ಮಹಿಳಾ ದಿನದ ವಿಶೇಷ | ಭಾರತದ ಹೆಮ್ಮೆಯ ಟಾಪ್‌ 5 ಮಹಿಳಾ ಟೆಕ್‌ ಉದ್ಯಮಿಗಳು

ಇದು ಟೆಕ್‌ ಯುಗ. ಜಾಗತಿಕ ಮಟ್ಟದಲ್ಲಿ ಸಂಶೋಧನೆ, ನವೀನ ಪ್ರಯೋಗಗಳ ಮೂಲಕ ಟೆಕ್‌ಲೋಕದಲ್ಲಿ ಮಹಿಳೆ ಅಪೂರ್ವ ಹೆಜ್ಜೆಗಳನ್ನು ಗುರುತು ಮೂಡಿಸಿದ್ದಾಳೆ. ಟೆಕ್‌ ಲೋಕದಲ್ಲಿ ಮಹತ್ವದ ಸಾಧನೆ ಮಾಡಿರುವ ಅಂತಹ ಐದು ಹೆಮ್ಮೆಯ ಮಹಿಳೆಯರು ಇಲ್ಲಿದ್ದಾರೆ. ಮಹಿಳಾ ದಿನದ ಶುಭಾಶಯಗಳು

ಮೊನ್ನೆ ಉಡಾವಣೆಯಾದ ಚಂದ್ರಯಾನ-2 ಯೋಜನೆಯಲ್ಲಿ ಶೇ.30 ರಷ್ಟು ಮಹಿಳೆಯರೇ ಭಾಗವಹಿಸಿದ್ದರು.  ಇದು ಹೆಮ್ಮೆ ಪಡಬೇಕಾದ ಸಂಗತಿ. ಯೋಜನಾ ನಿರ್ದೇಶಕಿಯಾಗಿ ವನಿತಾ ಮುತ್ತಯ್ಯ ಕೆಲಸ ಮಾಡಿದ್ದರೆ ಚಂದ್ರನಲ್ಲಿ ಉಪಗ್ರಹ ಇಳಿಯಬೇಕಾದ ಸ್ಥಳ ಗುರುತಿಸುವ ಮಿಷನ್ ನಿರ್ದೇಶಕಿಯಾಗಿ ರಿತು ಕರಿಧಾಲ್ ಪ್ರಮುಖ ಪಾತ್ರ ವಹಿಸಿದ್ದರು. ರಿತು ಕರಿಧಾಲ್ ಅವರು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್(ಐಐಎಸ್‍ಸಿ)ನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವೀಧರೆ. ಹೀಗೆ ಪುರುಷ ಪ್ರಧಾನ ಎನಿಸುವ ಯಾವುದೇ ಕ್ಷೇತ್ರದಲ್ಲಿ ಅಲ್ಲಿ ಮಹಿಳೆ ತನ್ನ ಸ್ಥಾನವನ್ನು ಗಳಿಸಿಕೊಂಡಿದ್ದಾಳೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಆಕೆಯದ್ದು ವಿಶೇಷ ಸ್ಥಾನವಿದೆ. ಇತ್ತೀಚೆಗೆ ನ್ಯಾಷನಲ್ ಅಸೋಸಿಯೇಶನ್ ಆಫ್ ಸಾಫ್ಟ್ವೇರ್ ಅಂಡ್ ಸರ್ವೀಸ್ ಕಂಪನೀಸ್ (NASSCOM) ಕೊಟ್ಟ ಮಹಿಳೆ ಮತ್ತು ಮಾಹಿತಿ ತಂತ್ರಜ್ಞಾನದ 2018 ರ ಸ್ಕೋರ್ ಕಾರ್ಡ್ ಪ್ರಕಾರ ಐಟಿ ಕಂಪನಿಗಳು ಶೇ.20 ರಷ್ಟು ಮಹಿಳೆಯರಿಗೆ ಉನ್ನತ ಸ್ಥಾನಗಳನ್ನು ಕೊಟ್ಟಿವೆ. ಲಿಂಗ ಸಮಾನತೆಯನ್ನು ಓರೆಗೆ ಹಚ್ಚಿ ಹೆಚ್ಚಿನ ಮಹಿಳೆಯರು ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಕಾರ್ಯನಿರ್ವಾಹಕ ಹುದ್ದೆಗಳನ್ನು ಅಲಂಕರಿಸುವುದು ನಮ್ಮ ಜವಾಬ್ದಾರಿ ಎಂಬುದು ಅಸೋಸಿಯೇಶನ್ನಿನ ಹಿರಿಯ ಉಪಾಧ್ಯಕ್ಷೆ ಸಂಗೀತಾ ಗುಪ್ತಾ ಅವರ ಮಾತು. ಈ ನಾಸ್ಕಾಮ್ ಮಾರ್ಚ್ 2014 ರಲ್ಲಿ ತಂತ್ರಜ್ಞಾನದಲ್ಲಿ ಮಹಿಳೆಯರು (GIT- Girls In Technology) ಎಂಬ ಹೊಸ ಯೋಜನೆಯನ್ನು ಪರಿಚಯಿಸಿತು. ಈ ಮೂಲಕ ಮಹಿಳೆಯರು ಮುಕ್ತವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾಲಿಡಲು ದೊಡ್ಡ ವೇದಿಕೆ ಕಲ್ಪಿಸಲಾಗಿದೆ. ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಐದು ಭಾರತೀಯ ಮಹಿಳಾ ಟೆಕ್‌ ಉದ್ಯಮಿಗಳ ಪಟ್ಟಿ ಇಲ್ಲಿದೆ.

