ವಿಂಡೋಸ್‌ 10 ಅಪ್‌ಡೇಟ್‌ ತಂದ ಅವಾಂತರ; ನಿಮ್ಮ ಕಂಪ್ಯೂಟರ್‌ಗೂ ಸಮಸ್ಯೆಯಾಗಿರಬಹುದು

ವಿಂಡೋಸ್‌ 10 ಇತ್ತೀಚಿನ ಅಪ್‌ಡೇಟ್‌ ಅವಾಂತರ ಸೃಷ್ಟಿಸಿದೆ. ಲಕ್ಷಾಂತರ ಲ್ಯಾಪ್‌ಟಾಪ್‌ ಮತ್ತು ಕಂಪ್ಯೂಟರ್‌ ಅಪ್‌ಡೇಟ್‌ ನಂತರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬಳಕೆದಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು, ಆತಂಕಕ್ಕೂ ಕಾರಣವಾಗಿದೆ. ನೀವೇನಾದರೂ ಅಪ್‌ಡೇಟ್‌ ಮಾಡುವ ಯೋಚನೆ ಇದ್ದರೆ, ಸದ್ಯಕ್ಕೆ ಕೈಬಿಡಿ

ವಿಂಡೋಸ್‌10ರ ಇತ್ತೀಚಿನ ಅಪ್‌ಡೇಟ್‌ (KB4517211) ಬಳಕೆದಾರರನ್ನು ಆತಂಕಕ್ಕೆ ದೂಡಿದೆ. ಅಪ್‌ಡೇಟ್‌ ಬಳಿಕ ವಿಂಡೋಸ್‌ ಸರ್ಚ್‌ ಮತ್ತು ವಿಎಮ್‌ ವೇರ್‌ ವರ್ಕ್‌ಸ್ಟೇಷನ್‌ ಕಾರ್ಯನಿರ್ವಹಿಸುವುದನ್ನೇ ನಿಲ್ಲಿಸಿದ್ದು, ಇನ್ನು ಕೆಲವು ಬಳಕೆದಾರರ ಲ್ಯಾಪ್‌ಟಾಪ್‌ಗಳಲ್ಲಿ ಪ್ರಿಂಟರ್‌ ಕಾರ್ಯನಿರ್ವಹಿಸಿದಂತೆ ಮಾಡಿವೆ. ಬೂಟ್‌ ಆಗುವುದರಲ್ಲೂ ಸಮಸ್ಯೆಗಳು ಕಾಣಿಸಿಕೊಂಡಿವೆ.

ಕಳೆದ ಕೆಲವು ದಿನಗಳಲ್ಲಿ ಅಲ್ಲಲ್ಲಿ ವರದಿಯಾಗುತ್ತಿರುವ ಬೆಳವಣಿಗೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರಿಗೆ ಬಾಧಿಸಿದೆ ಎಂಬುದು ಬ್ಲೀಪಿಂಗ್‌ ಕಂಪ್ಯೂಟರ್‌ ಅಧ್ಯಯನದಿಂದ ತಿಳಿದು ಬಂದಿದೆ. ಕಂಪ್ಯೂಟರ್‌ ಸೇವೆಗಳನ್ನು ನೀಡುತ್ತಿರುವ ಬ್ಲೀಪಿಂಗ್‌ ಕಂಪ್ಯೂಟರ್‌ ಕಳೆದ ಕೆಲವು ತಿಂಗಳಿಂದ ನೂರಾರು ಸಂಖ್ಯೆಯಲ್ಲಿ ನೆರವು ಬೇಡಿ ಗ್ರಾಹಕರಿಂದ ಆತಂಕದ ಕರೆಗಳು ಬರುತ್ತಿರುವುದಾಗಿ ಹೇಳಿದೆ.

ಸ್ವಯಂ ಆಗಿ ಸಮಸ್ಯೆಗಳನ್ನು ಸರಿಪಡಿಸುತ್ತಿದ್ದ ಮೈಕ್ರೋಸಾಫ್ಟ್‌ ಯಾವ ತಂತ್ರಾಂಶವೂ ಕಾರ್ಯನಿರ್ವಹಿಸುತ್ತಿಲ್ಲ. ಪರದೆ ನಿಷ್ಕ್ರಿಯವಾಗಿದೆ. ಅಪ್‌ಡೇಟ್‌ ನಂತರ ನನ್ನ ಕಂಪ್ಯೂಟರ್‌ ಯಾವುದೇ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳು ಮೇಲಿಂದ ಮೇಲಿಂದ ಬರುತ್ತಲೇ ಇವೆ ಎಂದು ಬ್ಲೀಪ್‌ ಕಂಪ್ಯೂಟರ್‌ನ ಗ್ರಾಹಕ ನೆರವು ವಿಭಾಗ ಫೋರ್ಬ್ಸ್‌ ಪತ್ರಿಕೆಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ವಿಂಡೋಸ್‌ ಕೆಬಿ4517211 ಅಪ್‌ಡೇಟ್‌ನಿಂದಾಗಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಇದು ಕಡ್ಡಾಯವಾಗಿ ಮಾಡಲೇಬೇಕಾದ ಅಪ್‌ಡೇಟ್‌ ಅಲ್ಲ. ಆದರೆ ಪದೇಪದೇ ಪರದೆ ಮೇಲೆ ಕಾಣಿಸಿಕೊಳ್ಳುವ ಕಾರಣಕ್ಕೆ ಅನೇಕರು ಅಪ್‌ಡೇಟ್‌ ಮಾಡಿದ್ದಾರೆ. ಬಳಿಕ ವಿಂಡೋಸ್‌ ಸರ್ಚ್‌, ಕಾರ್ಟನಾಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದು ತಿಳಿದು ಬಂದಿದೆ. ಸರ್ಚ್‌ ಭಾಗದಲ್ಲಿ ಟೈಪಿಸುವುದಕ್ಕೂ ಸಾಧ್ಯವಾಗದಂತೆ ಆಗಿದೆ.

