ಎಲ್ಲೆ ಎಲ್ಲಿದೆ ನೀರಿಗೆ, ನಭವೂ ಒಂದು ಮೇರೆಯೆ!!

ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಇದ್ದಾಳೆ, ಆದರೆ ಆಕೆ ಹೊಸದೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದಾಗ ಅದು ಬೇರೆಯವರಿಗೆ ಪ್ರೇರಣೆಯಾಗುತ್ತದೆ. ಬಾಹ್ಯಾಕಾಶ ಯಾನ ಮಾಡುವ ಮತ್ತು ಬಾಹ್ಯಾಕಾಶದಲ್ಲಿ ನಡೆದಾಡಿದ ಮಹಿಳೆಯರ ಸಾಧನೆಯನ್ನು ಗಮನಿಸಿದಾಗ, ಇದು ಮತ್ತೂ ಹಿರಿಯ ಸವಾಲನ್ನು ಸ್ವೀಕರಿಸಬೇಕಾದ ಕೆಲಸ ಎನ್ನುವುದಕ್ಕೆ ಯಾವುದೇ ಅನುಮಾನವಿಲ್ಲ ಎನ್ನುತ್ತಾರೆ ಸುಮಂಗಲಾ ಎಸ್. ಮುಮ್ಮಿಗಟ್ಟಿ

ಇತ್ತೀಚಿನ ಚಂದ್ರಯಾನ -2 ಅದರ ಹಿಂದಿನ ಮಂಗಳಯಾನ ಮುಂತಾದ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಉಡಾವಣೆಯಾದಾಗ, ಬೇರೆ ದೇಶದ ಮಹಿಳಾ ಬಾಹ್ಯಾಕಾಶ ವಿಜ್ಞಾನಿಗಳು ಬಾಹ್ಯಾಕಾಶ ನಡಿಗೆಯನ್ನು ನಡೆಸಿದಾಗ, ಸುದ್ಧಿಯಾಗುತ್ತದೆ. ಆಕೆಯ ಸಾಧನೆಯ ಬಗ್ಗೆ ಎಲ್ಲರೂ ಹೆಮ್ಮೆ ಪಡುತ್ತಾರೆ. ಆದರೆ ಆಶ್ಚರ್ಯ ಎಂಬಂತೆ  ಕೆಲವೇ ದಿನಗಳ ಹಿಂದೆ ನಡೆದ ಚರ್ಚೆಯೊಂದರಲ್ಲಿ ಕೆಲವರು ಅದರಲ್ಲೇನು ಮಹಾ ಎಂದು ಇಷ್ಟು ಪ್ರಚಾರ ಕೊಡುತ್ತಾರೆ, ಈಗ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಇದ್ದಾರೆ ಹಾಗೆಯೇ ಇಲ್ಲಿಯೂ ಸಹ. ಮಾಧ್ಯಮದವರು ಅನಾವಶ್ಯಕವಾಗಿ  ಇದನ್ನು ಹೈಲೈಟ್ ಮಾಡುತ್ತಾರೆ ಎಂಬ ಮಾತುಗಳು  ಕೇಳಿ ಬಂದವು. ಆ ಗುಂಪಿನಲ್ಲಿ ಕೆಲವು ಮಹಿಳೆಯರೂ ಕೂಡಾ ಇದ್ದರು.

ನಿಜ ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಇದ್ದಾಳೆ ಆದರೆ ಆಕೆ ಹೊಸದೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದಾಗ ಅದು ಬೇರೆಯವರಿಗೆ ಪ್ರೇರಣೆಯಾಗುತ್ತದೆ, ಆ ಕ್ಷೇತ್ರದ ಸವಾಲುಗಳನ್ನು ಅರಿತಾಗ ನಮಗೆ ಅದರ ಮಹತ್ವದ ಅರಿವು ಉಂಟಾಗುತ್ತದೆ.