ರೇಷ್ಮಾ ಸೌಜನಿ

ವಿಜ್ಞಾನ, ಮಾಹಿತಿ ತಂತ್ರಜ್ಞಾನದಂತಹ ವೃತ್ತಿ ಬದುಕಿಗೆ ತೆರೆದುಕೊಳ್ಳುವ ಮಹಿಳೆಯರ ಸಂಖ್ಯೆ ಕೊಂಚ ಕಡಿಮೆಯೇ. ಹಾಗಿದ್ದು ಈ ಸಮಸ್ಯೆ ಭಾರತದಲ್ಲಷ್ಟೇ ಅಲ್ಲ ಮುಂದುವರಿದ ದೇಶಗಳಲ್ಲೂ ಇದೆ ಎನ್ನುವುದಕ್ಕೆ ಭಾರತ ಸಂಜಾತೆ ಅಮೆರಿಕದ ರೇಷ್ಮಾ ಸೌಜನಿ 2014 ರಲ್ಲಿ ಹುಟ್ಟು ಹಾಕಿದ ‘ಗರ್ಲ್ಸ್ಹುಕೋಡ್’ ಕಂಪನಿಯೇ ಸಾಕ್ಷಿ. ಈ ಕಂಪನಿಯು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅವಕಾಶಗಳಿಗೆ ಹೆಚ್ಚೆಚ್ಚು ಮಹಿಳೆಯರನ್ನೇ ಸಬಲಗೊಳಿಸುವ ಉದ್ದೇಶ ಹೊಂದಿದೆ. ಈ ಕ್ಷೇತ್ರದ ಲಿಂಗ ಅಸಮಾನತೆ ಕಂಡುಕೊಂಡ ಸೌಜನಿ ಇಲ್ಲಿಯವರೆಗೆ ೫೦,೦೦೦ ಮಹಿಳಾ ಟೆಕ್ಕಿಗಳನ್ನು ರೂಪಿಸಿದ್ದಾರೆ. ಅಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಪ್ರೋಗಾಮಿಂಗ್, ರೊಬೊಟಿಕ್ಸ್ ಮತ್ತು ವೆಬ್ ಡಿಸೈನ್ ಗಳನ್ನು ಹೇಳಿಕೊಡಲಾಗುತ್ತಿದೆ. ಸೌಜನಿ ‘ಯೇಲ್ ಲಾ ಸ್ಕೂಲ್’ ಪದವೀಧರೆ ಹಾಗೂ ಡೆಮಾಕ್ರಟಿಕ್ ಪಕ್ಷದಿಂದ ರಾಜಕೀಯಕ್ಕೂ ಕಾಲಿಟ್ಟಿದ್ದಾರೆ.

