ಸ್ಟೇಟಸ್‌ನಲ್ಲಿ ನೀವು ಸಿಂಗಲ್ಲೇ, ಆದರೆ ಫೇಸ್‌ಬುಕ್‌ಗೆ ನಿಮ್ ಗರ್ಲ್‌ಫ್ರೆಂಡ್‌ ಗೊತ್ತು!

ಕೇಂಬ್ರಿಡ್ಜ್‌ ಅನಾಲಿಟಿಕಾ ಪ್ರಕರಣ ಹೊರಬಿದ್ದು ಫೇಸ್‌ಬುಕ್‌ನ ನಿಜವಾದ ಆಸಕ್ತಿ, ಅದು ಸಂಗ್ರಹಿಸುತ್ತಿರುವ ಮಾಹಿತಿ, ಬಳಕೆದಾರರ ಖಾಸಗಿತನ ಕುರಿತು ಹಲವು ಸಂಗತಿಗಳನ್ನು ಬಯಲು ಮಾಡಿದೆ. ಫೇಸ್‌ಬುಕ್‌ ಬಳಕೆದಾರರಿಗೆ ಗೊತ್ತಿಲ್ಲದೆ ಏನೆಲ್ಲಾ ಮಾಹಿತಿ ಕಲೆ ಹಾಕಿದೆ ಎಂಬುದು ತಿಳಿದು ಬರುತ್ತಿದೆ

  • ಟೆಕ್‌ ಕನ್ನಡ ಟೀಮ್‌

ಕೇಂಬ್ರಿಡ್ಜ್‌ ಅನಾಲಿಟಿಕಾ ೫೦ ಮಿಲಿಯನ್‌ ಬಳಕೆದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಸಿದ ಸುದ್ದಿ ಈಗ ಎಲ್ಲರಿಗೂ ಗೊತ್ತು. ಅಷ್ಟು ಮಾಹಿತಿಯನ್ನು ಸುಲಭವಾಗಿ ಫೇಸ್‌ಬುಕ್‌ ಸಂಗ್ರಹಿಸಲು ಸಾಧ್ಯವಾಗಿದ್ದು, ಈ ಸಾಮಾಜಿಕ ಜಾಲಾತಾಣದಲ್ಲಿ ಬಳಕೆದಾರರ ಮಾಹಿತಿ ಗೌಪ್ಯತೆ ಮತ್ತು ಖಾಸಗಿತನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು.
ಖಾಸಗಿತನಕ್ಕೆ ಆಘಾತ ಉಂಟು ಮಾಡಿದ ಹಿನ್ನೆಲೆಯಲ್ಲಿ ಅನೇಕರು ಫೇಸ್‌ಬುಕ್‌ಗೆ ಬೆನ್ನು ಮಾಡಲಾರಂಭಿಸಿದ್ದಾರೆ. ಅದಕ್ಕೂ ಮೊದಲು ಫೇಸ್‌ಬುಕ್‌ನಲ್ಲಿ ಇದುವರೆಗೂ ಪ್ರಕಟಿಸಿದ ಎಲ್ಲ ರೀತಿಯ ಮಾಹಿತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಬೆಳವಣಿಗೆಯೂ ಮತ್ತೊಂದು ಆಘಾತವನ್ನು ನೀಡಿದೆ.
ಪ್ರಸಿದ್ಧ ಬ್ರಿಟಿಷ್‌ ಲೇಖಕಿ ಎಮ್ಮಾ ಕೆನಡಿ ತಮ್ಮ ಅನುಭವವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಫೇಸ್‌ಬುಕ್‌ ಕೋರಿಕೆ ಸಲ್ಲಿಸಿ ಪಡೆದ ಡಾಟಾವನ್ನು ನೋಡಿದೆ. ನನ್ನ ಮೊಬೈಲ್‌ ಕಾಂಟ್ಯಾಕ್ಟ್‌ನಲ್ಲಿರುವ ಪ್ರತಿಯೊಬ್ಬರ ನಂಬರ್‌ ಅವರಲ್ಲಿದೆ. ನನ್ನ ಹೋದ ಎಲ್ಲ ರೀತಿಯ ಕಾರ್ಯಕ್ರಮಗಳ ವಿವರವಿದೆ ಹಾಗೇ. ನಾನು ಕಳಿಸಿದ ಮೆಸೇಜ್‌ಗಳೂ ಇವೆ. ನನ್ನ ಫೋನ್‌ನಲ್ಲಿರುವ ಮಾಹಿತಿಯನ್ನು ಅವರು (ಫೇಸ್‌ಬುಕ್‌) ಲೂಟಿ ಮಾಡಿದ್ದಾರೆ. ಅವರ ಬಳಿ ಫೇಸ್‌ಬುಕ್‌ನಲ್ಲಿ ಇಲ್ಲದವರ ಫೋನ್‌ ನಂಬರ್‌ಗಳೂ ಇವೆ” ಎಂದು ಬರೆದುಕೊಂಡಿದ್ದಾರೆ. ಪೂರ್ಣ ಟ್ವೀಟ್‌ ಇಲ್ಲಿದೆ:

