ದಿಢೀರನೆ ಪ್ರಕಟವಾಗಿರುವ ‘ಪ್ಲಾನ್‌ಡೆಮಿಕ್’ ಹೆಸರಿನ ಸಾಕ್ಷ್ಯಚಿತ್ರದ ತುಣುಕು ಜಗತ್ತಿನ ಗಮನಸೆಳೆದಿದೆ. ಕರೋನಾ ವೈರಸ್ ಒಂದು ಪಿತೂರಿ ಎಂದು ಹೇಳುತ್ತಿರುವ ಈ ವಿಡಿಯೋವನ್ನು ಸಾಮಾಜಿಕ ತಾಣಗಳು ಡಿಲೀಟ್ ಮಾಡುತ್ತಿವೆ

ಗುರುವಾರ ಯೂಟ್ಯೂಬ್‌ನಲ್ಲಿ ಪ್ರಕಟವಾದ ಸಾಕ್ಷ್ಯಚಿತ್ರವೊಂದರ ಆಯ್ದ ಭಾಗದ ವಿಡಿಯೋ ‘ಪ್ಲಾನ್‌ಡೆಮಿಕ್” ಈಗ ಇಲ್ಲ. ಕೆಲವೇ ಗಂಟೆಗಳಲ್ಲಿ ಅತ್ಯಂತ ವೇಗವಾಗಿ ಹರಡಿದ, ಲಕ್ಷಾಂತರ ಜನರಿಂದ ವೀಕ್ಷಿಸಲ್ಪಟ್ಟ ವಿಡಿಯೋವನ್ನು ಯೂಟ್ಯೂಬ್, ಫೇಸ್‌ಬುಕ್ ಅಲ್ಲದೆ, ವಿಮಿಯೋದಂತಹ ಇತರೆ ವಿಡಿಯೋ ಪ್ಲಾಟ್‌ಫಾರ್ಮ್‌ಗಳು ಈ ವಿಡಿಯೋವನ್ನು ತೆಗೆದು ಹಾಕಿವೆ.
ಯೂಟ್ಯೂಬ್‌ನಲ್ಲಿ ಪ್ರಕಟವಾದ ಈ ವಿಡಿಯೋವನ್ನು ನೋಡಿದ ಅನೇಕರು ಮೆಚ್ಚಿ, ಫೇಸ್‌ಬುಕ್, ಟ್ವಿಟರ್ ಖಾತೆಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಇತರೆ ವಿಡಿಯೋ ಪ್ಲಾಟ್‌ಫಾರಮ್‌ಗಳಿಗೆ ಅಪ್‌ಲೋಡ್ ಮಾಡಿದ್ದಾರೆ. ಈ ಕೆಳಗಿನ ಸ್ಕ್ರೀನ್‌ಸಾಟ್‌ಗಳನ್ನು ಗಮನಿಸಿದರೆ, ‘ಪ್ಲಾನ್‌ಡೆಮಿಕ್’ ವೈರಲ್ ಆದ ಬಗೆಯನ್ನು ಗಮನಿಸಬಹುದು.



ಏನಿದು ಪ್ಲಾನ್‌ಡೆಮಿಕ್?
ಪ್ಲಾನ್‌ಡೆಮಿಕ್ ಕರೋನಾ ಕೋವಿಡ್ 19 ವೈರಸ್ ಒಂದು ವ್ಯವಸ್ಥಿತಿ ಪಿತೂರಿ ಎಂದು ಹೇಳ ಹೊರಟಿರುವ 25 ನಿಮಿಷಗಳ ಸಾಕ್ಷ್ಯಚಿತ್ರವೊಂದರ ಆಯ್ದ ಭಾಗ. ಉಳಿದ ಭಾಗ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈಗ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಡಾ. ಜ್ಯೂಡಿ ಮಿಕೊವಿಟ್ಜ್ ಎಂಬುವವರ ಸಂದರ್ಶನವಿದೆ. ಜ್ಯೂಡಿ ವಿಟ್ಮೋರ್ ಪೀಟರ್ಸನ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೊ ಇಮ್ಯೂನ್ ಡಿಸೀಸ್ ನಲ್ಲಿ ಸಂಶೋಧನಾ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದವರು.
