ವಿಶ್ವ ಪ್ರವಾಸೋದ್ಯಮ ದಿನ | ಕೂತಲ್ಲೇ ಖರ್ಚಿಲ್ಲದೆ ಈ ವಿಶ್ವ ಪ್ರಸಿದ್ಧ ಮ್ಯೂಸಿಯಂಗಳ ಪ್ರವಾಸ ಮಾಡಿ!

ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳ ಪ್ರವಾಸ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ ತಂತ್ರಜ್ಞಾನ ವಿಭಿನ್ನ ಅವಕಾಶ, ಅನುಭವಗಳನ್ನು ಒದಗಿಸುತ್ತದೆ. ಟೂರ್‌ ಮಾಡಲು ಆಗದಿದ್ದರೂ, ವರ್ಚ್ಯುವಲ್‌ ಟೂರ್‌ ಮಾಡಬಹುದು! ಮ್ಯೂಸಿಯಂಗಳನ್ನು ನೋಡೋಣ ಬನ್ನಿ

ಇದು ಪ್ರವಾಸ ಯೋಗ್ಯ ಕಾಲವಲ್ಲ. ಜಗತ್ತೇ ಕೊರೊನಾ ಸೋಂಕಿನ ಭೀತಿಯಲ್ಲಿರುವ ಮನೆಯಾಚೆ ಹೋಗುವುದಕ್ಕೆ ಹಿಂಜರಿಯುವಂತಹ ಸಂದರ್ಭ. ಹಾಗಿದ್ದೂ ದಸರೆಗೊ, ಚಳಿಗಾಲಕ್ಕೊ ಪ್ರವಾಸ ಹೋಗುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವೆ?

ರಜೆ ಇದ್ದರೂ, ಬಿಡುವಿದ್ದರೂ, ಕಳೆದ ವರ್ಷ ಪ್ರವಾಸ ಹೋದಂತೆ ಹೋಗುವುದಕ್ಕೆ ಆಗುವುದಿಲ್ಲ. ಆದರೆ ತಂತ್ರಜ್ಞಾನ ಸುತ್ತಾಟದ ಅನುಭವವನ್ನು ವಿಶೇಷವಾಗಿಸಿದೆ. ಹೌದು ಟೂರ್‌ ಮಾಡಲಾಗದ ಈ ಕಾಲದಲ್ಲಿ ತಂತ್ರಜ್ಞಾನ ವರ್ಚ್ಯುವಲ್‌ ಟೂರ್‌ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ನಿಮಗೆ ಕಲೆ, ಇತಿಹಾಸದ ಬಗ್ಗೆ ಆಸಕ್ತಿ ಇದ್ದರೆ, ಕೂತಲ್ಲೇ ವಿಶ್ವದ ಪ್ರಸಿದ್ಧ ವಸ್ತುಸಂಗ್ರಹಾಲಯಗಳನ್ನು ನೋಡುವುದಕ್ಕೆ ಅವಕಾಶ ಇಲ್ಲಿದೆ. ಆ ವಸ್ತು ಸಂಗ್ರಹಾಲಯಗಳು ಯಾವುವು? ಏನೇನು ನೋಡಬಹುದು? ಮುಂದೆ ಓದಿ.

ಲೂವೇರ್‌ ವಸ್ತುಸಂಗ್ರಹಾಲಯ, ಪ್ಯಾರಿಸ್‌

ಪ್ಯಾರಿಸ್‌ನಲ್ಲಿರುವ ಈ ವಸ್ತುಸಂಗ್ರಹಾಲಯ 227 ವರ್ಷಗಳಷ್ಟು ಹಳೆಯದು. ವಿಶ್ವದ ಅತಿ ದೊಡ್ಡ ಕಲಾ ವಸ್ತುಸಂಗ್ರಹಾಲಯವಾದ ಲೂವೇರ್‌ನಲ್ಲಿ 38000 ಕಲಾವಸ್ತುಗಳನ್ನು ಹೊಂದಿದೆ. ಅತಿ ಹೆಚ್ಚು ಜನರು ಭೇಟಿ ನೀಡುವ ವಸ್ತುಸಂಗ್ರಹಾಲಯ ಎನಿಸಿಕೊಂಡಿರುವ ಇದೇ ಜಾಗದಲ್ಲಿ ಮೊನಲಿಸಾ ಪೇಟಿಂಗ್‌ ಇರುವುದು.

