳಸಬಾರದು ಎಂದು ಹೇಳಲಾಗಿದೆ. ಅದಲ್ಲದೆ ಶಸ್ತ್ರಾಸ್ತ್ರ ಪರೀಕ್ಷೆಯನ್ನು ನಿಷೇಧಿಸಲಾಗಿದೆ. ಯಾವುದೇ ವೈಜ್ಞಾನಿಕ ಸಂಶೋಧನೆಗಳನ್ನು ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು ಮತ್ತು ರಾಷ್ಟ್ರಗಳು ಮತ್ತು ವ್ಯಕ್ತಿಗಳು ಮತ್ತು ಸಂಸ್ಥೆಗಳು ಏನನ್ನೂ ಪಡೆಯಲು ಸಾಧ್ಯವಿಲ್ಲ ಎಂದೂ ಹೇಳಲಾಗಿದೆ. ಇಂದಲ್ಲ, ನಾಳೆ ಬಾಹ್ಯಾಕಾಶ ಯೋಜನೆಗಳಲ್ಲಿ ಎಲ್ಲ ರಾಷ್ಟ್ರಗಳೂ ಒಟ್ಟುಗೂಡಬೇಕಾಗುತ್ತದೆ. ಎಲ್ಲರ ಸಂಪನ್ಮೂಲಗಳನ್ನು ಒಟ್ಟುಹಾಕಿ ನಾವು ಬೇರೆ ಗ್ರಹಗಳತ್ತ ಗಮನ ಕೊಡಬೇಕಾಗುತ್ತದೆ. ಅಲ್ಲಿಗೆ ಹೋದಾಗ. ಅಮೆರಿಕ, ಭಾರತ ಇತ್ಯಾದಿ ಭೇದಗಳನ್ನು ತೊರೆದು ನಾವು ಇಡಿ ಭೂಮಿಯ ಪ್ರತಿನಿಧಿಯಾಗಿ ಹೋಗಬೇಕಾಗುತ್ತದೆ.