ಅಪ್‌ಡೇಟ್‌ ಬಳಿಕ ವರ್ಚ್ಯುವಲ್‌ ಮಷಿನ್‌ ವರ್ಕ್‌ಸ್ಟೇಷನ್‌ಗಳು ವಿಂಡೋಸ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದು, ಅಪ್‌ಡೇಟ್‌ ಮಾಡುವಂತೆ ಸೂಚಿಸುತ್ತಿವೆ. ಆದರೆ ಯಾವುದೇ ಅಪ್‌ಡೇಟ್‌ಗಳು ಲಭ್ಯವಿಲ್ಲ! ಕಳೆದೊಂದು ತಿಂಗಳಲ್ಲಿ ಯುಎಸ್‌ಬಿ, ಆಡಿಯೋ, ಸ್ಟಾರ್ಟ್‌ಮೆನು, ಸಿಪಿಯು ಮುಂತಾದ ಸಮಸ್ಯೆಗಳು ಕಾಣಿಸಿಕೊಂಡಿವೆ.

ಎರಡು ದಿನಗಳ ಹಿಂದೆ ಈ ಬೆಳವಣಿಗೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದ ಮೈಕ್ರೋಸಾಫ್ಟ್‌ ಈಗ ಪರಿಸ್ಥಿತಿ ನಿಭಾಯಿಸುವುದಕ್ಕೆ ಹೊರಟಿದೆ. ಅಕ್ಟೋಬರ್‌ 8ಕ್ಕೆ ಈ ಅಪ್‌ಡೇಟ್‌ಅನ್ನು ಬದಲಿಸಲಿದೆ ಎಂದು ಬ್ಲೀಪ್‌ ಕಂಪ್ಯೂಟರ್ ತನ್ನ ವರದಿಯಲ್ಲಿ ತಿಳಿಸಿದೆ.

ನಿಮಗೂ ಸಮಸ್ಯೆಯಾಗಿದೆಯೇ? ಹೀಗೆ ಮಾಡಿ..

ನೀವು ಈಗಾಗಲೇ ವಿಂಡೋಸ್‌ 10 ಇತ್ತೀಚಿನ ಅಪ್‌ಡೇಟ್‌ ಮಾಡಿ, ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು.

  • ಕೂಡಲೇ ಹೊಸ ಅಪ್‌ಡೇಟ್‌ ಅನ್ನು ಅನ್‌ ಇನ್‌ಸ್ಟಾಲ್‌ ಮಾಡಿ.
  • ಮೊದಲು ಕಂಟ್ರೋಲ್‌ ಪ್ಯಾನೆಲ್‌ಗೆ ಹೋಗಿ
  • ನಂತರ ಪ್ರೋಗ್ರಾಮ್ಸ್‌, ಅದರಲ್ಲಿ ಪ್ರೋಗ್ರಾಮ್ಸ್‌ ಅಂಡ್‌ ಫೀಚರ್ಸ್‌ ಆಯ್ಕೆ ಮಾಡಿ
  • ಇಲ್ಲಿ ವ್ಯೂ ಇನ್‌ಸ್ಟಾಲ್ಡ್‌ ಅಪ್‌ಡೇಟ್ಸ್‌ ಎಂಬುದನ್ನು ಆಯ್ಕೆ ಮಾಡಿ.
  • ಅಲ್ಲಿರುವ ಪಟ್ಟಿಯಲ್ಲಿ ಕೆಬಿ4517211 ಮೇಲೆ ರೈಟ್‌ ಕ್ಲಿಕ್‌ ಮಾಡಿ.
  • ಈ ಅಪ್‌ಡೇಟ್‌ ಅನ್‌ಇನ್‌ಸ್ಟಾಲ್‌ ಮಾಡಬೇಕೆ ಎಂದು ಕೇಳುತ್ತದೆ.
  • ಹೌದು ಎಂದು ಆಯ್ಕೆ ಮಾಡಿ, ನಂತರ ಕಂಪ್ಯೂಟರ್‌ ರೀಸ್ಟಾರ್ಟ್‌ ಮಾಡಿ