ದೇಬ್‌ಜಾನಿ ಘೋಷ್

ಮೂವತ್ತು ವರ್ಷಗಳ ಇತಿಹಾಸವಿರುವ ಸಾಫ್ಟವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (NASSCOM)ದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಘೋಷ್ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಟೆಲ್‌ನ ದಕ್ಷಿಣ ಭಾರತದ ಮಾಜಿ ವ್ಯವಸ್ಥಾಪಕ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಾರ್ಪೋರೇಟ್‌ ಜಗತ್ತಿನಲ್ಲಿ ಲಿಂಗ ವೈವಿಧ್ಯತೆ ಮತ್ತು ಸಮಾನ ಪ್ರಾತಿನಿಧ್ಯದ ಪರ ಸದಾ ದನಿ ಎತ್ತು ಘೋಷ್‌, ‘ಯಾವುದೇ ಉದ್ಯಮ ಬೆಳೆಯಬೇಕೆಂದರೆ ಅಲ್ಲಿ ಲಿಂಗಬೇಧವಿರಬಾರದು’ ಎನ್ನುತ್ತಾರೆ. ಭಾರತದ 2800 ಸಾವಿರ ಸಾಫ್ಟವೇರ್ ಕಂಪೆನಿಗಳ ಸದಸ್ಯತ್ವ ಹೊಂದಿರುವ ನ್ಯಾಸ್‌ಕಾಂಗೆ ಒಬ್ಬ ಮಹಿಳೆ ನಾಯಕತ್ವ ವಹಿಸಿಕೊಂಡಿರುವುದು ದೊಡ್ಡ ವಿಷಯ.

ಗೀತಾಕಣ್ಣನ್

ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಅನಿತಾ ಬೋರ್ಗ್ (AnitaB.org) ಹೆಸರಿನ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಮುನ್ನಡೆಸುತ್ತಿದ್ದಾರೆ. ಇದಕ್ಕಾಗಿ ಸರ್ಕಾರಿ ಸಂಸ್ಥೆಗಳಾದ, `ನ್ಯಾಶನಲ್ ಸೈನ್ಸ್ & ಟೆಕ್ನಾಲಜಿ ಎಂಟರ್‍ಪ್ರೆನ್ಯೂರ್‍ಶಿಪ್ ಡೆವಲಪ್‍ಮೆಂಟ್ ಬೋರ್ಡ್’,  ದಿ ಇಂಡೋ-ಯುಎಸ್ ಸೈನ್ಸ್ & ಟೆಕ್ನಾಲಜಿ ಫೋರಮ್’ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದಾರೆ. `ವುಮೆನ್ ಎಂಟರ್‍ಪ್ರೆನ್ಯೂರ್‍ಶಿಪ್ ಕ್ವೆಸ್ಟ್ ಪ್ರೋಗ್ರಾಮ್ ಹೆಸರಿನಲ್ಲಿ ಪ್ರತಿ ವರ್ಷವೂ ಹೊಸ ಮಹಿಳಾ ಉದ್ಯಮಿಗಳನ್ನು ತಂತ್ರಜ್ಞಾನ ಕ್ಷೇತ್ರಕ್ಕೆ ಪರಿಚಯಿಸುತ್ತಿದ್ದಾರೆ.

