ಫೇಸ್‌ಬುಕ್ ಮತ್ತು ಗೂಗಲ್ ನಡುವೆ ಸ್ಪರ್ಧೆ ಬಿರುಸಾಗಿಯೇ ಇದೆ. ಫೇಸ್‌ಬುಕ್ ತನ್ನ ಆ್ಯಪ್‌ಗಳಲ್ಲಿ ಮಾರ್ಕೆಟ್ ಸೃಷ್ಟಿಸುತ್ತಿರುವ ಗೂಗಲ್ ಸುಮ್ಮನಿದ್ದೀತೆ? ಅತ್ಯಂತ ಜನಪ್ರಿಯ ವಿಡಿಯೋ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಅನ್ನು ಶಾಪಿಂಗ್ ತಾಣವಾಗಿಸಲು ಹೊರಟಿದೆ!

ಗೂಗಲ್ ಸಂಸ್ಥೆಯ ಅತ್ಯಂತ ಜನಪ್ರಿಯವಾದ ವಿಡಿಯೋ ತಾಣ ಯೂಟ್ಯೂಬ್ ಅನ್ನು ಆನ್‌ಲೈನ್ ಶಾಪಿಂಗ್ ತಾಣವನ್ನಾಗಿ ರೂಪಿಸುವತ್ತ ಸಿದ್ಧತೆ ನಡೆಸಿದೆ!
ಬ್ಲೂಮ್‌ವರ್ಗ್ ವರದಿಯಂತೆ, ಈಗಾಗಲೇ ಈ ಹೊಸ ಸೇವೆಯ ಪರೀಕ್ಷೆಗಳು ನಡೆದಿವೆ. ಯೂಟ್ಯೂಬ್ ಇತಿಹಾಸದಲ್ಲಿ ಇದೊಂದು ದೊಡ್ಡ ರೂಪಾಂತರವಾಗಿದ್ದು, ಅಮೆಜಾನ್ ಕಂಪನಿಗೂ ಇದು ದೊಡ್ಡ ಪ್ರತಿಸ್ಪರ್ಧೆ ಒಡ್ಡಬಹುದು ಎಂದು ವರದಿ ವಿಶ್ಲೇಷಿಸಿದೆ.
200 ಕೋಟಿ ಜಾಗತಿಕ ಬಳಕೆದಾರರನ್ನು, 26 ಕೋಟಿ ಭಾರತೀಯ ಬಳಕೆದಾರರನ್ನು ಹೊಂದಿರುವ ಯೂಟ್ಯೂಬ್ ವಿಭಿನ್ನ ಸಾಧ್ಯತೆಗಳಿರುವ ತಾಣ. ಎಆರ್, ವಿಆರ್ ತಂತ್ರಜ್ಞಾನಗಳನ್ನು ಸುಲಭವಾಗಿ ಬಳಸಿ ಬಳಕೆದಾರರನ್ನು ಆಕರ್ಷಿಸಬಲ್ಲದು. ಹಾಗಾಗಿ ಶಾಪಿಂಗ್ ಸೇವೆ ಭರ್ಜರಿ ಯಶ ಕಾಣಬಹುದು ಎನ್ನಲಾಗುತ್ತಿದೆ.
ಈಗಾಗಲೇ ಯೂಟ್ಯೂಬ್ ತನ್ನ ಕ್ರಿಯೇಟರ್‌ಗಳಿಗೆ (ಅಂದರೆ ವಿಡಿಯೋ ಸಿದ್ಧಪಡಿಸಿ ತಮ್ಮದೇ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡುವವರಿಗೆ ) ತಮ್ಮ ವಿಡಿಯೋದಲ್ಲಿ ಬಳಸಲಾಗಿರುವ ವಸ್ತುಗಳಿಗೆ ಆಯಾ ಕಂಪನಿಗಳನ್ನು ವಿಡಿಯೋದಲ್ಲಿ ಟ್ಯಾಗ್ ಮಾಡುವಂತೆ ಸೂಚಿಸಿದೆ. ಈ ಮಾಹಿತಿ ಗೂಗಲ್‌ನ ಅನಾಲಿಟಿಕ್ಸ್‌ಗೆ ಮತ್ತು ಯೂಟ್ಯೂಬ್‌ನ ಶಾಪಿಂಗ್ ಟೂಲ್‌ಗೆ ರವಾನೆಯಾಗುತ್ತದೆ. ಈ ಮೂಲಕ ವಿಡಿಯೋ ವೀಕ್ಷಿಸುವವರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳನ್ನು ಯೂಟ್ಯೂಬ್ ಅನ್ವೇಷಿಸುತ್ತಿದೆ.
ಆದರೆ ವಿಡಿಯೋ ಕ್ರಿಯೇಟರ್‌ಗಳಿಗೆ ತಮ್ಮ ವಿಡಿಯೋದಲ್ಲಿ ಯಾವ ಉತ್ಪನ್ನ ಕಾಣಿಸಬೇಕು ಎಂದು ನಿಯಂತ್ರಿಸುವ ಅವಕಾಶವನ್ನು ನೀಡಿದೆ. ಆದೆ ಇದು ಪರೀಕ್ಷಾರ್ಥವಾಗಿರುವುದರಿಂದ ಯಾವುದೇ ಸಂದರ್ಭದಲ್ಲೂ ಯೂಟ್ಯೂಬ್/ಗೂಗಲ್ ಇದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು.
ಇಷ್ಟೇ ಅಲ್ಲ, ಶಾಪಿಫೈ ಜೊತೆಗೆ ಕೈಜೋಡಿಸುವ ಉದ್ದೇಶವೂ ಇದೆ ಎನ್ನಲಾಗುತ್ತಿದೆ.
ಈ ಹೊಸ ಸೇವೆ ಯೂಟ್ಯೂಬ್ ಕ್ರಿಯೇಟರ್‌ಗಳಿಗೆ ಇನ್ನಷ್ಟು ಹಣ ಸಂಪಾದಿಸುವ ಅವಕಾಶವನ್ನಂತು ಸೃಷ್ಟಿಸುತ್ತಿದೆ. ಹಾಗಾಗಿ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟದಲ್ಲಿ ಯೂಟ್ಯೂಬ್‌ನ ಪಾಲು ಎಷ್ಟು ಎಂಬುದು ಇನ್ನು ಸ್ಪಷ್ಟವಾಗಿಲ್ಲ.