ಈ ಎಐ ಆಧರಿತ ತಂತ್ರಾಂಶ ಆಗಬಲ್ಲುದೆ ಪತ್ರಕರ್ತನಿಗೆ ಪರ್ಯಾಯ?!

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಎಲ್ಲೆಡೆಯೂ ವ್ಯಾಪಿಸಿಕೊಳ್ಳುತ್ತಿದೆ. ಈಗ ಬರವಣಿಗೆಯ ಕ್ಷೇತ್ರಕ್ಕೂ ಕಾಲಿಡುತ್ತಿದೆ, ವರದಿಯಾಗಲಿ, ವಿಜ್ಞಾನ ಬರವಣಿಗೆಯಾಗಲಿ, ಅನುವಾದವಾಗಲಿ ಮನುಷ್ಯನಿಗೆ ಪರ್ಯಾಯವಾಗುವಷ್ಟು ಸಮರ್ಥವಾಗಿ ಅಭಿವೃದ್ಧಿಯಾಗುತ್ತಿವೆ. ಹೈದರಾಬಾದಿನ ಐಐಐಟಿಯ ವಿಜ್ಞಾನಿಗಳು ರೂಪಿಸಿರುವ ತಂತ್ರಾಂಶ ಸದ್ಯದ ಉದಾಹರಣೆ

ಈ ಲೇಖನದ ಆಡಿಯೋ ರೂಪ ಇಲ್ಲಿದೆ. ಕ್ಲಿಕ್‌ ಮಾಡಿ, ಕೇಳಿ

“ಪೆನ್‌ ಈಸ್‌ ಮೈಟಿಯರ್‌ ದ್ಯಾನ್‌ ಸೋರ್ಡ್‌” ಎಂಬ ಆಂಗ್ಲ ಗಾದೆಯನ್ನು ಕೇಳಿರಬೇಕಲ್ಲ? ಕತ್ತಿಗಿಂತಲೂ ಲೇಖನಿ ಹರಿತ ಎಂದು ಇದನ್ನು ಹೇಳಬಹುದು. ಪ್ರಜಾಪ್ರಭುತ್ವದ ನಾಲ್ಕು ಅಡಿಗಲ್ಲುಗಳಲ್ಲಿ ಒಂದು ಎಂಬ ಗರಿಮೆ ಪಡೆದಿರುವ ಪತ್ರಿಕೋದ್ಯಮದ ಪ್ರತೀಕ ಪೆನ್ನು,  ಅರ್ಥಾತ್‌ ಲೇಖನಿ. ಹೀಗಾಗಿ ಅಧಿಕಾರಸ್ಥ ಸರಕಾರಕ್ಕಿಂತಲೂ ಪತ್ರಿಕೋದ್ಯಮದ ಪ್ರಭಾವ, ಇಲ್ಲವೇ ಸಾಮರ್ಥ್ಯ ಮಿಗಿಲು ಎಂಬ ಅರ್ಥದಲ್ಲಿ ಈ ಗಾದೆಯನ್ನು ಬಳಸುತ್ತಾರೆ. ಇದು ನಿಜವೋ ಸುಳ್ಳೋ ಎಂಬ ಚರ್ಚೆ ಈಗ ಬೇಡ ಬಿಡಿ.  ಆದರೆ ಇನ್ನು ಮುಂದೆ ಈ ಗಾದೆಯನ್ನು ಬದಲಿಸಬೇಕಾಗಿ ಬರಬಹುದು ಎನ್ನುವ ಆತಂಕದ ಸುದ್ದಿ ಬಂದಿದೆ. ಇನ್ನು ಮುಂದೆ ಪತ್ರಕರ್ತರು ಲೇಖನಿಯನ್ನು ಬಳಸುವ ಅವಶ್ಯಕತೆಯೇ ಇಲ್ಲದೆ ಹೋಗಬಹುದು.

