ಜಗತ್ತಿನ ಮೊದಲ 108 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಇರುವ ಫೋನ್‌, ಮಿ ನೋಟ್‌ 10, ಡಿಸೆಂಬರ್‌ನಲ್ಲಿ ಲಾಂಚ್‌

ಶಿಯೋಮಿ ಹೊಸತನಗಳಿಲ್ಲದೆ ತಮ್ಮ ಫೋನ್‌ಗಳನ್ನು ಮಾರುಕಟ್ಟೆ ಪರಿಚಯಿಸುವುದಿಲ್ಲ. ಒಂದಲ್ಲ ಒಂದು ವಿಶೇಷ ಫೀಚರ್‌ನೊಂದಿಗೆ ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿರುವ ಈ ಬ್ರ್ಯಾಂಡ್‌ ಈಗ ಹೊಸದೊಂದು ಅಚ್ಚರಿಯನ್ನು ಮಾರುಕಟ್ಟೆಗೆ ತರುತ್ತಿದೆ. ಅದರ ಹೆಸರು ಎಂಐ ನೋಟ್‌ 10!

ಶಿಯೋಮಿ ಎಂಐ ನೋಟ್‌ 10, ಸ್ಮಾರ್ಟ್‌ಫೋನ್‌ಗಳ ಪೈಕಿ ಹೊಸದೊಂದು ಅಚ್ಚರಿ. ಅತ್ಯಾಧುನಿಕ ತಂತ್ರಜ್ಞಾನ, ಗ್ರಾಹಕರನ್ನು ಸೆಳೆಯುವ ಫೀಚರ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತಿರುವ ಶಿಯೋಮಿ ಈಗ ನೋಟ್‌ 10 ಮಾಡೆಲ್‌ ಅನ್ನು ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ. ಇದು ಜಗತ್ತಿನ ಮೊತ್ತ ಮೊದಲ 108 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್‌!

ಕಳೆದ ವಾರ ಚೀನಾದಲ್ಲಿ ಬಿಡುಗಡೆಯಾಗಿರುವ ವಿಶಿಷ್ಟವಾದ ಫೀಚರ್‌ಗಳನ್ನು ಒಳಗೊಂಡಿದೆ. ಮುಖ್ಯ ಆಕರ್ಷಣೆ ಕ್ಯಾಮೆರಾಗಳು. ಈ ಸ್ಮಾರ್ಟ್‌ಫೋನಿನಲ್ಲಿ ಒಟ್ಟು ಐದು ಕ್ಯಾಮೆರಾಗಳಿವೆ. 108 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಒಂದಾದರೆ, 20 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಇನ್ನೊಂದು. 12 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಇದ್ದು ಇದು ಟೆಲಿ ಫೋಟೋ ತೆಗೆಯುವುದಕ್ಕೆ ಅನುಕೂಲವಾದ ಕ್ಯಾಮೆರಾ. ಇದರ ಜೊತೆಗೆ 5 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಇದ್ದು ಮ್ಯಾಕ್ರೊ ಫೋಟೋಗ್ರಫಿಗೆ ಅನುಕೂಲಕರವಾಗಿದೆ. ಇವುಗಳ ಜೊತೆಗೆ 32 ಮೆಗಾ ಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಕೂಡ ಇದೆ.

6 ಜಿಬಿ ರ್ಯಾಮ್‌, 128 ಜಿಬಿ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಆದರೆ ವಿಸ್ತರಣೆಗೆ ಅವಕಾಶವಿಲ್ಲ. ಜೊತೆಗೆ ಎರಡು ನ್ಯಾನೊ ಸಿಮ್‌ಗಳಿಗೆ ಜಾಗ ಹೊಂದಿದೆ. 5260 ಎಂಎಎಚ್‌ ಬ್ಯಾಟರಿ ಇದರಲ್ಲಿದೆ. 2.2 ಗಿಗಾ ಹರ್ಟ್ಸ್‌ ಆಕ್ಟಾ ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರ್ಯಾಗನ್‌ ಪ್ರೊಸೆಸರ್‌, ವೇಗವಾಗಿ ಕಾರ್ಯನಿರ್ವಹಿಸಲು ಸಮರ್ಥವಾಗಿದೆ.

6.47 ಇಂಚಿನ ಸ್ಕ್ರೀನ್‌, ಅಮೋಲ್ಡ್‌ ಡಿಸ್‌ಪ್ಲೇ, ಆಂಡ್ರಾಯ್ಡ್‌ 9 ಆಧರಿಸಿದ ಎಂಐಯುಐ 11 ಆಪರೇಟಿಂಗ್‌ ಸಿಸ್ಟಮ್ ಇದೆ. ವಿಶೇಷವೆಂದರೆ ಇಯರ್‌ ಫೋನ್‌ಗೆ ಪ್ರತ್ಯೇಕ್‌ ಜಾಕ್‌ ನೀಡಿದ್ದು, ಈಗ ಚಾರ್ಜ್‌ ಮಾಡುತ್ತಲೂ ಸಂಗೀತ ಕೇಳಬಹುದು. ಭಾರತದಲ್ಲಿ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದೆ, ಬೆಲೆ ಸುಮಾರು 43,000 ರೂ.ಗಳು ಎಂದು ಅಂದಾಜಿಸಲಾಗಿದೆ.