ನಮಗೆಲ್ಲ ತಿಳಿದಿರುವಂತೆ ಬಾಹ್ಯಾಕಾಶ ತಂತ್ರಜ್ಞಾನ ಸವಾಲಿನದ್ದು ಯಾವುದೇ ಯೋಜನೆಯ ರೂಪು ರೇಶೆಗಳನ್ನು ತಯಾರಿಸುವ ಹಂತದಿಂದ ಹಿಡಿದು ಅದು ಬಾಹ್ಯಾಕಾಶವನ್ನು ಸೇರಿ ಭೂಮಿಯೊಡನೆ ಸಂಪರ್ಕವನ್ನು ಸಾಧಿಸುವ ವರೆಗಿನ ಹಾದಿ ಕೇವಲ ಕೆಲವರದ್ದಲ್ಲ ನೂರಾರು ಕೈಗಳು ಹಲವಾರು ಸಂಸ್ಥೆಗಳು ಅದರಲ್ಲಿ ತೊಡಗಿಸಿಕೊಂಡಿರುತ್ತವೆ, ಅವರೆಲ್ಲರನ್ನೂ ಒಗ್ಗೂಡಿಸಿಕೊಂಡು ಸಮನ್ವಯವನ್ನು ಸಾಧಿಸಿಕೊಂಡು ಕಾರ್ಯನಿರ್ವಹಿಸುವಾಗ ಕಂಡುಬರುವ ಹಲವಾರು ಸಮಸ್ಯೆಗಳನ್ನು ಆಕೆ ಎದುರಿಸಬೇಕಾಗುತ್ತದೆ, ಮಹಿಳೆ ಗುಂಪಿನ ನಾಯಕಿಯಾಗಿದ್ದಾಗ ಕೇವಲ ಆಕೆಯ ಸ್ಥಾನ ಕೆಲಸ ಮಾಡುವುದಿಲ್ಲ. ಆಕೆಯ ಆದೇಶಗಳನ್ನು ಗುಂಪಿನ ಇತರರು ಪಾಲಿಸುವಂತೆ ಮಾಡುವುದು ಅದರಲ್ಲೂ ಪುರುಷರ ಸಹಕಾರ ದೊರೆಯುವುದು ಸುಲಭವಲ್ಲ. ಕಾಣದ ಗಾಜಿನ ಗೋಡೆ ಸದಾ ಆಕೆಯ ವಿರುದ್ಧ ಕೆಲಸ ಮಾಡುತ್ತದೆ. ಗೆಲುವಿನ ಪ್ರಶಂಸೆ ಎಷ್ಟು ಸಂತಸದಾಯಕವೋ ಸೋಲಿನ ನೋವು ಅದಕ್ಕಿಂತಲೂ ಹೆಚ್ಚು ಆಘಾತಕಾರಿ. ಸಮಯದ ಮಿತಿಯಿಲ್ಲದ  ಈ ಕ್ಷೇತ್ರ ಮನೆಯ ಜವಾಬ್ದಾರಿಯಿಂದ ಆಕೆಯ ಬಿಡುಗಡೆಯನ್ನು ಬಯಸುತ್ತದೆ. ಆದರೆ ಅದು ಆಕೆಗೆ ಸಾಧ್ಯವಿಲ್ಲದಿದ್ದಾಗ ಮನೆಯಲ್ಲಿ ಸಣ್ಣಪುಟ್ಟ ಘರ್ಷಣೆಗಳು ಉಂಟಾಗುತ್ತವೆ. ಈ ಒತ್ತಡವೂ ಕೆಲಸದ ಮೇಲೆ ಪರಿಣಾಮವನ್ನು ಬೀರುತ್ತದೆ, ಇವೆಲ್ಲವನ್ನೂ ಮೀರಿ ಆಕೆ ಅಂತಹ ಒಂದು ಸಾಧನೆಯನ್ನು ಮಾಡಿದಾಗ ಆಕೆ ಇತರರಿಗೆ ಪ್ರೇರಕಳು ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ .

ಇನ್ನು ಬಾಹ್ಯಾಕಾಶ ಯಾನ ಮಾಡುವ ಮತ್ತು ಬಾಹ್ಯಾಕಾಶದಲ್ಲಿ ನಡೆದಾಡಿದ ಮಹಿಳೆಯರ ಸಾಧನೆಯನ್ನು ಗಮನಿಸಿದಾಗ, ಇದು ಮತ್ತೂ ಹಿರಿಯ ಸವಾಲನ್ನು ಸ್ವೀಕರಿಸಬೇಕಾದ ಕೆಲಸ ಎನ್ನುವುದುದಕ್ಕೆ ಯಾವುದೇ ಅನುಮಾನವಿಲ್ಲ. ಬಾಹ್ಯಾಕಾಶ ಎನ್ನುವುದು ಭೂಮಿಗಿಂತ ಭಿನ್ನವಾದ, ಹಲವಾರು ವಿಕಿರಣಗಳಿಂದ ಕೂಡಿದ ಸದಾ ಅಂತರಿಕ್ಷದ ವಿವಿಧ ಕಾಯಗಳ ತಾಡನಗಳು ನಡೆಯುತ್ತಿರುವ ಒಂದು ಪ್ರದೇಶ, ಅತ್ಯಂತ ಕಿರಿದಾದ ಯಾನ ನೌಕೆಯೊಳಗೆ ತೇಲುತ್ತ, ಗುರುತ್ವಾಕರ್ಷಣೆಯ ಇಲ್ಲದ ಅಲ್ಲಿ ತನ್ನ ದೇಹದ ಸಮತೋಲವನ್ನು ಕಾಯ್ದುಕೊಳ್ಳುತ್ತ ಸಂಶೋಧನೆಯನ್ನು ಮಾಡುತ್ತ ಕೆಲಸ ಮಾಡುವಾಗ ಆಕೆಯ ಜೈವಿಕ ಚಯಾಪಚಯ ಕ್ರಿಯೆಯಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತವೆ, ಹಾರ್ಮೋನಗಳ ವ್ಯತ್ಯಯ ಉಂಟಾಗುತ್ತದೆ.