ಅಯ್ಯೋ. ಅದು ನಾಳಿನ ಮಾತಲ್ಲ. ಇಂದೇ ಹೀಗಾಗುತ್ತಿದೆ! ಪತ್ರಕರ್ತರೆಲ್ಲರೂ ಕಂಪ್ಯೂಟರಿನಲ್ಲೇ ಲೇಖನಗಳನ್ನು ಕುಟ್ಟಿ ಬರೆಯುತ್ತಿದ್ದಾರೆ ಎಂದಿರಾ? ನಿಜ. ಇಂದು ಕಂಪ್ಯೂಟರುಗಳನ್ನು ಬಳಸಿ ಬರೆಯುವುದು ಅತಿ ಸಾಮಾನ್ಯ. ಆದರೆ ಅದನ್ನು ಬರೆಯುವುದು ಪತ್ರಕರ್ತನಲ್ಲವೆ? ನಾವು ಹೇಳುತ್ತಿರುವುದು, ಈ ಪತ್ರಕರ್ತರೇ ಇಲ್ಲದ ದಿನಗಳ ಬಗ್ಗೆ. ಅರ್ಥಾತ್‌, ನಾವು, ನೀವು ಓದುವ ಸುದ್ದಿಯನ್ನು ಕಂಪ್ಯೂಟರು ತಂತ್ರಾಂಶಗಳೇ ಒಟ್ಟು ಮಾಡಿ, ಪ್ರಸ್ತುತ ಪಡಿಸುವ ದಿನಗಳ ಬಗ್ಗೆ. ನಾಳಿನ ದಿನಗಳು ಹಾಗೆಯೂ ಇರಬಹುದು!

ಇದು ಸಾಧ್ಯವೇ ಮೂಗಿನ ಮೇಲೆ ಬೆರಳಿಡಬೇಡಿ. ಸ್ಪ್ರಿಂಗರ್‌ ಕಂಪೆನಿಯವರು ನಡೆಸಿದ ಒಂದು ಪ್ರಯೋಗದಲ್ಲಿ ತಂತ್ರಾಂಶವೊಂದು ವಿಜ್ಞಾನ ಕ್ಷೇತ್ರವೊಂದರಲ್ಲಿ ನಡೆಯುತ್ತಿದ್ದ ಸಂಶೋಧನೆಗಳ ಬಗೆಗಿನ ವಿವರಗಳನ್ನೆಲ್ಲ ಹೆಕ್ಕಿ, ಒಟ್ಟು ಮಾಡಿ, ಅರ್ಥವತ್ತಾಗಿ ಜೋಡಿಸಿ ಪುಸ್ತಕವೊಂದನ್ನು ಸಿದ್ಧಪಡಿಸಿತ್ತು. ಅದು ಬಿಡಿ. ವಿಜ್ಞಾನ ಪ್ರಬಂಧಗಳು ಹಾಗೆಯೇ. ಅಷ್ಟಿಷ್ಟು ಹೆಕ್ಕಿ ಒಟ್ಟು ಮಾಡಿಬಿಡಬಹುದು ಎಂದಿರಾ? ಇದೋ ಪತ್ರಿಕಾ ವರದಿಗಳನ್ನೂ ಹೀಗೆಯೇ ಮಾಡಬಹುದಂತೆ.