ಅಶ್ವಿನಿ ಅಶೋಕನ್

ಚೆನ್ನೈ ಮೂಲದ ಅಶ್ವಿನಿ ಮ್ಯಾಡ್ ಸ್ಟ್ರೀಟ್ ಡೆನ್ ಕಂಪನಿಯನ್ನು ಆರಂಭಿಸಿದ್ದು ನಿತ್ಯ ಬದುಕಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆನ್‌ಲೈನ್ ಶಾಂಪಿಂಗ್ ಮಾಡುವಾಗ ಅದರಲ್ಲೂ ಬಟ್ಟೆಗಳನ್ನು ಕೊಳ್ಳುವಾಗ ಆ ಬಟ್ಟೆ ನಮಗೆ ಹೊಂದಬಲ್ಲದೇ, ನಮ್ಮ ದೇಹದ ಆಕಾರಕ್ಕೆ ಬಣ್ಣಕ್ಕೆ ಹೊಂದಬಲ್ಲದೇ ಎಂಬೆಲ್ಲ ಗೊಂದಲಗಳಿಗೆ ಎಐ ಮೂಲಕ ಅಶ್ವಿನಿ ಉತ್ತರ ಕಂಡು ಹಿಡಿದಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ದಿನನಿತ್ಯದ ಬಳಕೆಗೆ ಜನರಿಗೆ ಅನುಕೂಲವಾಗುವಂತೆ ನಮ್ಮ ದೇಹವನ್ನು ಡಿಟೆಕ್ಟ್ ಮಾಡಿ ನಮ್ಮ ದೇಹದಾಕಾರ, ಬಣ್ಣಕ್ಕೆ ತಕ್ಕನಾದ ಬಟ್ಟೆಗಳನ್ನು ನಾವು ಹಾಕಿನೋಡಿದಂತಹ ಅನುಭವವನ್ನು ಅದು ಕೊಡುತ್ತದೆ. ಚೆನ್ನೈ ಹಾಗೂ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಎರಡು ತಂಡಗಳನ್ನಿಟ್ಟು ಕೆಲಸ ಮಾಡುತ್ತಿರುವ ಅಶ್ವಿನಿ ಇಂಟೆಲ್ ಕಂಪನಿಯನ್ನು ೨೦೧೩ ರಲ್ಲಿ ತೊರೆದು ಈ ಹೊಸ ಕಂಪನಿಯನ್ನು ಹುಟ್ಟು ಹಾಕಿದ್ದರ ಉದ್ದೇಶ ತಂತ್ರಜ್ಞಾನದ ಆವಿಷ್ಕಾರ ಅಷ್ಟೇ ಅಲ್ಲದೇ ಹೆಚ್ಚಿನ ಮಹಿಳೆಯರನ್ನು ಒಳಗೊಳ್ಳುವುದಾಗಿದೆ. ಇವರ ಕಂಪನಿಯಲ್ಲಿ ಶೇ ೫೮ ರಷ್ಟು ಮಹಿಳಾ ಉದ್ಯೋಗಿಗಳೇ ಇದ್ದಾರೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ನಮಗೆ ಮುಂಚೂಣಿಯಲ್ಲಿ ಕಾಣಸಿಗುವ ಭಾರತೀಯರು. ವರ್ಲ್ಡ್ ಎಕನಾಮಿಕ್ ಫೋರಮ್ ಪ್ರಕಾರ ಭಾರತದಲ್ಲಿರುವ ಉದ್ಯಮಗಳಲ್ಲಿ ಮೂರರಲ್ಲಿ ಒಬ್ಬರು ಮಹಿಳೆಯರೇ ಇದ್ದಾರೆ. ಈ ಮೂಲಕ ದೇಶದ ಜಿಡಿಪಿ ಹೆಚ್ಚಳಕ್ಕೆ ಇವರ ಕೊಡುಗೆಯೂ ಇದೆ.

ದೀಪಾ ಮಾಧವನ್‌

ಪೇಪಲ್‌ನಲ್ಲಿ ನಿರ್ದೇಶಕಿಯಾಗಿರುವ ದೀಪಾ ಚೆನ್ನೈನವರು. ಪೇಪಲ್‌ನಲ್ಲಿ ಮಹಿಳೆಯರನ್ನು ಮರಳಿ ಉದ್ಯೋಗದತ್ತ ಕರೆತರುವ ರೀಚಾರ್ಜ್‌ ಕಾರ್ಯಕ್ರಮ ಇವರದ್ದೇ ಪ್ರಯತ್ನ. ಡೆಲಾಯಿಟಿಯಲ್ಲಿ ಉದ್ಯೋಗಿಯಾಗಿದ್ದ ಇವರು ಚಿಕ್ಕ ತಮ್ಮ ಮಕ್ಕಳಿಗೆ ಸಮಯ ನೀಡಲಾಗದು ಎಂದು ಉದ್ಯೋಗ ತೊರೆದಿದ್ದರು. ಆದರೆ ಮತ್ತೆ ಉದ್ಯೋಗದತ್ತ ಹೊರಳಿದಾಗ, ತನ್ನಂತೇ ಅನೇಕ ಮಹಿಳೆಯರು ಉದ್ಯೋಗ ಅರುಸುವವರಿರುತ್ತಾರೆ ಎಂದು ಅರಿತು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿದರು. ಪೇಪಲ್‌ ಮೂಲಕ ‘ಗರ್ಲ್ಸ್‌ ಇನ್‌ ಟೆಕ್‌’ ಮತ್ತು ‘ಯೂನಿಟಿ’ ಹೆಸರಿನ ಕಾರ್ಯಕ್ರಮಗಳ ಮೂಲಕ ಮಹಿಳಾ ಜಾಲವನ್ನು ಕಟ್ಟಿದರು, ನಾಯಕತ್ವದ ಕೌಶಲ್ಯಗಳು ಬೆಳೆಸಿಕೊಳ್ಳಲು ಅಗತ್ಯವಾದ ನೆರವನ್ನು ಪೂರೈಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.