ಐಐಟಿ ಮದ್ರಾಸ್‌ನಿಂದ ವಿಶ್ವದ ಮೊದಲ ಐರನ್‌ ಐಯಾನ್‌ ರೀಚಾರ್ಜಬಲ್‌ ಬ್ಯಾಟರಿ

ಪ್ರಸ್ತುತ ನಾವು ಬಳಸುತ್ತಿರುವ ಬ್ಯಾಟರಿಗಳು ಲೀಥಿಯಮ್‌ ಐಯಾನ್‌ ತಂತ್ರವಿರುವಂತಹವು. ಆದರೆ ಇದಕ್ಕಿದ್ದಂತೆ ಅಗ್ಗದ ಬೆಲೆಯ ಬ್ಯಾಟರಿಯನ್ನು ಐಐಟಿ ಮದ್ರಾಸ್‌ನ ಭೌತಶಾಸ್ತ್ರ ವಿಭಾಗದ ತಂಡವೊಂದು ಅಭಿವೃದ್ಧಿ ಪಡಿಸಿದೆ

ನಾವೀಗ ಬಳಸುತ್ತಿರುವ ಯಾವುದೇ ಎಲೆಕ್ಟ್ರಾನಿಕ್‌ ಸಾಧನಗಳಿಗೆ ವಿದ್ಯುತ್‌ ಪೂರೈಸುವುದು ಅದರೊಳಗಿರುವ ಲೀಥಿಯಂ ಐಯಾನ್‌ ಬ್ಯಾಟರಿಗಳು. ರೀಚಾರ್ಜ್‌ ಮಾಡಬಹುದಾದ ಈ ಬ್ಯಾಟರಿಗಳು ಸಮರ್ಥವಾಗಿ ವಿದ್ಯುತ್‌ ಸಂಗ್ರಹಿಸಿ ಪೂರೈಸುವ ಕೆಲಸ ಮಾಡಬಲ್ಲದಾದರೂ ಕೆಲವು ಅಪಾಯಕಾರಿ ಅಂಶಗಳು ಇವೆ ಎನ್ನುತ್ತಾರೆ ತಜ್ಞರು. ಇದಕ್ಕೆ ಪರ್ಯಾಯಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆದಿವೆ. ಅವುಗಳಲ್ಲಿ ಒಂದು ಇತ್ತೀಚೆಗೆ ಐಐಟಿ ಮದ್ರಾಸ್‌ನಲ್ಲೂ ನಡೆದಿದ್ದು ಐರನ್‌ ಐಯಾನ್‌ ಬ್ಯಾಟರಿ ರೂಪಿಸುವಲ್ಲಿ ಯಶಸ್ವಿಯಾಗಿದೆ.

ಕಡಿಮೆ ಇಂಗಾಲವಿರುವ ಉಕ್ಕನ್ನು ಆನೋಡ್‌ ಆಗಿ, ವ್ಯಾನಾಡಿಯಂ ಪೆಂಟಾಕ್ಸೈಡ್‌ ಅನ್ನು ಕ್ಯಾಥೋಡ್‌ ಆಗಿ ಮತ್ತು ಐರನ್‌ ಕ್ಲೋರೇಟ್‌ ಅನ್ನು ಎಲೆಕ್ಟ್ರೊಲೇಟ್‌ ಆಗಿ ಬಳಸಿ ಬ್ಯಾಟರಿ ಅಭಿವೃದ್ಧಿಪಡಿಸಲಾಗಿದೆ.

ಭೌತಶಾಸ್ತ್ರ ವಿಭಾಗದ ಎಸ್‌ ರಾಮಪ್ರಭು, ಅಜಯ್‌ ಪಿರಿಯಿ, ಸಾಯಿ ಸ್ಮೃತಿ ಸಮಂತರೆ ಅವರ ತಂಡವು ಈ ಬ್ಯಾಟರಿ ಅಭಿವೃದ್ಧಿಪಡಿಸಿದ್ದು, ಕಬ್ಬಿಣವು ಲೀಥಿಯಂ ಅಗ್ಗದ ಲೋಹವಾದ್ದರಿಂದ ಲೀಥಿಯಂ ಬ್ಯಾಟರಿಗಿಂತ ಅಗ್ಗವಾಗುತ್ತದೆ ಎಂಬುದಷ್ಟೇ ಅಲ್ಲದೆ, ಹೆಚ್ಚು ಸುರಕ್ಷಿತ ಮತ್ತು ಸುಸ್ಥಿರವಾಗಿ ಐರನ್‌ ಐಯಾನ್‌ ಬ್ಯಾಟರಿ ಕೆಲಸ ಮಾಡುತ್ತದೆ ಎಂದಿದ್ದಾರೆ.

ಆದರೆ ಈ ಐರನ್‌ ಐಯಾನ್‌ ಬ್ಯಾಟರಿಗಳಲ್ಲಿ ಒಂದೆರಡು ತೊಡಕುಗಳಿವೆ. ಈ ಬ್ಯಾಟರಿ ಚಾರ್ಜ್‌ ಮತ್ತು ಡಿಸಾರ್ಜ್‌ ಪ್ರಮಾಣ 150 ಬಾರಿ ಅಷ್ಟೇ. ಜೊತೆಗೆ ಬ್ಯಾಟರಿಗಳಲ್ಲಿ ಸಂಗ್ರಹವಾಗಬಹುದಾದ ಶಕ್ತಿಯು ಪ್ರತಿ ಕಿಲೋಗೆ 220 ವ್ಯಾಟ್‌ ಹವರ್‌. ಆದರೆ ಲೀಥಿಯಂ ಬ್ಯಾಟರಿಗಳಲ್ಲಿ ಈ ಪ್ರಮಾಣ 350ರಷ್ಟಿದೆ.

ಕಬ್ಬಿಣವನ್ನು ಬ್ಯಾಟರಿಗಳಲ್ಲಿ ಬಳಸುವ ಸಾಧ್ಯತೆಯನ್ನು ಉಪೇಕ್ಷೆ ಮಾಡುತ್ತಾ ಬರಲಾಗಿರುವುದರಿಂದ ಯಾವುದೇ ಪ್ರಯತ್ನಗಳಾಗಿರಲಿಲ್ಲ. ಈಗ ಲೀಥಿಯಂ ಬ್ಯಾಟರಿಗಿಂತ ಹೆಚ್ಚು ಸಮರ್ಥವಾಗಿಸುವ ಪ್ರಯತ್ನ ಮಾಡಬಹುದು ಎಂಬ ನಿರೀಕ್ಷೆ ರಾಮಪ್ರಭು ತಂಡದ್ದು.