ಉದಾಹರಣೆಗೆ, ಕ್ರಿಕೆಟ್‌ ಪಂದ್ಯಾಟ ನಡೆಯುತ್ತಿದೆ ಎಂದುಕೊಳ್ಳಿ. ಅದರ ಕಮೆಂಟರಿಯನ್ನೂ ನೀವು ಕೇಳುತ್ತೀರಿ. ಆಮೇಲೆ ಮರೆತು ಬಿಡುತ್ತೀರಿ. ಕಮೆಂಟು ಮಾಡುವವರು, ‘ಇದೊ ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಹೊಡೆದ ನಾಲ್ಕನೇ ಬೌಂಡರಿ’ ಎಂದು ಹೇಳಿ ಸುಮ್ಮನಾಗಿ ಬಿಡುತ್ತಾರೆ. ಈ ಮಾತಿನ ಜಾಡನ್ನೇ ಹಿಡಿದು, ಅದೇ ಕ್ಷಣದಲ್ಲಿ ವಿರಾಟ್‌ ಕೊಹ್ಲಿ ಹೊಡೆದ ಎಲ್ಲ ಬೌಂಡರಿಗಳನ್ನೂ ಲೆಕ್ಕ ಹಾಕಿ, ಯಾವ ದಿಕ್ಕಿನಲ್ಲಿ ಎಷ್ಟೆಷ್ಟು ಹೊಡೆದಿದ್ದನೆಂಬ ದಾಖಲೆಯನ್ನೂ ಹೆಕ್ಕಿ, ಒಟ್ಟುಗೂಡಿಸಿ ತಕ್ಷಣವೇ ಒಂದು ಪುಟ್ಟ ವರದಿಯನ್ನು ಸಿದ್ಧ ಮಾಡುವ ತಂತ್ರಾಂಶಗಳನ್ನು ಪ್ರಯೋಗಾರ್ಥ ಬಳಸಲಾಗುತ್ತಿದೆ. ಇಂಥ ತಂತ್ರಾಂಶಗಳು ಬರೆದ ವರದಿ ಅಲ್ಲೇ ಸ್ಟೇಡಿಯಮ್ಮಿನಿಂದಲೇ ಯಾರೋ ಕಣ್ಣಾರೆ ಕಂಡು ಬರೆದಂತೆ ಇರುತ್ತದೆ. ಅದೇ ಕ್ಷಣದಲ್ಲಿ ಸಿದ್ಧವಾಗುತ್ತದೆ. ಹೀಗೆ ವಿರಾಟ್‌ ಕೊಹ್ಲಿ, ಬೌಂಡರಿ ಎಂಬ ಕೆಲವೇ ಪದಗಳನ್ನು ಗುರುತಿಸಿ, ಅವುಗಳನ್ನೇ ಅಂತರ್ಜಾಲದಲ್ಲಿರುವ ಮಾಹಿತಿಯಲ್ಲಿ ಜಾಲಾಡಿ, ಪಾಠವೊಂದನ್ನು ಬರೆಯುವ ತಂತ್ರಾಂಶಗಳನ್ನು ಆರ್ಟಿಫಿಸಿಯಲ್‌ ಇಂಟೆಲಿಜೆನ್ಸ್‌ ತಂತ್ರದಿಂದ ಸಾಧಿಸಬಹುದು.

ಸದ್ಯಕ್ಕೆ ಇದು ವರದಿಗಾರರಿಗೆ ನೆರವಾಗುವಂತಹ ತಂತ್ರಾಂಶ. ಆದರೆ ಇದೇ ತಂತ್ರಾಂಶ ಅದೇ ವರದಿಗಾರನಿಗೆ ಪರ್ಯಾಯವಾಗಬಹುದೇ? ಯಾಕಿಲ್ಲ ಎನ್ನುತ್ತಾರೆ ಹೈದರಾಬಾದಿನ ಐಐಐಟಿಯ ವಿಜ್ಞಾನಿ ದೇವ್‌ ವರ್ಮ. ಅಂತರಜಾಲದಲ್ಲಿ ಮಾಹಿತಿ ಭಂಡಾರವೇ ಇದೆ. ಇದರಲ್ಲಿ ನಮಗೆ ಬೇಕಿರುವ ವಿಷಯಕ್ಕೆ ತಕ್ಕುದಾದ, ಹಾಗೂ ವಿಶ್ವಾಸಾರ್ಹವಾದ ವಿಷಯಗಳನ್ನು ಹೆಕ್ಕುವಂತಹ ತಂತ್ರಾಂಶಗಳೂ ಈಗ ಸಿಗುತ್ತವೆ. ಪ್ರತಿ ದಿನವೂ ಪ್ರಕಟವಾಗುವ ಸಾವಿರಾರು ಪತ್ರಿಕೆಗಳಿಂದ ಸುದ್ದಿಯನ್ನು ಹೆಕ್ಕಿ ಚುಟುಕಾಗಿ ಫೋನುಗಳಿಗೆ ರವಾನಿಸುವ ಹಲವಾರು ಆ್ಯಪ್‌ಗಳು ಇವೆ. ಇವುಗಳಂತೆಯೇ ವಿಜ್ಞಾನದ ಮಾಹಿತಿಯನ್ನೂ ಹೆಕ್ಕಿ ಸುದ್ದಿಯನ್ನಾಗಿ ಮಾಡಬಹುದು ಎನ್ನುತ್ತಾರೆ ಹೈದರಾಬಾದಿನ ಐಐಐಟಿಯ ವಿಜ್ಞಾನಿ ಪ್ರೊ. ವಾಸುದೇವ ವರ್ಮ. ಸದ್ಯಕ್ಕೆ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾದ ಪ್ರಬಂಧಗಳ ಸಾರಾಂಶಗಳನ್ನು ಆ ಕ್ಷಣವೇ ಒಟ್ಟು ಮಾಡಿ ಪ್ರಕಟಿಸುವ ರಿಸರ್ಚರ್‌ ನಂತಹ ಆ್ಯಪ್‌ಗಳು ಇವೆ.