ಟೂರ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ : https://bit.ly/3408HS8

ವ್ಯಾನ್‌ಗೋ ವಸ್ತುಸಂಗ್ರಹಾಲಯ, ಆಮ್‌ಸ್ಟರ್‌ಡ್ಯಾಂ

ವ್ಯಾನ್‌ಗೋ ಜಗತ್ತಿನ ಶ್ರೇಷ್ಠ ಕಲಾವಿದರಲ್ಲಿ ಒಬ್ಬ. ಆತನ ಕಲಾಕೃತಿಗಳಿಗೆ ಮೀಸಲಿರುವ ಈ ವಸ್ತುಸಂಗ್ರಹಾಲಯವಿರುವುದು ನೆದರ್‌ಲ್ಯಾಂಡಿನ ಆಮ್‌ಸ್ಟರ್‌ಡ್ಯಾಂನಲ್ಲಿ. 1973ರ ಜೂನ್‌ 2ರಂದು ಆರಂಭವಾದ ಈ ವಸ್ತುಸಂಗ್ರಹಾಲಯ. ಇಲ್ಲಿ ವ್ಯಾನ್‌ಗೋ ರಚಿತ 200 ಕಲಾಕೃತಿಗಳು, 400 ಚಿತ್ರಗಳು, 700 ಪತ್ರಗಳು ಪ್ರದರ್ಶನಕ್ಕೆ ಇಡಲಾಗಿದೆ.

ಟೂರ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ : https://bit.ly/3kSjjZS

ವ್ಯಾಟಿಕನ್‌ ವಸ್ತುಸಂಗ್ರಹಾಲಯ, ವ್ಯಾಟಿಕನ್‌

1506ರಲ್ಲಿ 2ನೇ ಪೋಪ್‌ ಜೂಲಿಯಸ್‌ ಅವರಿಂದ ಸ್ಥಾಪನೆಗೊಂಡ ವಸ್ತುಸಂಗ್ರಹಾಲಯವಿದು. ಇಲ್ಲಿ 70,000 ಮಹತ್ವದ ವಸ್ತುಗಳು ಸಂಗ್ರಹದಲ್ಲಿವೆ. ಆದರೆ 20000 ವಸ್ತುಗಳ ಮಾತ್ರ ಪ್ರದರ್ಶನಕ್ಕೆ ಇರಿಸಲಾಗಿದೆ. 600ಕ್ಕೂ ಮಂದಿ ಈ ವಸ್ತುಸಂಗ್ರಹಾಲಯದ ನಿರ್ವಹಣೆಯ ವಿವಿಧ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಾರೆ. ವಿಶ್ವಪ್ರಸಿದ್ಧ ಶಿಲ್ಪಿ ಮೈಕೆಲ್‌ ಏಂಜೆಲೋ ಕಲಾಕೃತಿಗಳಿಂದ ಹಿಡಿದು ರೋಮ್‌ ಸಾಮ್ರಾಜ್ಯದ ಮಹತ್ವದ ವಸ್ತುಗಳು ಸಂಗ್ರಹದಲ್ಲಿವೆ.

ಟೂರ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ : https://bit.ly/2G3iUVP