ಇದಕ್ಕೂ ಮುನ್ನ ವ್ಯೋಮಯಾನಕ್ಕೆ ಪಡೆಯುವ ತರಬೇತಿಯೇನೂ ಸುಲಭ ಸಾಧ್ಯವಾಗಿರುವುದಿಲ್ಲ, ಪುರುಷರಿಗೂ ಕಠಿಣ ಎನಿಸುವ ಅದರಲ್ಲಿ ತೇರ್ಗಡೆಯಾದ ನಂತರವೇ ಆಕೆ ಬಾಹ್ಯಾಕಾಶ ಪಯಣಕ್ಕೆ ಸಿದ್ಧಳಾಗಿರುತ್ತಾಳೆ. ಅಗಾಧ ವೇಗದಲ್ಲಿ ವಿಪರಿತವಾದ  ವೈಬ್ರೇಶನ್ ತಡೆದುಕೊಂಡು ಹೋಗಬೇಕಾದ ಆ ಯಾನಕ್ಕೆ ಆಕೆ ಜೀವದ ಹಂಗು ತೊರೆದೇ ಹೋಗಬೇಕಾಗುತ್ತದೆ. ಇಂಥ ಪಯಣದಲ್ಲಿ ಜೀವ ಕಳೆದುಕೊಂಡವರೂ ನಮ್ಮ ಮುಂದಿದ್ದಾರೆ.

ಪಯಣದ ಅವಧಿಯಲ್ಲಿ ಪುರುಷನಿಗಿಂತ ಭಿನ್ನವಾದ ದೈಹಿಕ ರಚನೆಯುಳ್ಳ ಮಹಿಳೆ ಪುರುಷನಿಗಿಂತ ಭಿನ್ನವಾದ ಕೆಲ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಕೆಲವೊಂದು ಹೊಂದಾಣಿಕೆಗಳನ್ನು ಸಹ ಆಕೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ, ಇದು ಆಕೆಯ ಋತುಚಕ್ರ, ಸಂತಾನಭಿವೃದ್ಧಿ ಮುಂತಾದವುಗಳ ಮೇಲೆ ಗಣನೀಯ ಬದಲಾವಣೆಗಳನ್ನುಂಟು ಮಾಡುತ್ತದೆ.

ಇವೆಲ್ಲವನ್ನು ನೋಡಿದಾಗ ಮಹಿಳೆಗೆ ಬಾಹ್ಯಾಕಾಶ ಕ್ಷೇತ್ರ ಅಂಥ  ಸುಲಭವಾದದ್ದೇನೂ ಅಲ್ಲ. ಆಂದಾಗ ಆಕೆ ಆ ಕ್ಷೇತ್ರದಲ್ಲಿ ಸಾಧನೆ ಮಾಡಿದಾಗ ಈಗ ಆಕೆಗೆ ದೊರೆಯುವ ಮನ್ನಣೆ ನಿಜಕ್ಕೂ ಅವಶ್ಯಕ. ವಿಮಾನ ಯಾನದಂತೇ ಅದೂ ಸಾಮಾನ್ಯವಾಗುವ ಸುಲಭಸಾಧ್ಯವಾಗುವ ತಂತ್ರಜ್ಞಾನ ಬೆಳೆಯಬಹುದು ಆದರೆ ಸಧ್ಯಕ್ಕಂತೂ ಈ ಕ್ಷೇತ್ರದಲ್ಲಿ ಮಹಿಳೆ ಮಾಡುತ್ತಿರುವ ಸಾಧನೆಯನ್ನು ನಾವೆಲ್ಲ ಸಂಭ್ರಮಿಸುವ ಅವಶ್ಯಕತೆ ಖಂಡಿತ ಇದೆ.

(ಈ ಲೇಖನ ಮೊದಲು ಹಿತೈಷಿಣಿ ಮ್ಯಾಗ್‌ ಜಾಲತಾಣದಲ್ಲಿ ಪ್ರಕಟಗೊಂಡಿತ್ತು)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.