ಎಂಐ ಎಲೆಕ್ಟ್ರಿಕ್ ಏರ್ ಕಂಪ್ರೇಸರ್: ಈ ಮಾದರಿಯ ನಂಬಿಕೆಗಳಿಸಿಕೊಳ್ಳದ ಭಾರತದ ಕಂಪನಿಗಳು..!

ಚೀನಾ ಕಂಪನಿಗಳು ನಮ್ಮ ಜೀವನದ ಪ್ರತಿಯೊಂದು ಭಾಗದಲ್ಲಿಯೂ ತಮ್ಮ ಇರುವಿಕೆಯನ್ನು ಧೃಡ ಪಡಿಸುತ್ತಿವೆ.  ಚೀನಾ ವಸ್ತುಗಳನ್ನು ಬಳಸದೆ ಜೀವನ ಸಾಗುವುದೇ ಇಲ್ಲವೇನೋ ಎನ್ನುವ ಮಟ್ಟಕ್ಕೆ ಅವು ನಮ್ಮನ್ನು ಆವರಿಸಿಕೊಂಡು ಬಿಟ್ಟಿವೆ ಎಂದರೇ ತಪ್ಪಾಗುವುದಿಲ್ಲ.

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ದೊಡ್ಡ ಅಭಿಮಾನಿ ಬಳಗವನ್ನು ಕಟ್ಟಿಕೊಂಡು, ದೊಡ್ಡ ದೊಡ್ಡ ಸ್ಮಾರ್ಟ್‌ಫೋನ್‌ ಕಂಪನಿಗಳಿಗೆ ನಡುಕ ಹುಟ್ಟಿಸಿದ ಶಿಯೋಮಿ, ಒಂದೊಂದೇ ಗ್ರಾಹಕ ಸ್ನೇಹಿ ಸ್ಮಾರ್ಟ್‌ ವಸ್ತುಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಶುರು ಮಾಡಿದೆ.

ಜನರ ಭರವಸೆಯನ್ನು ಗಿಟ್ಟಿಸಿಕೊಂಡಿರುವ ಚೀನಾ ಮೂಲದ ಶಿಯೋಮಿ , ಅತೀ ಕಡಿಮೆ ಬೆಲೆಗೆ ಗುಣಮಟ್ಟದ ಮೊಬೈಲ್‌ ಫೋನ್‌ಗಳನ್ನು ಮೊದಲಿಗೆ ಮಾರುಕಟ್ಟೆಗೆ ಪರಿಚಯಿಸಿತು. ಇದಾದ ನಂತರದಲ್ಲಿ ಕೇವಲ ಸ್ಮಾರ್ಟ್‌ಫೋನ್ ಮಾತ್ರವಲ್ಲದೇ ಸ್ಮಾರ್ಟ್‌ ಟಿವಿ, ಸ್ಮಾರ್ಟ್‌ ವಾಚ್, ಬಟ್ಟೆ, ಬ್ಯಾಗ್, ಶೂ, ಟ್ರಿಮ್ಮರ್, ಕನ್ನಡಕ, ವಾಟರ್‌ ಪ್ಯೂರಿ ಫೈಯರ್, ಎರ್‌ ಫ್ಯೂರಿ ಫೈಯರ್ ಹೀಗೆ ಹಲವು ವಸ್ತುಗಳನ್ನು ಲಾಂಚ್ ಮಾಡಿತು ಮತ್ತು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಯಿತು.

ಇದನ್ನು ಓದಿ: ಆತ್ಮನಿರ್ಭರತೆಗೆ ಪ್ರಾಣ ಸಂಕಟ: ಭಾರತದ ಈ ಫೋನ್ ಖರೀದಿಸಿದರೇ ನಷ್ಟ- ಬಿಟ್ಟರೂ ಕಷ್ಟ..!

ಸದ್ಯ ಮಾರುಕಟ್ಟೆಯಲ್ಲಿ ಶಿಯೋಮಿ ಲಾಂಚ್ ಮಾಡಿದ ವಸ್ತುಗಳು ಯಾವುದೇ ಆದರೂ ಕಣ್ಣುಮುಚ್ಚಿ ಕೊಳ್ಳಬಹುದು, ಗುಣಮಟ್ಟವು ಉತ್ತಮವಾಗಿರುತ್ತದೆ, ಬೆಲೆಯೂ ಕಡಿಮೆ ಎನ್ನುವ ನಂಬಿಕೆ ಹಲವು ಭಾರತೀಯರಲ್ಲಿ ಮೂಡಿದೆ. ಆದರೆ ಈ ಪ್ರಮಾಣದ ನಂಬಿಕೆಯನ್ನು ಭಾರತದ ಯಾವುದೇ ಕಂಪನಿ ಗಳಿಸಿಕೊಳ್ಳದೆ ಇರುವುದು ವಿಷಾದವೇ ಸರಿ.