ಲಸಿಕೆಗಳ ವಿರುದ್ಧ ಹೋರಾಡುತ್ತಾ ಬಂದಿರುವುದಾಗಿ ಹೇಳಿಕೊಂಡಿರುವ ಈಕೆ ಚಿತ್ರ ನಿರ್ಮಿಸಿರುವ ಮಿಕ್ಕಿ ವಿಲ್ಕಿಸ್ ಅವರೊಂದಿಗೆ ಮಾತನಾಡುತ್ತಾ, ಜನವರಿ 2020ರಲ್ಲಿ ಡಿಪಾರ್ಮೆಂಟ್ ಆಫ್ ಡಿಫೆನ್ಸ್ ಪರ್ಸನೆಲ್‌ನಲ್ಲಿ ಜ್ವರದ ಲಸಿಕೆಯೊಂದರ ಸಂಶೋಧನೆ ಕುರಿತು ಪ್ರಸ್ತಾಪಿಸಿದ್ದು, ಅದರಲ್ಲಿ ನಿರ್ದಿಷ್ಟ ಜ್ವರಕ್ಕಾಗಿರೂಪಿಸಿದ ಲಸಿಕೆ ಕೋವಿಡ್19 ಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಮುಂದುವರೆದು, ಕೋವಿಡ್ 19ಗೆ ಯಾವುದೇ ಲಸಿಕೆಯ ಅಗತ್ಯವಿಲ್ಲ. ಲಸಿಕೆ ಕುರಿತು ನಡೆಯುತ್ತಿರುವ ಚರ್ಚೆಯೆಲ್ಲಾ, ವೈದ್ಯಕೀಯ ಸಂಶೋಧಕರು ತಮ್ಮ ಲಾಭಕ್ಕಾಗಿ ನಡೆಸುತ್ತಿರುವ ಸ್ಪರ್ಧೆ ಎಂದಿದ್ದಾರೆ. ಸದೃಢವಾದ ರೋಗ ನಿರೋಧಕ ಶಕ್ತಿ ಇದ್ದರೆ ಕೋವಿಡ್ 19ರ ವಿರುದ್ಧ ಹೋರಾಡಬಹುದು. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳು ಇದಕ್ಕೆ ತದ್ವಿರುದ್ಧವಾಗಿವೆ ಎಂದಿದ್ದಾರೆ ಡಾ. ಜ್ಯೂಡಿ.
ಮನೆಯಲ್ಲೇ ಇರುವುದು ಒಂದು ರೀತಿಯಲ್ಲಿ ನಿರೋಧಕ ಶಕ್ತಿ ಕುಗ್ಗಿಸುತ್ತದೆ. ಅಲ್ಲದೆ ಮಾಸ್ಕ್‌ಗಳನ್ನು ಹೆಚ್ಚು ತೊಡುಗುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
17 ಲಕ್ಷ ಬಾರಿ ವೀಕ್ಷಣೆಗೊಳಪಟ್ಟಿರುವ, 1.40 ಬಾರಿ ಶೇರ್ ಆಗಿರುವ ಈ ಸಾಕ್ಷ್ಯಚಿತ್ರದಲ್ಲಿ ಪ್ರಸ್ತಾಪವಾದ ವಿಚಾರಗಳಿಗೆ ಸೂಕ್ತ ಆಧಾರವನ್ನು ನೀಡಿಲ್ಲ ಎಂಬ ಟೀಕೆ ತಜ್ಞರಿಂದ ವ್ಯಕ್ತವಾಯಿತು.
ತಪ್ಪು ಮಾಹಿತಿಯೇ?