ಬ್ರಿಟಿಷ್‌ ವಸ್ತುಸಂಗ್ರಹಾಲಯ, ಲಂಡನ್‌

ಲಂಡನ್‌ ನಗರದ ಬ್ಲೂಮ್ಸ್‌ಬರಿ ಪ್ರದೇಶದಲ್ಲಿ ಇರುವ ಈ ವಸ್ತುಸಂಗ್ರಹಾಲಯ 1753ರ ಜೂನ್‌ 7ರಲ್ಲಿ ಸ್ಥಾಪನೆಗೊಂಡಿತು. ಐರ್‌ಲೆಂಡಿನ ವಿಜ್ಞಾನಿ ಸರ್‌ ಹ್ಯಾನ್ಸ್‌ ಸ್ಲೋನ್‌ ಅವರ ಆಸಕ್ತಿಯಿಂದಾಗಿ ಬೆಳೆದ ಈ ವಸ್ತುಸಂಗ್ರಹಾಲಯ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಿದ್ದು 6 ವರ್ಷಗಳ ಬಳಿಕ. ಸುಮಾರು 8 ಕೋಟಿಗೂ ಹೆಚ್ಚಿನ ವೈವಿಧ್ಯಮಯ ವಸ್ತುಗಳ ಸಂಗ್ರಹ ಇಲ್ಲಿದೆ. ಭಾರತದ ಅಶೋಕ ಸ್ತಂಭದ ತುಂಡು, ಹೂದಾನಿ, ತಕ್ಷಶಿಲೆಯ ತಾಮ್ರ ಪತ್ರ, ಜೈನ ತೀರ್ಥಂಕರರ ಶಿಲ್ಪಗಳು ಸೇರಿದಂತೆ ಭಾರತದ ಹಲವು ಮಹತ್ವದ ಸ್ಮಾರಕಗಳು ಈ ವಸ್ತುಸಂಗ್ರಹಾಲಯದಲ್ಲಿವೆ. ವರ್ಚ್ಯುವಲ್‌ ಟೂರ್‌ನಲ್ಲಿ ಧ್ವನಿ ವಿವರಣೆಯೂ ಲಭ್ಯವಿದೆ.

ಟೂರ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ : https://bit.ly/3jaYrMY

ಮೆಟ್ರೋಪಾಲಿಟನ್‌ ಕಲಾವಸ್ತುಸಂಗ್ರಹಾಲಯ, ನ್ಯೂಯಾರ್ಕ್‌

ನ್ಯೂಯಾರ್ಕ್‌ ನಗರದಲ್ಲಿರುವ ಮೆಟ್ರೋಪಾಲಿಟನ್‌ ವಸ್ತುಸಂಗ್ರಹಾಲಯಕ್ಕೆ 150 ವರ್ಷಗಳ ಇತಿಹಾಸವಿದೆ. 1870ರ ಏಪ್ರಿಲ್‌ 13ರಂದು ಆರಂಭವಾದ ಈ ವಸ್ತುಸಂಗ್ರಹಾಲಯದಲ್ಲಿ ಹದಿನೇಳು ವಿಭಾಗಗಳಿವೆ. ಸುಮಾರು 20 ಲಕ್ಷ ವಸ್ತುಗಳ ಸಂಗ್ರಹವಿದೆ. ಈಜಿಪ್ಟ್‌ನ ಕಲಾಕೃತಿಗಳು, ಶಿಲ್ಪಗಳು, ಯುರೋಪಿನ ಕಲಾವಿದರ ಶ್ರೇಷ್ಠ ಕಲಾಕೃತಿಗಳು ಸೇರಿದಂತೆ ಅಪೂರ್ವ ವಸ್ತುಗಳ ಸಂಗ್ರಹವಿದೆ. ಪುರಾತನ ನಟರಾಜ ಶಿಲ್ಪ, ಹಿಂದು ಧರ್ಮಕ್ಕೆ ಸೇರಿದ ಪುರಾತನ ವಸ್ತುಗಳು ಮತ್ತು ಮೊಘಲದ ಅಮೂಲ್ಯ ಸಂಗ್ರಹವನ್ನು ಇಲ್ಲಿ ನೋಡಬಹುದು.

ಟೂರ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ : https://bit.ly/2S30dnv

ಇದನ್ನೂ ಓದಿ : 220 ಮೊಬೈಲ್‌ ಆಪ್‌ಗಳ ಮಾಹಿಗೆ ಕನ್ನ ಹಾಕಿರುವ ಏಲಿಯನ್‌ ಎಂಬ ಮಾಲ್‌ವೇರ್

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.