ಸದ್ಯ ಈ ವಿಷಯ ಯಾಕೆ ಬಂತು ಎಂದರೇ, ಶಿಯೋಮಿ ಇದೇ ಜುಲೈ 14ರಂದು ಮಾರುಕಟ್ಟೆಗೆ ಎಂಐ ಎಲೆಕ್ಟ್ರಿಕ್ ಏರ್ ಕಂಪ್ರೇಸರ್ ಅನ್ನು ಲಾಂಚ್ ಮಾಡುತ್ತಿದೆ. ನಿಮ್ಮ ಸೈಕಲಿಗೆ, ಕಾರಿಗೆ ಮತ್ತು ಬೈಕಿಗೆ ನೀವೆ ಈ ಸಾಧನದ ಮೂಲಕ ಗಾಳಿಯನ್ನು ತುಂಬಿಕೊಳ್ಳಬಹುದಾಗಿದೆ. ಇದೊಂದು ಪ್ರೋರ್ಟಬಲ್ ಮಾದರಿ ಸ್ಮಾರ್ಟ್‌ ವಸ್ತುವಾಗಿದ್ದು, ಈಗಾಗಲೇ ಯು ಕೆ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರವನ್ನು ಮಾಡುತ್ತಿದೆ.

ಈಗಾಗಲೇ ಎಂಐ ಎಲೆಕ್ಟ್ರಿಕ್ ಏರ್ ಕಂಪ್ರೇಸರ್ ಟೀಜರ್ ಬಿಡುಗಡೆ ಮಾಡಿದ್ದು, ಉತ್ತಮ ವಿನ್ಯಾಸವನ್ನು ಹೊಂದಿದೆ. ಯುಕೆ ಮಾರುಕಟ್ಟೆಯಲ್ಲಿ ರೂ.3800ಕ್ಕೆ ಮಾರಾಟವಾಗತ್ತಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಎಷ್ಟಕ್ಕೆ ಮಾರಾಟ ಮಾಡಲಿದೆ ಎಂಬುದು ಇನ್ನು ತಿಳಿದುಬಂದಿಲ್ಲ.

ಎಂಐ ಎಲೆಕ್ಟ್ರಿಕ್ ಏರ್ ಕಂಪ್ರೇಸರ್ ನಲ್ಲಿ ಇಂಟಲಿಜೆಂಟ್ ಇಂಜಿನ್ ಅನ್ನು ಅಳವಡಿಸಲಾಗಿದ್ದು, ಕಾರ್ಯನಿರ್ವಹಿಸುವಾಗ ಕಡಿಮೆ ಸದ್ದು ಮಾಡುತ್ತದೆ. ತುಂಬ ಸಣ್ಣ ಪ್ರಮಾಣದ ವಿನ್ಯಾಸವನ್ನು ಹೊಂದಿದ್ದು, ರಾತ್ರಿ ವೇಳೆಯಲ್ಲಿಯೂ ಸರಿಯಾಗಿ ಕಾರ್ಯನಿರ್ವಹಿಸಲಿ ಎನ್ನುವ ಕಾರಣಕ್ಕೆ LED ಲೈಟ್ ಅನ್ನು ಹೊಂದಿದೆ.

ಇದರಲ್ಲಿ 2,000mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಚಾರ್ಜ್‌ ಮಾಡಲು ಮೈಕ್ರೋ ಯುಎಸ್‌ಬಿ ಪೋರ್ಟ್ ಅನ್ನು ನೀಡಲಾಗಿದೆ. ಈ ಏರ್ ಕಂಪ್ರೇಸರ್ ಮೂಲಕ ಫುಟ್‌ಬಾಲ್, ವಾಲಿಬಾಲ್ ಮುಂತಾದವುಗಳಿಗೆ ಗಾಳಿ ತುಂಬಬಹುದಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.