ಕರೋನಾ ಕೋವಿಡ್ 19 ವೈರಸ್ ವುಹಾನ್‌ನಿಂದ ಹರಡಲಾರಂಭಿಸಿತು ಎಂಬುದು ಎಲ್ಲರಿಗೂ ತಿಳಿದಿದೆ. ಇದುವರೆಗೂ ಮೊದಲು ಸೋಂಕಿಗೆ ಗುರಿಯಾದ ವ್ಯಕ್ತಿ ಪತ್ತೆಯಾಗಿಲ್ಲ. ಹೇಗೆ ಹರಡಲಾರಂಭಿಸಿತು ಎಂಬುದು ತಿಳಿದಿಲ್ಲ. ಚೀನಾ ಇದನ್ನು ಸೃಷ್ಟಿಸಿತು ಎಂಬ ಆರೋಪ ಅಮೆರಿಕದ್ದು. ಚೀನಾದ ಪ್ರಯೋಗಾಲಾಯದಿಂದ ಸೋರಿಕೆಯಾಯಿತು ಎಂದು ಕೆಲ ವರದಿಗಳು ಹೇಳಿದವು.
ಇವುಗಳ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಇಲ್ಲ. ಖಚಿತ ಪಡಿಸುವ ಆಧಾರಗಳೂ ಇಲ್ಲ. ಇಂಥ ಗೊಂದಲಗಳ ನಡುವೆ ‘ಪ್ಲಾನ್‌ಡೆಮಿಕ್’ ಹೊರಬಿದ್ದಿದ್ದು, ಮತ್ತಷ್ಟು ಆತಂಕ ಮತ್ತು ಅನುಮಾನಗಳನ್ನು ತೀವ್ರಗೊಳಿಸಿದೆ.
ಆದರೆ ಡಾ. ಜ್ಯೂಡಿ ಅವರ ವಾದವನ್ನು ಅನೇಕ ತಜ್ಞರು ಅಲ್ಲಗಳೆದಿದ್ದಾರೆ ಎಂದು ಹಲವು ಸುದ್ದಿಗಳಲ್ಲಿ ವರದಿಯಾಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಸಾಕಷ್ಟು ಗಮನ ಸೆಳೆದಿರುವ ಜಾನ್‌ಹಾಪ್‌ಕಿನ್ಸ್ ಸಂಸ್ಥೆಯಿಂದ ಪಿಎಚ್‌ಡಿ ಪಡೆದಿರುವ ಡಾ. ಆಲಿಸನ್ ರೌರ್ಕ್, ಏಂಜೆಲಾ ಮಾಟರ್, ಜೇಮ್ಸ್ ಡಿ ರೀಟ್ವೆಲ್ಡ್, ತಮ್ಮ ಫೇಸ್‌ಬುಕ್ ಪೋಸ್ಟ್‌ಗಳಲ್ಲಿ ಜ್ಯೂಡಿ ಅವರ ವಾದಗಳನ್ನು ಸಂಪೂರ್ಣ ಅಲ್ಲಗಳೆದಿರುವುದು ವರದಿಯಾಗಿದೆ. ಸೋಂಕಿನ ಈ ಆತಂಕ ಕಾಲದಲ್ಲಿ ಜನರಿಗೆ ಭಾವನಾತ್ಮಕ ಮತ್ತು ಮಾನಸಿಕ ಅಗತ್ಯಗಳನ್ನು ಪೂರೈಸುವ ಈ ವಿಡಿಯೋಗಳು ನಂಬುವಂತೆ ಮಾಡುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಕಾರಣ ನೀಡಿ ಯೂಟ್ಯೂಬ್ ಕೂಡ ಈ ವಿಡಿಯೋವನ್ನು ಡಿಲೀಟ್ ಮಾಡಿದ್ದು, ಉಳಿದ ಸಾಮಾಜಿಕ ಜಾಲತಾಣಗಳೂ ಡಿಲೀಟ್ ಮಾಡಿವೆ.