They have plundered my phone. They have phone numbers of people who aren’t on Facebook. They have phone numbers of household names who, i’m sure, would be furious to know their phone numbers are accessible. I’m appalled.— Emma Kennedy (@EmmaKennedy) March 25, 2018

ಇದೇ ರೀತಿಯಲ್ಲಿ ಅನೇಕರು ಟ್ವಿಟರ್‌ನಲ್ಲಿ ಫೇಸ್‌ಬುಕ್‌ ಡೌನ್‌ಲೋಡ್‌ ಮಾಡಿದ ತಿಳಿದು ಬಂದ ವಿಷಯ, ಆದ ಅನುಭವವನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ. ಒಬ್ಬರು ತಮ್ಮ ಕಾಂಟ್ಯಾಕ್ಟ್‌ನಲ್ಲಿರುವ ಮುಖ್ಯ ನಂಬರ್‌ಗಳನ್ನು ಏರ್‌ಬಿಎನ್‌ಬಿ, ಸ್ಪಾಟಿಫೈ, ಹ್ಯಾಪನ್‌, ಲೈವ್‌ ನೇಷನ್ಸ್‌ ಕಾನ್ಸರ್ಟ್ಸ್, ಹಿಕ್ಕಿಸ್‌, ಡೆಲಿವೆರೂ ಮುಂತಾದ ಸಂಸ್ಥೆಗಳೊಂದಿಗೆ ಹಂಚಿಕೊಂಡಿರುವುದು ತಿಳಿದು ಬಂದಿದೆ. ಇನ್ನು ಕೆಲವರಿಗೆ ಬಳಕೆಯಲ್ಲಿರದ ತಮ್ಮದೇ ಫೋನ್‌ ನಂಬರಿನ ವಿವರಗಳು ದಾಖಲಾಗಿರುವ ಮಾಹಿತಿ ದೊರೆತಿದೆ.

ಇದನ್ನೂ ಓದಿ | ಭಾರತದ ಗ್ರಾಹಕನ ಹೃದಯ ಗೆಲ್ಲಲ್ಲು ನಡೆದಿದೆ ಗೂಗಲ್‌-ಅಮೆಜಾನ್‌ ಯುದ್ಧ

ನ್ಯೂಜಿಲೆಂಡಿನ ಡೆವೆಲಪರ್‌ ಒಬ್ಬರು ಟ್ವಿಟರ್‌ನಲ್ಲಿ ಕಾಲ್‌ಲಾಗ್‌ನ್ನೇ ಹಂಚಿಕೊಂಡಿದ್ದಾರೆ. ಯಾರಿಗೆ ಯಾವಾಗ ಹೊರ ಹೋಗುವ ಕರೆ, ಒಳ ಬರುವ ಕರೆ, ಮಿಸ್‌ ಆದ ಕರೆ ಇತ್ಯಾದಿ ವಿವರಗಳನ್ನು ಫೇಸ್‌ಬುಕ್‌ ಸಂಗ್ರಹಿಸಿಟ್ಟಿರುವ ಬಗೆಯನ್ನು ತಿಳಿಸಿದ್ದಾರೆ. ಇವರ ಖಾತೆಯಿಂದ ಫೇಸ್‌ಬುಕ್‌ ಒಟ್ಟು ೭೦೦ ಕರೆಗಳು, ಅವುಗಳ ಒಟ್ಟು ಸಂಭಾಷಣೆಯ ಅವಧಿ, ೧೩೬೯ ಸಂದೇಶಗಳು, ಡ್ರಾಫ್ಟ್‌ನಲ್ಲಿರುವ ಸಂದೇಶಗಳನ್ನೂ ಸಂಗ್ರಹಿಸಿಟ್ಟಿದೆ ಎಂದು ತಿಳಿಸಿದ್ದಾರೆ.
ನೀವಿನ್ನೂ ನಿಮ್ಮ ಫೇಸ್‌ಬುಕ್‌ ಖಾತೆಯ ಒಟ್ಟು ಮಾಹಿತಿಯನ್ನು ಡೌನ್‌ಲೋಡ್‌ ಮಾಡಿಲ್ಲವಾದರೆ ಈ ಲಿಂಕ್‌ ನೋಡಿ. ಹೇಗೆ ಡೌನ್‌ಲೋಡ್‌ ಮಾಡಿಕೊಳ್ಳಬೇಕೆಂದು ತಿಳಿಯುತ್ತದೆ.
https://www.facebook.com/help/contact/180237885820953