ಕಠಿಣವಾದ ಭಾಷೆಯನ್ನು ಬಳಸುವ ವಿಜ್ಞಾನದ ಪ್ರಬಂಧಗಳನ್ನು ಪರಿಶೀಲಿಸಿ, ಅವುಗಳಲ್ಲಿ ಮುಖ್ಯವಾದ ಹಾಗೂ ಅಮುಖ್ಯವಾದ ಅಂಶಗಳನ್ನು ಗುರುತಿಸಿ, ಮುಖ್ಯವಾದ ಅಂಶಗಳನ್ನು ಸರಳ ಭಾಷೆಗೆ ಪರಿವರ್ತಿಸುವ ಪ್ರಯತ್ನಗಳು ನಡೆದಿವೆ. ಇದು ವಿಶ್ವಾಸಾರ್ಹ ಮಾಹಿತಿಯನ್ನು ಸಿದ್ಧಪಡಿಸಲು ನೆರವಾಗುತ್ತದೆ. ಹೈದರಾಬಾದಿನ ವೀಯೋಜ್‌ ಲ್ಯಾಬ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಿದ್ಧಪಡಿಸುತ್ತಿರುವ  ‘ಟೆಕ್‌ ಪ್ಲಸ್‌’ ಎನ್ನುವ ತಂತ್ರಾಂಶ ವಿವಿಧ ಸಂಶೋಧನಾ ಪತ್ರಿಕೆಗಳನ್ನು ಪರಿಶೀಲಿಸಿ ಅವನ್ನು ಸರಳ ಭಾಷೆಗೆ ಪರಿವರ್ತಿಸುವುದನ್ನು ಕಲಿಯುತ್ತಿದೆಯಂತೆ.

ಇಂಗ್ಲೀಷಿನಲ್ಲಿ ಇದನ್ನು ಮಾಡಿಬಿಡಬಹುದು. ಆದರೆ ಕನ್ನಡದಲ್ಲಿ ಹೇಗೆ? ಅದಕ್ಕೂ ಉಪಾಯಗಳಿವೆ. ಮೆಶೀನ್‌ ಲರ್ನಿಂಗ್‌ ತಂತ್ರಗಳನ್ನು ಬಳಸಿ ಇಂಗ್ಲೀಷಿನಿಂದ ವಿವಿಧ ಭಾಷೆಗೆ ಅನುವಾದಿಸುವ ತಂತ್ರಾಂಶಗಳೂ ಇವೆ. ಇಂತಹ ಹಲವು ಅನುವಾದಕ ಯಂತ್ರಗಳಿಗೆ ಪಾಠಗಳನ್ನು ನೀಡಿ, ಅವುಗಳೆಲ್ಲವೂ ಒದಗಿಸಿದ ಅನುವಾದಗಳನ್ನು ಪರಿಶೀಲಿಸಿ, ಅಂತಹವುಗಳಲ್ಲಿ ಓದಲು ಸರಾಗವಾದ, ಸರಳವಾದ, ಆಯಾ ಭಾಷೆಯ ಲಕ್ಷಣಗಳು ಹೆಚ್ಚಿರುವಂತಹ ಅನುವಾದಗಳನ್ನಷ್ಟೆ ಆಯ್ದು ಒಟ್ಟು ಮಾಡುವ ತಂತ್ರಾಂಶಗಳನ್ನು ಸಿದ್ಧಪಡಿಸಲು ವಾಸುದೇವ ವರ್ಮರ ತಂಡ ಶ್ರಮಿಸುತ್ತಿದೆ.

ಇವೆಲ್ಲವೂ ಕೂಡಿದರೆ ನಾಳೆ ಹೊಸದೊಂದು ವಿಜ್ಞಾನ ಪ್ರಬಂಧ ಪ್ರಕಟವಾದ ಕೂಡಲೇ ಅದನ್ನು ಹೆಕ್ಕಿ, ಸರಳಗೊಳಿಸಿ, ಕನ್ನಡಕ್ಕೆ ಅನುವಾದಿಸಿ ಸುದ್ದಿಗಳನ್ನು ಸಿದ್ಧಪಡಿಸುವುದೂ ಸಾಧ್ಯವಾಗಬಹುದು.