ಬಳಕೆದಾರರು ಯಾವುದೇ ವಿಷಯವನ್ನು ಮರೆತಿದ್ದರೂ ಫೇಸ್‌ಬುಕ್‌ ಮರೆತಿಲ್ಲ, ಬಳಕೆದಾರರು, ಈ ವಿಷಯ ಯಾರಿಗೂ ತಿಳಿದಿಲ್ಲ ಎಂದು ಭಾವಿಸಿರಬಹುದು, ಆದರೆ ಫೇಸ್‌ಬುಕ್‌ ಪ್ರತಿಯೊಂದು ವಿಷಯವನ್ನು ಬಲ್ಲದು ಎಂದು ಈಗ ವೇದ್ಯವಾಗುತ್ತಿದೆ ಎಂಬ ಚರ್ಚೆ ಟ್ವಿಟರ್‌ನಲ್ಲಿ ನಡೆಯುತ್ತಿದೆ.

ಹಾಗಾದರೆ ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ?

  • ಫೇಸ್‌ಬುಕ್‌ ಆಪ್‌ ಸೆಟ್ಟಿಂಗ್ಸ್‌ ಬದಲಿಸಿ: ಫೇಸ್‌ಬುಕ್‌ ಖಾತೆ ಮೂಲಕ ಇತರೆ ಆಪ್‌ಗಳೊಂದಿಗೆ ಖಾತೆ ಆರಂಭಿಸಿರುತ್ತೀರಿ. ಈ ಆಪ್‌ಗಳು ನಿಮ್ಮ ಮಾಹಿತಿಯನ್ನುಸುಲಭವಾಗಿ ಫೇಸ್‌ಬುಕ್‌ ಮೂಲಕ ಸಂಗ್ರಹಿಸುವುದಕ್ಕೆ ಅವಕಾಶವಿರುತ್ತದೆ. ಹಾಗಾಗಿ ನಿಮಗೆ ಅಗತ್ಯವಿಲ್ಲದ ಆಪ್‌ಗಳನ್ನು ತೆಗೆದು ಬಿಡಿ. ಬದಲಿಗೆ ಆಪ್‌ಗಳನ್ನು ಸಂಪೂರ್ಣ ನಿಷ್ಕ್ರಿಯಗೊಳಿಸುವುದು ಒಳಿತು.
  • ಮೊಬೈಲ್‌ ಆಪ್‌ ಪರ್ಮಿಷನ್‌ ವಿವರಗಳನ್ನೊಮ್ಮೆ ಪರಿಶೀಲಿಸಿ. ಮೈಕ್ರೋಫೋನ್‌ ಧ್ವನಿ ಮುದ್ರಿಸಿಕೊಳ್ಳುವುದು, ಫೋನ್‌ ಸ್ಟೇಟಸ್‌, ಜಿಪಿಸಿ ಲೋಕೇಶನ್‌ ಇವುಗಳನ್ನು ನಿಷ್ಕ್ರಿಯಗೊಳಿಸಿ.
  • ಮರೆಯದೇ ನಿಮ್ಮ ವೆಬ್‌ಬ್ರೌಸರ್‌ ಕುಕಿಸ್‌ ಅನ್ನು ಸದಾ ಸ್ವಚ್ಛ ಮಾಡುವುದನ್ನು ನೆನಪಿಟ್ಟುಕೊಳ್ಳಿ. ಇದು ಫೇಸ್‌ಬುಕ್‌ನಿಂದ ಸುಲಭವಾಗಿ ಜಾಹೀರಾತುದಾರರಿಗೆ ಲಭ್ಯವಾಗುವ ಮಾಹಿತಿ ತಗ್ಗಿಸುತ್ತದೆ.
  • ಸಾಮಾನ್ಯವಾಗಿ ಲಭ್ಯವಿರುವ ಪ್ರೈವೇಸಿ ಸೆಟ್ಟಿಂಗ್ಸ್‌ ಅನ್ನು ಒಮ್ಮೆ ನೋಡಿ, ನಿಮ್ಮ ಖಾತೆಯನ್ನು ಯಾರು ನೋಡಬಹುದು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಿ.